ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಟ್‌ ಖರೀದಿ: ತನಿಖೆಗೆ ಆಗ್ರಹ

ಪೋಸ್ಟ್‌ ಕಾರ್ಡ್‌ ಚಳವಳಿ, ಕಲ್ಯಾಣ ಮಂಡಳಿಗೆ ಮುತ್ತಿಗೆಗೆ ನಿರ್ಧಾರ
Last Updated 27 ಜುಲೈ 2021, 4:24 IST
ಅಕ್ಷರ ಗಾತ್ರ

ಗದಗ: ‘ಕಟ್ಟಡ ಕಾರ್ಮಿಕ ಮಂಡಳಿಯ ಆಹಾರ ಕಿಟ್‌ ಶಾಸಕರಿಗೆ ನೀಡಿದ್ದೇಕೆ? ಎಂಬ ಘೋಷಣೆಯೊಂದಿಗೆ ಆಹಾರ ಕಿಟ್, ಟೂಲ್ ಕಿಟ್, ಸೇಫ್ಟಿ ಕಿಟ್ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಜುಲೈ 27ರಂದು ರಾಜ್ಯದೆಲ್ಲೆಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ ತಿಳಿಸಿದರು.

ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಾರ್ಮಿಕರ ಹಣದಲ್ಲಿ ಸಾಮಗ್ರಿಗಳನ್ನು ಖರೀದಿಸಿ ತಯಾರಿಸಿರುವ ಕಿಟ್‍ಗಳಲ್ಲಿ ಅವ್ಯವಹಾರ ನಡೆದಿದೆ. ಸರ್ಕಾರ ಪ್ರತಿ ದಿನಸಿ ಕಿಟ್‌ನ ಬೆಲೆ ₹938 ಎಂದು ಹೇಳಿದೆ. ಆದರೆ, ನಾವು ಮಾರುಕಟ್ಟೆಯಲ್ಲಿ ಸಿಗುವ ಉತ್ತಮ ಗುಣಮಟ್ಟದ ಧಾನ್ಯಗಳ ಬೆಲೆ ಜತೆಗೆ ತುಲನೆ ಮಾಡಿ ನೋಡಿದಾಗ ಅದರ ನಿಜವಾದ ಬೆಲೆ ₹667 ಮಾತ್ರ. ಇದರಿಂದಾಗಿ ಒಂದು ಕಿಟ್‌ನಲ್ಲಿ ಸರಾಸರಿ ₹250ರಿಂದ ₹300 ಕಮಿಷನ್‌ ವ್ಯವಹಾರ ನಡೆದಿದೆ. ಇಂತಹ 20 ಲಕ್ಷ ಕಿಟ್‌ಗಳನ್ನು ಸರ್ಕಾರ ಹಂಚುತ್ತಿದ್ದು, ಇದರಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ’ ಎಂದು ಅವರು ಆರೋಪ ಮಾಡಿದರು.

‘ನ್ಯಾಯಾಲಯವು ವಲಸೆ ಕಾರ್ಮಿಕರಿಗೆ ಕಿಟ್‌ ವಿತರಿಸುವಂತೆ ಸ್ಪಷ್ಟವಾಗಿ ಹೇಳಿದೆ. ಆದರೆ, ಶಾಸಕರ ಬೆಂಬಲಿಗರಿಗೆ ಕಿಟ್‌ ವಿತರಿಸಲಾಗಿದೆ. ಶಾಸಕರಿಗೂ ಕಲ್ಯಾಣ ಮಂಡಳಿಗೂ ಸಂಬಂಧ ಇಲ್ಲ. ಆದರೂ ಕಿಟ್‌ ವಿತರಣೆ ಜವಾಬ್ದಾರಿಯನ್ನು ಶಾಸಕರಿಗೆ ವಹಿಸಿದ್ದು ಅಕ್ಷಮ್ಯ ಅಪರಾಧ’ ಎಂದು ಕಿಡಿಕಾರಿದರು.

‘ಇವೆಲ್ಲವುಗಳ ವಿರುದ್ಧ ಒಂದು ತಿಂಗಳು ನಿರಂತರ ಪ್ರಭಟನೆ ನಡೆಸಲಾಗುವುದು. ಒಂದು ಲಕ್ಷ ಅಂಚೆ ಕಾರ್ಡ್‌ಗಳು ಹಾಗೂ ಇ–ಮೇಲ್ ಮೂಲಕವಾಗಿ ಸಿಎಂ, ಕಾರ್ಮಿಕ ಮಂತ್ರಿ, ಕಾರ್ಮಿಕ ಮಂಡಳಿಗೆ ಕಾರ್ಮಿಕರಿಂದ ಪತ್ರ ಬರೆದು ಎಚ್ಚರಿಸಲಾಗುವುದು. ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಕಾನೂನು ಉಲ್ಲಂಘನೆ ಕುರಿತು ದೂರು ಸಲ್ಲಿಸಲಾಗುವುದು. ನಂತರ ಸೆ.1ರಂದು 10 ಸಾವಿರ ಕಾರ್ಮಿಕರನ್ನು ಸೇರಿಸಿ ಕಾರ್ಮಿಕ ಕಲ್ಯಾಣ ಮಂಡಳಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಹೇಳಿದರು.

‘ನೋಟು ಅಮಾನ್ಯೀಕರಣ, ಜಿಎಸ್‌ಟಿಯಿಂದಾಗಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಕುಂಠಿತಗೊಂಡಿದ್ದು, ಇದರಿಂದಾಗಿ ಕಾರ್ಮಿಕರಿಗೆ ತೊಂದರೆಯಾಗಿದೆ. ಆದ್ದರಿಂದ ಪ್ರತಿ ಕಾರ್ಮಿಕನ ಕುಟುಂಬಕ್ಕೆ ₹3 ಸಾವಿರದ ಬದಲು ಮುಂದಿನ ಮೂರು ತಿಂಗಳು ₹10 ಸಾವಿರ ನೀಡಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಮಾರುತಿ ಚಿಟಗಿ, ಯೇಸುಜಾನ್ ಶೌರಿ, ಜೆ.ಐ.ಹಣಗಿ, ಪೀರು ರಾಠೋಡ, ಎಂ.ಐ. ನವಲೂರ, ಎಂ.ಬಿ.ಬನ್ನೂರ, ರುದ್ರಪ್ಪ ರಾಠೋಡ, ರೇವಣಪ್ಪ ರಾಠೋಡಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT