ಶನಿವಾರ, ಡಿಸೆಂಬರ್ 4, 2021
20 °C
ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಭೇಟಿ: ಹಾನಿ ಪರಿಶೀಲನೆ

ಗದಗ:ಸಂತ್ರಸ್ತರ ಕಷ್ಟ ಆಲಿಸಿದ ಕೇಂದ್ರ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಮಲಪ್ರಭಾ ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರು, ವಾಸನ ಮತ್ತು ಲಖಮಾಪುರ ಗ್ರಾಮಗಳಿಗೆ ಕೇಂದ್ರ ಅಧ್ಯಯನ ತಂಡ ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿತು.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ವಿ.ಪಿ.ರಾಜವೇದಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿ ಅಧೀಕ್ಷಕ ಎಂಜಿನಿಯರ್‌ ಸದಾನಂದ ಬಾಬು ಪ್ರವಾಹದಿಂದಾದ ಬೆಳೆ ಹಾಗೂ ರಸ್ತೆ ಹಾನಿ ಕುರಿತಾಗಿ ಅಧಿಕಾರಿಗಳು ಮತ್ತು ಸಂತ್ರಸ್ತರಿಂದ ಮಾಹಿತಿ ಸಂಗ್ರಹಿಸಿದರು. ರೈತರು ಹಾಗೂ ಗ್ರಾಮಸ್ಥರ ಸಮಸ್ಯೆಗಳನ್ನು ಸಾವಧಾನದಿಂದ ಆಲಿಸಿದ ಅಧಿಕಾರಿಗಳ ತಂಡ, ಪರಿಹಾರ ಒದಗಿಸಿಕೊಡುವ ಭರವಸೆ ನೀಡಿತು.

ಕೇಂದ್ರ ಅಧ್ಯಯನ ತಂಡವು ಮೊದಲಿಗೆ ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮಕ್ಕೆ ಭೇಟಿ ನೀಡಿ, ಹಾನಿಗೊಳಗಾದ ರಾಷ್ಟ್ರೀಯ ಹೆದ್ದಾರಿಯನ್ನು ಪರಿಶೀಲಿಸಿತು. ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಎಂಜಿನಿಯರ್‌ ಬಳಿ ಅವರು ಚರ್ಚಿಸಿದರು.

ನಂತರ ಅಧಿಕಾರಿಗಳು ಕೊಣ್ಣೂರಿನ ಕೃಷಿಕ ಮಹಿಳೆ ಅಕ್ಕಮಹಾದೇವಿ ಬಂಡೋಜಿ, ಆರ್.ಆರ್ ಸೋಮಾಪುರ, ಭರತೇಶ ಬೂಗಾರ ಅವರ ಜಮೀನು ವೀಕ್ಷಿಸಿದರು. ಈ ಮೂವರು ರೈತರು ಬೆಳೆದಿದ್ದ ಹೆಸರು, ಪೇರಲೆ ಹಾಗೂ ಹತ್ತಿ ಬೆಳೆ ಪ್ರವಾಹದಿಂದಾಗಿ ನಾಶವಾಗಿತ್ತು. 

ಈ ರೈತರ ಅಹವಾಲುಗಳನ್ನು ಆಲಿಸಿದ ಅಧಿಕಾರಿಗಳು, ಬೆಳೆವಿಮೆ ಹಾಗೂ ಕೃಷಿಗಾಗಿ ಮಾಡಿದ ವೆಚ್ಚದ ಮಾಹಿತಿ ಪಡೆದುಕೊಂಡರು. ಹಾನಿಗೊಳಗಾದ ಜಮೀನಿನ ರೈತರಿಗೆ ಪರಿಹಾರ ಒದಗಿಸುವ ಕುರಿತು ಭರವಸೆ ನೀಡಿದರು.

ಅಲ್ಲಿಂದ ವಾಸನ ಗ್ರಾಮಕ್ಕೆ ಭೇಟಿ ನೀಡಿ, ಮಲಪ್ರಭಾ ನದಿ ನೀರಿನಿಂದಾಗಿ ಜಲಾವೃತಗೊಂಡಿರುವ ಕೃಷಿ ಭೂಮಿಯನ್ನು ವೀಕ್ಷಿಸಿದರು. ಅಲ್ಲಿನ ರೈತರ ಸಮಸ್ಯೆಗಳನ್ನು ಆಲಿಸಿದರು.

‘ಕೊಣ್ಣೂರು ಸೇತುವೆಯಿಂದಾಗಿ ಇಷ್ಟೆಲ್ಲಾ ಸಮಸ್ಯೆಗಳು ಎದುರಾಗಿವೆ. ಅದನ್ನು ವೈಜ್ಞಾನಿಕ ರೀತಿಯಲ್ಲಿ ಮರು ವಿನ್ಯಾಸಗೊಳಿಸಬೇಕು. ನದಿಯಲ್ಲಿನ ಹೂಳು ತೆಗೆಸಬೇಕು’ ಎಂದು ವಾಸನ ಗ್ರಾಮಸ್ಥರು ಅಧಿಕಾರಿಗಳ ಬಳಿ ಮನವಿ ಮಾಡಿದರು.

ಆಮೇಲೆ ಲಕಮಾಪುರ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ, ಪ್ರವಾಹದಿಂದ ಹಾನಿಗೊಳಗಾಗದ ಮನೆ ಹಾಗೂ ರೈತರ ಜಮೀನಿಗೆ ಭೇಟಿ ನೀಡಿದರು.

‘ಗ್ರಾಮದ ಸ್ಥಳಾಂತರಕ್ಕೆ ಸ್ಥಳ ಗುರುತಿಸಲಾಗಿದೆ. ಗ್ರಾಮಸ್ಥರು ಒಪ್ಪಿದರೆ ಶೀಘ್ರವೇ ಸ್ಥಳಾಂತರ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ ಸುಂದರೇಶ್ ಬಾಬು ತಂಡಕ್ಕೆ ತಿಳಿಸಿದರು.

ಮನೆ ಹಾಗೂ ಜಮೀನು ಸೇರಿದಂತೆ ಗ್ರಾಮದ ಮೂಲಸೌಕರ್ಯಗಳಿಗೆ ಸಾಕಷ್ಟು ಹಾನಿಯಾಗಿದ್ದು, ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್ ಎನ್., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು