ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಶೀಘ್ರ: ಬಸವರಾಜ ಬೊಮ್ಮಾಯಿ

ಗದಗ ಜಿಲ್ಲೆ ಜನರಿಂದ ಅಭಿನಂದನೆ ಸ್ವೀಕರಿಸಿದ ಸಂಸದ ಬಸವರಾಜ ಬೊಮ್ಮಾಯಿ
Published 30 ಜೂನ್ 2024, 15:47 IST
Last Updated 30 ಜೂನ್ 2024, 15:47 IST
ಅಕ್ಷರ ಗಾತ್ರ

ಗದಗ: ‘ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರದಲ್ಲಿ ಅಧಿಕಾರ ದಾಹ ಬಿಟ್ಟರೆ ಅಭಿವೃದ್ಧಿ ಶೂನ್ಯವಾಗಿದೆ. ಯಾರು ಸಿಎಂ ಆಗಬೇಕು, ಎಷ್ಟು ದಿನ ಆಗಬೇಕು ಎಂಬ ಚರ್ಚೆ ಜೋರಾಗಿದೆ. ಸರ್ಕಾರದ ವಿರುದ್ಧ ಜನಾಂದೋಲನ ಶೀಘ್ರದಲ್ಲಿ ಆರಂಭವಾಗಲಿದೆ. ಅಲ್ಲದೇ ಬರುವ ವರ್ಷದಲ್ಲಿ ವಿಧಾನಸಭೆ ಚುನಾವಣೆ ಬರಲಿದ್ದು, ಮತ್ತೇ ಬಿಜೆಪಿ ಬಾವುಟ ಹಾರಲಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಗದಗ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸ್ಥಾನಗಳನ್ನು ಕಡಿಮೆ ಮಾಡಿಕೊಳ್ಳುತ್ತ ಬರುತ್ತಿದೆ. ಸದ್ಯ ಅವರ ಪರಿಸ್ಥಿತಿ ಹೇಗಿದೆ ಎಂದರೆ, ಪಕ್ಕದ ಮನೆಯಲ್ಲಿ ಮಗು ಹುಟ್ಟಿದರೆ ಇವರು ಸಿಹಿ ಹಂಚಿ ಸಂತಸ ಪಡುವಂತಿದೆ’ ಎಂದು ವ್ಯಂಗ್ಯವಾಡಿದರು.

‘ಕಾಂಗ್ರೆಸ್ ಪಕ್ಷವು 2014, 2019, 2024ರ ಲೋಕಸಭೆ ಚುನಾವಣೆಗಳಲ್ಲಿ ಗೆದ್ದ ಸ್ಥಾನಗಳನ್ನು ಕೂಡಿಸಿದರೆ ಈ ಬಾರಿ ಬಿಜೆಪಿ ಗೆದ್ದಿರುವ ಸ್ಥಾನಗಳಿಗೂ ಸಮನಾಗುವುದಿಲ್ಲ’ ಎಂದು ಲೇವಡಿ ಮಾಡಿದರು.

‘ಭಾರತದ ಸಂವಿಧಾನವನ್ನು ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿರುವುದು ಕಾಂಗ್ರೆಸ್‌. ವಿಚ್ಛೇದನದ ನಂತರ ಒಬ್ಬ ಬಡ ಮುಸ್ಲಿಂ ಮಹಿಳೆಗೆ ಸಿಗುವ ಜೀವನಾಂಶ ನೀಡುವ ಕೋರ್ಟ್ ಆದೇಶವನ್ನು ರದ್ದು ಮಾಡಲು ದೇಶದ ಸಂವಿಧಾನವನ್ನೇ ತಿದ್ದಿದರು. ರಾಜ್ಯದಲ್ಲಿ ಮೀಸಲಾತಿ ಹೆಚ್ಚಿಸಿರುವುದು ಬಿಜೆಪಿ ಪಕ್ಷ. ಈ ಪಕ್ಷ ಹೇಗೆ ಮೀಸಲಾತಿ ಕಸಿದುಕೊಳ್ಳಲು ಸಾಧ್ಯ?’ ಎಂದು ಪ್ರಶ್ನಿಸಿದರು.

‘ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಬಿಜೆಪಿ ಹೆಚ್ಚಿಸಿ ಆ ವರ್ಗದ ಜನರ ಹಿತ ಕಾಪಾಡಿದೆˌ ಈಗ ಬಂದಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಘೋಷಣೆ ಮಾಡಿ ಬೆಲೆ ಏರಿಕೆ ಮಾಡುವ ಮೂಲಕ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಸಿದುಕೊಳ್ಳುತ್ತಿದೆ. ಪೆಟ್ರೋಲ್, ಡೀಸೆಲ್, ಬಟ್ಟೆ, ದಿನಸಿ ವಸ್ತುಗಳು ಸೇರಿದಂತೆ ಎಲ್ಲವನ್ನು ಹೆಚ್ಚಿಸಿ ಬಡವರ ಮೇಲೆ ಹೊರೆ ಹಾಕಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ರೈತರಿಗೆ ಪರಿಹಾರ ನೀಡಲಿಲ್ಲ. ಇದರಿಂದ ರೈತರ ಆಕ್ರೋಶಕ್ಕೆ ರಾಜ್ಯ ಸರ್ಕಾರ ಗುರಿಯಾಗಿದೆ’ ಎಂದು ಹೇಳಿದರು.

ನರಗುಂದ ಶಾಸಕ ಸಿ.ಸಿ.ಪಾಟೀಲ ಮಾತನಾಡಿ, ‘ಈ ಚುನಾವಣೆ ನಮಗೆ ನೋವು– ನಲಿವು ಎರಡನ್ನೂ ನೀಡಿದೆ. ಬಸವರಾಜ ಬೊಮ್ಮಾಯಿ ಅವರ ಗೆಲುವು ನಲಿವು ನೀಡಿದರೆ; ಕೇಂದ್ರದಲ್ಲಿ ನಿರೀಕ್ಷಿಸಿದಷ್ಟು ಸ್ಥಾನಗಳು ಬರೆದಿರುವುದು ನೋವು ತರಿಸಿದೆ’ ಎಂದರು.

‘ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗದಗ ಕ್ಷೇತ್ರದ ಮತದಾರರು 16 ಸಾವಿರಕ್ಕೂ ಹೆಚ್ಚು ಅಂತರದ ಮತಗಳನ್ನು ನೀಡಿದ್ದಾರೆ. ಗ್ರಾಮೀಣದ ಭಾಗದಲ್ಲಿಯೂ ಉತ್ತಮ ಮತಗಳನ್ನು ಪಡೆದಿದ್ದೇವೆ. ಹಿಂದಿನ ಚುನಾವಣೆಯಲ್ಲಿ ಆದ ತಪ್ಪುಗಳಿಂದಾದ ಅನುಭವದಿಂದ ನಿಗಾವಹಿಸಿ ಚುನಾವಣೆ ಎದುರಿಸಿದ್ದರಿಂದ ಗೆಲುವು ಸಾಧ್ಯವಾಯಿತು’ ಎಂದರು.

ಶಾಸಕ ಡಾ. ಚಂದ್ರು ಲಮಾಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ಹಿರಿಯ ನಾಯಕರಾದ ಕಾಂತಿಲಾಲ್ ಬನ್ಸಾಲಿ, ಎಂ.ಎಸ್.ಕರಿಗೌಡ್ರ, ರವಿ ದಂಡಿನ, ಶೇಖರ ಸಜ್ಜನರ, ಶಂಕ್ರಣ್ಣ ಇಂಡಿ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ನಿರ್ಮಲ ಕೊಳ್ಳಿ, ಮೋಹನ ಮಾಳಶೆಟ್ಟಿ, ಸಿದ್ದಣ್ಣ ಪಲ್ಲೇದ, ಸಂತೋಷ ಅಕ್ಕಿ, ಅನಿಲ ಅಬ್ಬಿಗೇರಿ ಇದ್ದರು.

ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಆರತಿ ಬೆಳಗಿ ಸ್ವಾಗತಿಸಿದ ಮಹಿಳಾ ಕಾರ್ಯಕರ್ತೆಯರು
ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಆರತಿ ಬೆಳಗಿ ಸ್ವಾಗತಿಸಿದ ಮಹಿಳಾ ಕಾರ್ಯಕರ್ತೆಯರು
ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಸವಾಲಾಗಿ ತೆಗೆದುಕೊಂಡಿದ್ದು ಮುಂಬರುವ ದಿನಗಳಲ್ಲಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ. ಗದಗ ನಗರವನ್ನು ಔದ್ಯೋಗಿಕ ನಗರವನ್ನು ಮಾಡಲು ಕ್ರಮ ಕೈಗೊಳ್ಳುತ್ತೇನೆ
ಬಸವರಾಜ ಬೊಮ್ಮಾಯಿ ಸಂಸದ
ಕಳಸ ಬಂಡೂರಿ ಹೋರಾಟದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಪಾಲು ಇರುವುದರಿಂದ ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆ
ಸಿ.ಸಿ.ಪಾಟೀಲ ಶಾಸಕ
ಬೊಮ್ಮಾಯಿಗೆ ಅದ್ಧೂರಿ ಸ್ವಾಗತ
ಗದಗ ಜಿಲ್ಲಾ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಆರತಿ ಬೆಳಗಿ ಹಣೆಗೆ ತಿಲಕವಿಟ್ಟು ಹೂಮಳೆ ಸುರಿಸಿ ಸ್ವಾಗತ ಕೋರಿದರು. ಗದಗ ವಿಧಾನಸಭಾ ಕ್ಷೇತ್ರದಿಂದ 16 ಸಾವಿರ ಮತಗಳ ಲೀಡ್ ನೀಡಿ ನನ್ನನ್ನು ಸಂಸದನನ್ನಾಗಿಸಿದ ಗದಗ ಜಿಲ್ಲೆಯ ಸಮಸ್ತ ತಾಯಂದಿರು ರೈತರು ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸುವೆ. ನೀವು ನೀಡಿದ ಅಮೂಲ್ಯವಾದ ಮತಕ್ಕೆ ಗೌರವ ತರುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ‘ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗಾಗಿ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದ್ದಾರೆ. ಎಲ್ಲರನ್ನೂ ಒಂದುಗೂಡಿಸಿ ಮುನ್ನಡೆಯುವುದು ಸುಲಭವಾದ ಮಾತಲ್ಲ. ಆದರೆ ನರೇಂದ್ರ ಮೋದಿ ದೃಢಸಂಕಲ್ಪದೊಂದಿಗೆ ದಿಟ್ಟ ಹೆಜ್ಜೆನಿಟ್ಟಿದ್ದಾರೆ’ ಎಂದು  ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT