ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಸೂತ್ರಗಳ ಅಭಿವೃದ್ಧಿ ಬಜೆಟ್‌: ಸಂಕನೂರ

Last Updated 6 ಮಾರ್ಚ್ 2022, 3:56 IST
ಅಕ್ಷರ ಗಾತ್ರ

ಗದಗ: ಶಿಕ್ಷಣ ಕೃಷಿ, ಗ್ರಾಮೀಣ ಆರೋಗ್ಯ, ನೀರಾವರಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಮಹಿಳಾ ಪದವೀಧರರಿಗೆ ಮತ್ತು ಪದವೀಧರರಿಗೆ ಉದ್ಯೋಗಕ್ಕೆ ಒತ್ತು ಕೊಟ್ಟು ಮಂಡಿಸಿದ ಬಜೆಟ್ ಇದಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಹೇಳಿದ್ದಾರೆ.

ಗದಗ ಜಿಲ್ಲೆಗೆ ಬೈ-ಪಾಸ್ ರಸ್ತೆ ನಿರ್ಮಾಣ, ಗದಗ-ವಾಡಿ, ಗದಗ-ಯಲವಗಿ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಅನುದಾನ ನಿಗದಿಪಡಿಸಲಾಗಿದೆ. ಅದರಂತೆ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗೆ ₹1,000 ಕೋಟಿ ನಿಗದಿಪಡಿಸಿರುವುದಲ್ಲದೇ ಹಾವೇರಿ, ಧಾರವಾಡ ಮತ್ತು ಕಾರವಾರ ಜಿಲ್ಲೆಗಳಿಗೂ ಕೂಡಾ ಹಲವಾರು ನೂತನ ಯೋಜನೆಗಳನ್ನು ಘೋಷಣೆ ಮಾಡಿರುವುದು ಸಂತೋಷದ ಸಂಗತಿ ಹೇಳಿದ್ದಾರೆ.

‌ಕೇಂದ್ರ ಮಾದರಿಯ ವೇತನ: ಹಕ್ಕಿಗಾಗಿ ಹೋರಾಟ ಅನಿವಾರ್ಯ

ಗದಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಚೊಚ್ಚಲ ಮುಂಗಡಪತ್ರದಲ್ಲಿ ಕೇಂದ್ರ ಮಾದರಿಯ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡುವ ಬಗ್ಗೆ ಹೇಳದಿರುವುದು ರಾಜ್ಯದ ಸರ್ಕಾರಿ ನೌಕರರಲ್ಲಿ ಬೇಸರ ಮತ್ತು ಅಸಮಾಧಾನ ಮೂಡಿಸಿದೆ ಎಂದು ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರವಿ ಗುಂಜೀಕರ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲಿಯೂ ಈ ಬಗ್ಗೆ ಚರ್ಚೆಯಾಗದಿದ್ದರೇ ಅನಿವಾರ್ಯವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನೇತೃತ್ವದಲ್ಲಿ ಬಹು ದಿನದ ಬೇಡಿಕೆಯಾಗಿರುವ ಕೇಂದ್ರ ಮಾದರಿಯ ವೇತನಕ್ಕಾಗಿ ಪಡೆಯುವ ಹಕ್ಕಿಗಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಾರಾಯಣಗುರು ವಸತಿ ಶಾಲೆ ನಿರ್ಮಾಣ; ಈಡಿಗ ಸಮಾಜ ಸ್ವಾಗತ

ಗದಗ: ಈಡಿಗ ಸಮಾಜದ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಮರಣಾರ್ಥ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ನಾರಾಯಣಗುರು ವಸತಿ ಶಾಲೆ ನಿರ್ಮಿಸುವ ಕುರಿತು ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್‍ನಲ್ಲಿ ಆದ್ಯತೆ ನೀಡಿರುವುದನ್ನು ಗದಗ ಜಿಲ್ಲಾ ಆರ್ಯ ಈಡಿಗ ಸಮಾಜ ಸ್ವಾಗತಿಸಿದೆ.

ಅದೇರೀತಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ ಇತರೆ ಹಿಂದುಳಿದ ಸಮಾಜಗಳ ಜೊತೆಯಲ್ಲಿ ಈಡಿಗ ಸಮಾಜ ಅಭಿವೃದ್ಧಿಗಾಗಿ ₹400 ಕೋಟಿ ಕಾಯ್ದಿರಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಬೊಮ್ಮನಹಳ್ಳಿ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ್ದಾರೆ.

ನೇಕಾರರಿಗೆ ಆದ್ಯತೆ ಹರ್ಷದಾಯಕ: ರಮೇಶ ಹತ್ತಿಕಾಳ

ಗದಗ: ಕೈಮಗ್ಗ ನೇಕಾರರಿಗೆ ಸಾಮಾನ್ಯ ಯೋಜನೆ ಅಡಿಯಲ್ಲಿ ₹2,000ದಿಂದ ₹5,000 ಗಳಿಗೆ ಹೆಚ್ಚಿಸಿದಕ್ಕೆ ಜಿಲ್ಲಾ ನೇಕಾರ ಸಮಾಜದ ಮುಖಂಡ ರಮೇಶ ಹತ್ತಿಕಾಳ ಅಭಿನಂದನೆ ಸಲ್ಲಿಸಿದ್ದಾರೆ.

ಅಲ್ಲದೇ ನೇಕಾರರ ಬಂಡವಾಳ ಕೊರೆತೆ ನೀಗಿಸಲು ರಾಜ್ಯದ ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳ ಮೂಲಕ ಪಡೆಯುವ ಸಾಲದ ಮೇಲೆ ಶೇ 8ರಷ್ಟು ಬಡ್ಡಿ ಸಹಾಯಧನ ಘೋಷಣೆ, ನೇಕಾರರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಯಿಸಲು ವಿದ್ಯಾರ್ಥಿವೇತನ ನೀಡಲು ಘೋಷಿಸಿರುವುದಕ್ಕೆ ಅವರು ನೇಕಾರರ ಕ್ರಿಯಾ ಸಮಿತಿ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಜವಳಿ ಖಾತೆ ಸಚಿವ ಶಂಕರ ಪಾಟೀಲ ಮುನ್ನೇನಕೊಪ್ಪ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಕೇವಲ ಅಂಕೆ ಸಂಖ್ಯೆಗಳ ಬಜೆಟ್: ವಿಶ್ವನಾಥ ಖಾನಾಪೂರ

ಗದಗ: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಂಡಿಸಿರುವ ಮುಂಗಡಪತ್ರ ರಾಜ್ಯದ ಜನರಿಗೆ ನಿರಾಸೆ ಮೂಡಿಸಿದೆ ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪುರ ತಿಳಿಸಿದ್ದಾರೆ.

ಪೆಟ್ರೋಲ್, ಡೀಸೆಲ್‌ ಹಾಗೂ ಅಡುಗೆ ಅನಿಲ ದರ ಹೆಚ್ಚಾಗಿ ಜನರು ಜೀವನ ನಡೆಸುವುದು ಕಷ್ಟಕರವಾಗಿದೆ. ಇವುಗಳ ಮೇಲಿನ ತೆರಿಗೆ ಕಡಿಮೆ ಮಾಡಿ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವುದನ್ನು ತಪ‍್ಪಿಸಬೇಕಿತ್ತು. ಆದರೆ ಈ ಮುಂಗಡಪತ್ರ ಎಲ್ಲಾ ವರ್ಗದ ಜನರ ಕಷ್ಟದ ಹೊರೆ ಇಳಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.

ಗದಗ ಜಿಲ್ಲೆಗೆ ಈ ಮುಂಗಡಪತ್ರದಲ್ಲಿ ಏನು ವಿಶೇಷ ಯೋಜನೆಗಳು ಪ್ರಕಟ ಆಗಿಲ್ಲ. 55 ಕಿ.ಮೀ. ಉದ್ದದ ಗದಗ ಯಲವಿಗಿ ನೂತನ ಮಾರ್ಗಕ್ಕೆ ₹640 ಕೋಟಿ ಬಿಡುಗಡೆ, ಮಹಾದಾಯಿ ಯೋಜನೆಗೆ ₹1000 ಕೋಟಿ ಮೀಸಲಿಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಆರೋಗ್ಯ ವಾಹಿನಿ ಯೋಜನೆ ಅಡಿಯಲ್ಲಿ ಸಂಚಾರ ಕ್ಲಿನಿಕ್‍ಗಳನ್ನು ರಾಜ್ಯದೆಲ್ಲೆಡೆ ವಿಸ್ತರಣೆ ಆಗಬೇಕಿತ್ತು. ಒಟ್ಟಾರೆ ಈ ಮುಂಗಡಪತ್ರ ಬೆಂಗಳೂರು ನಗರದ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದ್ದು, ರಾಜ್ಯದ ಜನರಿಗೆ ನಿರಾಸೆ ತರಿಸಿದೆ ಎಂದು ಹೇಳಿದ್ದಾರೆ.

ಯುವಕರಿಗೆ ಆದ್ಯತೆ: ಶಿವು ಹಿರೇಮನಿಪಾಟೀಲ

ಗದಗ: 15 ಸಾವಿರ ಶಿಕ್ಷಕರ ನೇಮಕ, ಗದಗ-ಯಲವಗಿ ನೂತನ ರೇಲ್ವೆ ಮಾರ್ಗಕ್ಕೆ ಅನುದಾನ, ವಸತಿ ರಹಿತ ಮೀನುಗಾರರಿಗೆ ಐದು ಸಾವಿರ ಮನೆಗಳು, ಹೊಸದಾಗಿ 5 ಲಕ್ಷ ಮನೆಗಳ ನಿರ್ಮಾಣ, ಕಳಸಾ-ಬಂಡೂರಿ ಯೋಜನೆಗಳಿಗೆ ಸಾವಿರಾರು ಕೋಟಿ ಮೀಸಲು, ರೈತ ಶಕ್ತಿ ಹೊಸ ಯೋಜನೆ ಜಾರಿ, ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಉದ್ಯೋಗ, ಆರೋಗ್ಯ, ಸೇವಾ ವಲಯದ ಅಭಿವೃದ್ಧಿಗೆ ಮನ್ನಣೆ ನೀಡಿರುವದು ಸ್ವಾಗತಾರ್ಹ ಎಂದು ಬಿಜೆಪಿ ಯುವ ಮೋರ್ಚಾ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜಗೌಡ ಹಿರೇಮನಿಪಾಟೀಲ ಹೇಳಿದ್ದಾರೆ.

ಸರ್ವರಿಗೂ ಸಮಬಾಳು ಬಜೆಟ್: ಎಂ.ಎಂ. ಹಿರೇಮಠ

ಗದಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ 2022-23ನೇ ಸಾಲಿನ ಮುಂಗಡ ಪತ್ರವುರಾಜ್ಯದ ಸಮಗ್ರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ, ದುರ್ಬಲವರ್ಗದವರ ರಕ್ಷಣೆ ಹಾಗೂ ಏಳಿಗೆಗೆ ಒತ್ತು ನೀಡಿದೆ ಎಂದು ಬಿಜೆಪಿ ನಾಯಕ ಹಾಗೂ ವಕೀಲ ಎಂ.ಎಂ.ಹಿರೇಮಠ ಹೇಳಿದ್ದಾರೆ.

ಸ್ವಾಭಿಮಾನದ ಬದುಕು ನಡೆಸಲು ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಕಾರ್ಯಕ್ರಮಗಳನ್ನು ರೂಪಿಸುವುದು ಹಾಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಮುಖಾಂತರ ರಾಜ್ಯದ ಬಜೆಟ್ ಎಲ್ಲರಿಗೂ ಸಮಪಾಲು ಹಾಗೂ ಸಮಭಾಗ ನೀಡುವ ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.

ಸಮಗ್ರ ಅಭಿವೃದ್ಧಿಗೆ ಪೂರಕ ಬಜೆಟ್ : ಮೋಹನ ಮಾಳಶೆಟ್ಟಿ

ಗದಗ: ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕ ಚಿಂತನೆಯ ಬಜೆಟ್‍ನ್ನು ಮಂಡಿಸಿದ್ದಾರೆ ಎಂದು ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ ತಿಳಿಸಿದ್ದಾರೆ.

ವಿಶೇಷವಾಗಿ ಗದಗ ಜಿಲ್ಲೆಯ ಭಾಗದ ಬಹುದಿನದ ಬೇಡಿಕೆಯಾದ ಗದಗ ಯಲವಿಗಿ ನೂತನ ರೈಲು ಮಾರ್ಗದ ಯೋಜನೆಗೆ ಕರ್ನಾಟಕ ಸರ್ಕಾರದ ಸಹಭಾಗಿತ್ವಕ್ಕೆ ಒಪ್ಪಿಗೆ ಹಾಗೂ ಗದಗ ನಗರದ ವರ್ತುಲ ರಸ್ತೆ(ರಿಂಗ್ ರೋಡ್)ಗೆ ಒಪ್ಪಿಗೆ ನೀಡಿರುವದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT