ಗದಗ: ನಗರ ನಡುಗಿಸಿದ ಚಳಿ...!

7
ಹೊಸ ವರ್ಷದ ಮೊದಲ ದಿನವೇ ತಾಪಮಾನದಲ್ಲಿ ದಾಖಲೆ ಕುಸಿತ

ಗದಗ: ನಗರ ನಡುಗಿಸಿದ ಚಳಿ...!

Published:
Updated:
Prajavani

ಗದಗ: ಮುದ್ರಣನಗರಿಯ ಜನತೆ ಕಳೆದೊಂದು ವಾರದಿಂದ ಚಳಿಗೆ ತತ್ತರಿಸಿದ್ದಾರೆ.ಹೊಸ ವರ್ಷದ ಮೊದಲ ದಿನವೇ ಅಂದರೆ ಜ.1ರಂದು ನಗರದಲ್ಲಿ 4 ವರ್ಷಗಳಲ್ಲೇ ಅತ್ಯಂತ ಕಡಿಮೆ ತಾಪಮಾನ ಅಂದರೆ 11.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. 2011ರ ಜ.11ರಂದು ಜಿಲ್ಲೆಯಲ್ಲಿ 9.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿತ್ತು.ಇದೇ ಇದುವರೆಗಿನ ಸಾರ್ವಕಾಲಿಕ ದಾಖಲೆ.

ಜನವರಿ ತಿಂಗಳಲ್ಲಿ ಜಿಲ್ಲೆಯ ಕನಿಷ್ಠ ಉಷ್ಣಾಂಶ ಸರಾಸರಿ 13ರಿಂದ 15 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ. ಆದರೆ, ಸದ್ಯ ಈ ಸರಾಸರಿಗಿಂತಲೂ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಇದೆ. ಈ ಬಾರಿ ಡಿಸೆಂಬರ್‌ ಕೊನೆಯ ವಾರದ ನಂತರ ಚಳಿಯಲ್ಲಿ ದಿಢೀರನೆ ಏರಿಕೆಯಾಗಿದೆ. ಇದು ಜನ ಜೀವನದ ಮೇಲೂ ಪರಿಣಾಮ ಬೀರಿದೆ.ಚಳಿಯಿಂದ ನಗರವಾಸಿಗಳ ದಿನಚರಿ ವಿಳಂಬವಾಗುತ್ತಿದೆ.ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿದೆ.

ಬುಧವಾರ ನಗರದಲ್ಲಿ ಗರಿಷ್ಠ 29 ಡಿಗ್ರಿ ಮತ್ತು ಕನಿಷ‌್ಠ 12 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗಿದೆ. ಇನ್ನೊಂದು ವಾರದಲ್ಲಿ ಉಷ್ಣಾಂಶದಲ್ಲಿ ಇನ್ನಷ್ಟು ಇಳಿಕೆ ಕಂಡುಬರಲಿದೆ ಎಂದು ಹವಾಮಾನ ಇಲಾಖೆಯ ವೆಬ್‌ಸೈಟ್‌ ಮನ್ಸೂಚನೆ ನೀಡಿದೆ.

ತೀವ್ರ ಚಳಿ ಮತ್ತು ಶೀತಗಾಳಿಯಿಂದಾಗಿ ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ಬೆಳಿಗ್ಗೆ 6ರಿಂದ 9 ಗಂಟೆಯವರೆಗೆ ಮತ್ತು ಸಂಜೆ 7 ಗಂಟೆಯ ನಂತರ ಮಾರುಕಟ್ಟೆಯಲ್ಲಿ ಜನರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಿದೆ.ಇದರಿಂದ ವ್ಯಾಪಾರವೂ ಕಡಿಮೆಯಾಗಿದೆ.ಹಗಲು ವೇಳೆಯಲ್ಲೂ ತಣ್ಣನೆಯ ವಾತಾವರಣ ಸೃಷ್ಟಿಯಾಗಿದ್ದು, ಜನರು ಸ್ವೆಟರ್‌ ಧರಿಸಿಕೊಂಡು ಓಡಾಡುವುದು ಸಾಮಾನ್ಯವಾಗಿದೆ.

ಶೀತಗಾಳಿ ಬೀಸುತ್ತಿರುವುದರಿಂದ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವರ ಸಂಖ್ಯೆಯೂ ಇಳಿದಿದೆ. ಅಯ್ಯಪ್ಪ ಭಕ್ತರು ಚುಮು, ಚುಮು ಚಳಿಯಲ್ಲೇ ಚುರುಕಾಗಿ ಓಡಾಡುತ್ತಾ ಪ್ರಾತಃಕಾಲ ಪೂಜೆಗೆ ಸಿದ್ಧಗೊಳ್ಳುತ್ತಿರುವ ಮತ್ತು ಅಲೆಮಾರಿಗಳು ರಸ್ತೆ ಪಕ್ಕದಲ್ಲೇ ಬೆಂಕಿ ಹಾಕಿಕೊಂಡು ಮೈ ಕಾಯಿಸಿಕೊಳ್ಳುವ ದೃಶ್ಯಗಳು ನಸುಕಿನಲ್ಲಿ ನಗರದಲ್ಲಿ ಸಾಮಾನ್ಯವಾಗಿದೆ.

ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದ್ದು, ಶಾಲೆಗೆ ಹೊರಟ ಪುಟಾಣಿಗಳು ಚಳಿಯಿಂದ ರಕ್ಷಿಸಿಕೊಳ್ಳಲು, ಸ್ವೆಟರ್‌ ಧರಿಸಿ, ತಲೆಗೆ ಉಣ್ಣೆಯ ಟೋಪಿ ಹಾಕಿಕೊಳ್ಳುತ್ತಿದ್ದಾರೆ.

ಜನವರಿ ತಿಂಗಳ ಜಿಲ್ಲೆಯ ಕನಿಷ್ಠ ಉಷ್ಣಾಂಶ
2018; 13.0
2017; 13.2
2016; 13.9
2015; 10.1
2014; 13.4
2013; 12.0
2012; 11.0
2011; 09.6

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !