ಬುಧವಾರ, ಮಾರ್ಚ್ 22, 2023
19 °C
ಸಂಭಾವ್ಯ ಕೋವಿಡ್‌–19 ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧ- ಸಚಿವ ಸಿ.ಸಿ.ಪಾಟೀಲ

ತೀವ್ರ ಅಪೌಷ್ಟಿಕ ಮಕ್ಕಳಿಗೆ ‘ಲಸಿಕೆ’ ಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 243 ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುವ ಇನ್‌ಫ್ಲ್ಯುಯೆಂಜಾ ಲಸಿಕೆಯನ್ನು ಸ್ವಂತ ಹಣದಿಂದ ಖರೀದಿಸಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕೋವಿಡ್‌–19 ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಪ್ರತಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳನ್ನು ಈಗಾಗಲೇ ಗುರುತಿಸಿ ಅವರನ್ನು ಆರೈಕೆ ಕೇಂದ್ರದಲ್ಲಿ ಕಾಳಜಿ ಮಾಡಲಾಗುತ್ತಿದೆ. ಇದರ ಜತೆಗೆ ಆ ಎಲ್ಲ ಮಕ್ಕಳಿಗೆ ಇನ್‌ಫ್ಲ್ಯುಯೆಂಜಾ ಲಸಿಕೆ ಹಾಕಿಸಲು ಕ್ರಮವಹಿಸಲಾಗಿದೆ. ಪ್ರತಿ ಲಸಿಕೆಗೆ ₹1 ಸಾವಿರ ದರವಿದ್ದು, ಮೊಮ್ಮಗಳ ಜನ್ಮದಿನದ ಅಂಗವಾಗಿ ಒಟ್ಟು 300 ಲಸಿಕೆಗಳನ್ನು ಖರೀದಿಸಿ ಜಿಲ್ಲಾಡಳಿತಕ್ಕೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.

‘ಸಂಭಾವ್ಯ ಕೋವಿಡ್‌–19 ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧವಾಗಿದೆ. ಇದಕ್ಕಾಗಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಒಟ್ಟು 750 ಬೆಡ್‌ಗಳನ್ನು ಮೀಸಲಿಡಲಾಗಿದೆ. ಇವುಗಳಲ್ಲಿ 474 ಆಮ್ಲಜನಕ ಸಹಿತ ಹಾಸಿಗೆಗಳು, 126 ವೆಂಟಿಲೇಟರ್‌ ಬೆಡ್‌ಗಳು ಹಾಗೂ 150 ಸಾಮಾನ್ಯ ಹಾಸಿಗೆಗಳು ಇವೆ’ ಎಂದು ತಿಳಿಸಿದರು.

‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಪಿ.ಎಸ್‌.ಹರ್ಷ ಅವರಿಗೆ ಮನವಿ ಮಾಡಲಾಗಿ ಅವರ ನೆರವಿನಿಂದ ಜಿಲ್ಲೆಗೆ 60 ಆಮ್ಲಜನಕ ಸಾಂದ್ರಕಗಳು ದೊರೆತಿವೆ. ಅವುಗಳಲ್ಲಿ 50 ಆಮ್ಲಜನಕ ಸಾಂದ್ರಕಗಳನ್ನು ಗದುಗಿಗೆ ಹಾಗೂ ಉಳಿದವುಗಳನ್ನು ನರಗುಂದ ಆಸ್ಪತ್ರೆಗೆ ನೀಡಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು 266 ಆಮ್ಲಜನಕ ಸಾಂದ್ರಕಗಳು ಲಭ್ಯವಿದ್ದು, ಚಿಕಿತ್ಸೆ ಅನುಕೂಲ ಕಲ್ಪಿಸಲಿವೆ. ಆಮ್ಲಜನಕ ಉತ್ಪಾದನಾ ಘಟಕಗಳ ಕೆಲಸ ‍ಪ್ರಗತಿಯಲ್ಲಿದ್ದು, ಇವು ಆಗಸ್ಟ್‌ 15ರ ಒಳಗೆ ಉದ್ಘಾಟನೆಗೊಳ್ಳಲಿವೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ 60 ಆಮ್ಲಜನಕ ಸಾಂದ್ರಕಗಳು, 300 ಇನ್‌ಫ್ಲುಯೆಂಜಾ ಲಸಿಕೆಗಳನ್ನು ಜಿಲ್ಲಾಡಳಿತಕ್ಕೆ ಸಾಂಕೇತಿಕವಾಗಿ ಹಸ್ತಾಂತರಿಸಿದರು. ನಂತರ ಬೆಳೆವಿಮೆ ಹಾಗೂ ಬೆಳೆ ಸಮೀಕ್ಷೆ ಕುರಿತು ಕೃಷಿ ಇಲಾಖೆಯಿಂದ ಹೊರತಂದಿರುವ ಕರಪತ್ರಗಳನ್ನು ಬಿಡುಗಡೆ ಮಾಡಿದರು.

ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು, ಜಿಲ್ಲಾ ಪಂಚಾಯ್ತಿ ಸಿಇಒ ಭರತ್ ಎಸ್., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್ ಎನ್., ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‌ ಕುಮಾರ್ ಎಂ., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

₹96 ಕೋಟಿ ವಿಮಾ ಪರಿಹಾರ

‘ಕರ್ನಾಟಕ ರೈತ ಸುರಕ್ಷಾ- ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಯ ₹96.02 ಕೋಟಿ ಜಿಲ್ಲೆಗೆ ಮಂಜೂರಾಗಿದೆ’ ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

‘ಜಿಲ್ಲೆಯ 52,406 ರೈತರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಪರಿಹಾರ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು