ಗುರುವಾರ , ಜೂನ್ 30, 2022
23 °C
ಕಾಮಗಾರಿ ಮುಕ್ತಾಯ ವಿಳಂಬವಾದರೆ ಕ್ರಮ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಎಚ್ಚರಿಕೆ

ನಿರಂತರ ನೀರು ಯೋಜನೆ ಶೀಘ್ರ ಪೂರ್ಣ: ಬೈರತಿ ಬಸವರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಗದಗ-ಬೆಟಗೇರಿ ನಗರದಲ್ಲಿ ನಿರಂತರ ಕುಡಿಯುವ ನೀರು ಯೋಜನೆ ಕಾಮಗಾರಿ ಈವರೆಗೂ ಮುಗಿದಿಲ್ಲ. ಮೇ 15ರೊಳಗಾಗಿ ಇನ್ನುಳಿದ 7 ವಲಯಗಳ ಕಾಮಗಾರಿ ಮುಕ್ತಾಯಗೊಳಿಸಬೇಕು ಎಂದು ಸೂಚಿಸಲಾಗಿದೆ.
ಇನ್ನೆರಡು ತಿಂಗಳಲ್ಲಿ 24X7 ಕುಡಿಯುವ ನೀರು ಯೋಜನೆ ಕಾಮಗಾರಿ ಸಂಪೂರ್ಣಗೊಳ್ಳಲಿದೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಭರವಸೆ ನೀಡಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯ ರೋಣ, ಗಜೇಂದ್ರ
ಗಡ, ನರೇಗಲ್ ಮೂರು ಪಟ್ಟಣಗಳಿಗೆ ಕುಡಿಯುವ ನೀರು ಕಲ್ಪಿಸುವ ಕಾಮಗಾರಿ ನಿಧಾನಗತಿಯಲ್ಲಿದ್ದು, ಅಧಿಕಾರಿಗಳ ಜತೆಗೆ ಸಭೆ ನಡೆಸಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

‘ರಾಜ್ಯದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು ಎಂಬುದು ಸರ್ಕಾರದ ಸಂಕಲ್ಪ. ಹೀಗಾಗಿ ಅಧಿಕಾರಗಳಿಗೆ ಗಡುವು ನೀಡಲಾಗಿದ್ದು, ಗಜೇಂದ್ರಗಡ, ರೋಣ ಹಾಗೂ ನರೇಗಲ್ ಪಟ್ಟಣಗಳಲ್ಲಿ ನೀರು ಪೂರೈಸುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ಕಾಮಗಾರಿ ಮುಕ್ತಾಯಗೊಳಿಸುವಲ್ಲಿ ವಿಳಂಬವಾದರೆ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಅವಳಿ ನಗರದಲ್ಲಿ ಒಳಚರಂಡಿ ಅವ್ಯವಸ್ಥೆ ಇದೆ ಎಂಬುದು ಗಮನಕ್ಕೆ ಬಂದಿದ್ದು, ಶೀಘ್ರ ಸರಿಪಡಿಸಲಾಗುವುದು. ಯುಜಿಡಿ ನಿರ್ವಹಣೆ ವೆಚ್ಚವನ್ನು ನಗರಸಭೆಯಿಂದ ಪಾವತಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದ ಜನರಿಗೆ ಕುಡಿಯುವ ನೀರಿನ ಇನ್ನು 15,000 ಮನೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಬೇಕಿದ್ದು, ಮೇ 27 ರೊಳಗಾಗಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಹೊಸ ಬಡಾವಣೆ ನಿರ್ಮಾಣ, ರಸ್ತೆ ಅಭಿವೃದ್ಧಿ, ಬಾವಿಗಳ ಪುನಶ್ಚೇತನ, ಉದ್ಯಾನ ಅಭಿವೃದ್ಧಿ ಸೇರಿ ಹಲವು ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದರು.

ಗದಗ-ಬೆಟಗೇರಿ ವಕಾರ ಸಾಲು ಕುರಿತು ಪ್ರತಿಕ್ರಿಯಿಸಿದ ಅವರು, ‘ಅವಳಿ ನಗರದ ವಕಾರ ಸಾಲು ಕುರಿತ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಕೋರ್ಟ್ ತೀರ್ಪಿನ ಬಳಿಕ ತೀರ್ಮಾನಿಸಲಾಗುವುದು. ಗದಗ ನಗರ ಸಭೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ₹40 ಕೋಟಿ ಬಿಡುಗಡೆ ಮಾಡಿದೆ’ ಎಂದು ಹೇಳಿದರು.

ಶಾಸಕ ಕಳಕಪ್ಪ ಬಂಡಿ, ಸಂಸದ ಶಿವಕುಮಾರ ಉದಾಸಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷಕಾಂತಿಲಾಲ್ ಬನ್ಸಾಲಿ, ಕೆಯುಐಡಿಎಫ್‌ಸಿ ಎಂಡಿ ಎಂ.ದೀಪಾ ಚೋಳನ್, ಕೆಯುಡಬ್ಲ್ಯುಎಸ್ ಮತ್ತು ಡಿಬಿ ಎಂಡಿ ಕೆ.ಪಿ.ಮೋಹನ್ ರಾಜ್, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಇದ್ದರು.

ಸಂಪುಟ ವಿಸ್ತರಣೆ; ಮುಖ್ಯಮಂತ್ರಿ ಪರಮಾಧಿಕಾರ

‘ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಸಿಎಂ, ರಾಷ್ಟ್ರಮಟ್ಟದ ಹಿರಿಯ ನಾಯಕರ ತೀರ್ಮಾನದಂತೆ ನಡೆಯಲಿದೆ’ ಎಂದು ಸಚಿವ ಬೈರತಿ ಬಸವರಾಜು ಹೇಳಿದರು.

‘ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯಾವ ಪಕ್ಷದವರೇ ಆದರೂ ತಪ್ಪು ಮಾಡಿದ್ದರೆ ಅವರು ಶಿಕ್ಷೆ ಅನುಭವಿಸಲೇಬೇಕು’ ಎಂದು ಹೇಳಿದರು.

‘ದಿಂಗಾಲೇಶ್ವರ ಶ್ರೀಗಳು ಆಧಾರವನ್ನಿಟ್ಟುಕೊಂಡು ಆರೋಪ ಮಾಡಬೇಕು. ಸುಖಾಸುಮ್ಮನೆ ಆರೋಪ ಮಾಡುವುದರಿಂದ ಅವರ ಗೌರವಕ್ಕೆ ಧಕ್ಕೆಯಾಗುತ್ತದೆ. ಕಮಿಷನ್‌ ಯಾರಿಗೆ ಕೊಟ್ಟಿದ್ದೀರಿ, ಯಾವ ರೀತಿ ಕೊಟ್ಟಿದ್ದೀರಿ ಎಂಬ ದಾಖಲೆಗಳನ್ನು ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು