ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್ ಭರ್ತಿ: ಹೆಚ್ಚುವರಿ ನೀರು ಹೊರಕ್ಕೆ

ಅವಳಿ ನಗರದ ಜನರ ಕುಡಿಯುವ ನೀರಿನ ಬವಣೆ ನೀಗಿಸಿದ ತುಂಗಭದ್ರೆ
Published 31 ಮೇ 2024, 5:02 IST
Last Updated 31 ಮೇ 2024, 5:02 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ಹಮ್ಮಿಗಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್ ಬುಧವಾರ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಬ್ಯಾರೇಜಿನ ಕೆಳಭಾಗದ ತುಂಗಭದ್ರಾ ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಸೇರಿದಂತೆ ಶಿವಮೊಗ್ಗ ಹಾಗೂ ಮಲೆನಾಡಿನ ಹಲವು ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಬರಿದಾಗಿದ್ದ ಶಿಂಗಟಾಲೂರ ಏತ ನೀರಾವರಿಯ ಬ್ಯಾರೇಜ್ ಹಾಗೂ ತುಂಗಭದ್ರಾ ನದಿಗೆ ಪುನಃ ಜೀವಕಳೆ ಬಂದಿದೆ. ಮೇ 28ರಂದು 1,942 ಕ್ಯುಸೆಕ್, ಮೇ 29ರಂದು 1,483 ಕ್ಯುಸೆಕ್ ಹಾಗೂ ಮೇ 30ರಂದು 918 ಕ್ಯುಸೆಕ್ ನೀರು ಬ್ಯಾರೇಜ್‌ಗೆ ಹರಿದು ಬಂದಿದೆ.

ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಸಕಾಲದಲ್ಲಿ ಹಾಗೂ ಸಮರ್ಪಕವಾಗಿ ಮಳೆಯಾಗದ್ದರಿಂದ ತುಂಗಭದ್ರಾ ನದಿ ಹಾಗೂ ಶಿಂಗಟಾಲೂರ ಬ್ಯಾರೇಜ್ ಮೇ ಮೊದಲ ವಾರದಲ್ಲಿಯೇ ಸಂಪೂರ್ಣವಾಗಿ ಬರಿದಾಗಿದ್ದವು.

ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ಮುಂಡರಗಿ, ಲಕ್ಷ್ಮೇಶ್ವರ, ಶಿರಹಟ್ಟಿ ಮತ್ತಿತರ ಭಾಗಗಳಿಗೆ ಹಮ್ಮಿಗಿ ಬ್ಯಾರೇಜ್‌ನಿಂದ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ವರ್ಷ ಬ್ಯಾರೇಜ್‌ನಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದರಿಂದ ಜಿಲ್ಲಾಡಳಿತವು ಜನತೆಗೆ ನೀರು ಪೂರೈಸಲು ಹರಸಾಹಸಪಟ್ಟಿತ್ತು.

ಮೇ ಎರಡನೇ ವಾರದಲ್ಲಿ ಬ್ಯಾರೇಜ್‌ನ ನೀರೆಲ್ಲ ಖಾಲಿಯಾಗಿತ್ತು. ಅನ್ಯದಾರಿ ಕಾಣದೆ ಅಧಿಕಾರಿಗಳು ಬ್ಯಾರೇಜಿನ ಡೆಡ್ ಸ್ಟೋರೇಜ್ ನೀರು ಬಳಸಿಕೊಳ್ಳತೊಡಗಿದರು. ತಲಾ ಹತ್ತು ಅಶ್ವಶಕ್ತಿಯ 13 ಪಂಪ್ ಸೆಟ್ ಮೂಲಕ ಡೆಡ್ ಸ್ಟೋರೇಜ್ ನೀರನ್ನು ಕಾಲುವೆಯ ಮೂಲಕ ಜಾಕ್‌ವೆಲ್‌ಗೆ ಹರಿಸಿ ಜನತೆಗೆ ನೀರು ಪೂರೈಸಲಾಗಿತ್ತು.

ಕಾನೂನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ತಹಶೀಲ್ದಾರ್ ಧನಂಜಯ ಮಾಲಗತ್ತಿ ನಿಯಮಿತವಾಗಿ ಬ್ಯಾರೇಜ್‌ಗೆ ಭೇಟಿ ನೀಡಿ ನೀರಿನ ಪ್ರಮಾಣ ಪರಿಶೀಲಿಸಿದ್ದರು.

ಸದ್ಯ ಬ್ಯಾರೇಜ್‌ನಲ್ಲಿ 1.7 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಹೆಚ್ಚುವರಿ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ. ನೀರು ನದಿ ಪಾತ್ರಕ್ಕೆ ಹರಿಯುತ್ತಿರುವುದರಿಂದ ತಾಲ್ಲೂಕಿನ ಶಿಂಗಟಾಲೂರ, ಕೊರ್ಲಹಳ್ಳಿ, ಕಕ್ಕೂರು, ಹೆಸರೂರು ಮೊದಲಾದ ಗ್ರಾಮಗಳ ಮುಂದೆ ಸಂಪೂರ್ಣವಾಗಿ ಬರಿದಾಗಿದ್ದ ತುಂಗಭದ್ರಾ ನದಿಯಲ್ಲಿ ಈಗ ನೀರು ಹರಿಯುತ್ತಿದೆ. ನದಿಯಲ್ಲಿ ನೀರು ಹರಿಯುತ್ತಿರುವುದನ್ನು ಕಂಡು ನದಿ ದಂಡೆಯ ಗ್ರಾಮಸ್ಥರು ಹರ್ಷಗೊಂಡಿದ್ದಾರೆ.

ಹಮ್ಮಿಗಿ ಬ್ಯಾರೇಜ್‌ನಲ್ಲಿ ಸಾಕಷ್ಟು ಹೊಸನೀರು ಸಂಗ್ರಹವಾಗಿದ್ದು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಮಳೆಯಾದಂತೆಲ್ಲ ಹೆಚ್ಚು ನೀರು ಹರಿದು ಬರಲಿದೆ
–ಐ.ಪ್ರಕಾಶ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿ ಮುಂಡರಗಿ
ಗ್ರಾಮ ಸ್ಥಳಾಂತರಕ್ಕೆ ಆಗ್ರಹ
ಸದ್ಯ ಬ್ಯಾರೇಜ್‌ಗೆ ಸಾಕಷ್ಟು ಪ್ರಮಾಣದ ನೀರು ಹರಿದು ಬರುತ್ತಿದ್ದು ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದರೆ ಇನ್ನೂ ದೊಡ್ಡ ಪ್ರಮಾಣದ ಹೊಸನೀರು ಹರಿದು ಬರಲಿದೆ. ಬ್ಯಾರೇಜ್‌ನಲ್ಲಿ ಗರಿಷ್ಠ 3.12 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಿಕೊಳ್ಳಬಹುದಾಗಿದೆ. ಆದರೆ ಬ್ಯಾರೇಜ್‌ನ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ತಾಲ್ಲೂಕಿನ ಗುಮ್ಮಗೋಳ ಬಿದರಳ್ಳಿ ಹಾಗೂ ವಿಠಲಾಪೂರ ಗ್ರಾಮಗಳನ್ನು ಸಮರ್ಪಕವಾಗಿ ಸ್ಥಳಾಂತರಿಸದೇ ಇರುವುದರಿಂದ ಸದ್ಯ ಬ್ಯಾರೇಜ್‌ನಲ್ಲಿ ಕೇವಲ 1.9 ಟಿಎಂಸಿ ಅಡಿ ನೀರನ್ನು ಮಾತ್ರ ಸಂಗ್ರಹಿಸಿಕೊಳ್ಳಬಹುದಾಗಿದೆ. ಮುಳುಗಡೆ ಗ್ರಾಮಗಳನ್ನು ಸ್ಥಳಾಂತರಿಸಿದರೆ ವರ್ಷದುದ್ದಕ್ಕೂ ಜಿಲ್ಲೆಯ ಜನತೆಯ ಶುದ್ಧ ಕುಡಿಯುವ ನೀರಿನ ಬವಣೆ ಸುಲಭವಾಗಿ ನಿವಾರಿಸಬಹುದಾಗಿದೆ. ಜತೆಗೆ ಜಿಲ್ಲೆಯ ರೈತರ ಜಮೀನುಗಳಿಗೂ ಬೇಸಿಗೆಯಲ್ಲಿ ನೀರು ಹರಿಸಬಹುದಾಗಿದೆ. ಮುಳುಗಡೆ ಗ್ರಾಮಗಳನ್ನು ಸ್ಥಳಾಂತರಿಸಬೇಕು ಎಂದು ತಾಲ್ಲೂಕಿನ ರೈತ ಮುಖಂಡರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT