ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರಿಗೆ ಪಾಸಿಟಿವ್‌; ಹೆಚ್ಚುತ್ತಿರುವ ಆತಂಕ

ಸೋಂಕಿನ ಮೂಲ ಇನ್ನೂ ನಿಗೂಢ: ನಿಯಂತ್ರಣಕ್ಕೆ ಜಿಲ್ಲಾಡಳಿತ ಅವಿರತ ಶ್ರಮ
Last Updated 28 ಏಪ್ರಿಲ್ 2020, 13:10 IST
ಅಕ್ಷರ ಗಾತ್ರ

ಗದಗ: ನಗರದ 75 ವರ್ಷದ ವೃದ್ಧರೊಬ್ಬರಿಗೆ (ಪಿ-514)ಮಂಗಳವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ 5 ಪಾಸಿಟಿವ್‌ ಪ್ರಕರಣಗಳು ವರದಿಯಾದಂತಾಗಿವೆ.

ಕಳೆದ 8 ದಿನಗಳಿಂದ ಯಾವುದೇ ಹೊಸ ಪಾಸಿಟಿವ್‌ ಪ್ರಕರಣಗಳು ಕಂಡುಬರದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನರು ತುಸು ನಿರಾಳರಾಗಿದ್ದರು. ಇನ್ನೇನು ಲಾಕ್‌ಡೌನ್‌ ಮುಗಿಯುತ್ತಾ ಬಂದಿದ್ದು, ಹೊಸ ಪ್ರಕರಣಗಳು ಕಂಡುಬರದ ಹಿನ್ನೆಲೆಯಲ್ಲಿ ಜಿಲ್ಲೆಯು ‘ಹಳದಿ’ ವಲಯದಿಂದ ‘ಹಸಿರು ವಲಯ’ಕ್ಕೆ ಸೇರ್ಪಡೆಯಾಗಬಹುದು, ಮೇ 3ರ ನಂತರ, ನಿರ್ಬಂಧಗಳು ಇನ್ನಷ್ಟು ಸಡಿಲವಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಜನತೆಗೆ, ಮಂಗಳವಾರದ ಪ್ರಕರಣ, ಬರಸಿಡಿಲಿನಂತೆ ಅಪ್ಪಳಿಸಿದೆ.

ಸೋಂಕಿತರ ನೇರ ಸಂಪರ್ಕಕ್ಕೆ ಬಾರದ ಮತ್ತು ಯಾವುದೇ ಪ್ರಯಾಣದ ಇತಿಹಾಸ ಇರದ ವ್ಯಕ್ತಿಗಳಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು, ಜಿಲ್ಲೆಯಲ್ಲಿ ಈ ಸೋಂಕು ಸಮುದಾಯ ಹರಡುವಿಕೆಯ ಹಂತ ತಲುಪಿದೆಯಾ ಎನ್ನುವ ಚರ್ಚೆಯನ್ನು ಹುಟ್ಟುಹಾಕಿದೆ.

ಜಿಲ್ಲೆಯಲ್ಲಿ ವರದಿಯಾದ ಮೊದಲ ನಾಲ್ಕು ಪ್ರಕರಣಗಳು ಒಂದೇ ಪ್ರದೇಶಕ್ಕೆ ಸೇರಿದ್ದು ಎನ್ನುವುದು ಗಮನೀಯ. ಇವರೆಲ್ಲರೂ ಗದುಗಿನ ರಂಗನವಾಡ ಪ್ರದೇಶದ ನಿವಾಸಿಗಳು. ಜಿಲ್ಲಾಡಳಿತ ಈಗಾಗಲೇ ಈ ಪ್ರದೇಶವನ್ನು ಕಂಟೈನ್‌ಮೆಂಟ್‌ ಪ್ರದೇಶ ಎಂದು ಘೋಷಿಸಿದೆ. ಇಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಆದರೆ, ಮಂಗಳವಾರ ವರದಿಯಾಗಿರುವ ಪ್ರಕರಣ ಬೇರೆ ಪ್ರದೇಶಕ್ಕೆ ಸಂಬಂಧಿಸಿದ್ದು.

ಈ ಬಾರಿ ಸೋಂಕು ದೃಢಪಟ್ಟಿರುವುದು ಗದುಗಿನ ಗಂಜಿ ಬಸವೇಶ್ವರ ಓಣಿಯ ನಿವಾಸಿಗೆ. 75 ವರ್ಷದ ಇವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್‌–19 ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಮಂಗಳವಾರ ಸೋಂಕು ದೃಢಪಟ್ಟಿದೆ. ಇದರ ಬೆನ್ನಲ್ಲೇ ಗಂಜಿ ಬಸವೇಶ್ವರ ಓಣಿಯನ್ನು ಕಂಟೈನ್‌ಮೆಂಟ್‌ ಪ್ರದೇಶವಾಗಿ ಜಿಲ್ಲಾಡಳಿತ ಘೋಷಿಸಿದೆ.

ಉಳಿದ ನಾಲ್ಕು ಪ್ರಕರಣಗಳಂತೆ ಈ ವೃದ್ಧನಿಗೂ ಯಾವುದೇ ದೇಶೀಯ, ಅಂತರರಾಷ್ಟ್ರೀಯ ಪ್ರಯಾಣದ ಇತಿಹಾಸ ಇಲ್ಲ. ಸೋಂಕಿತರ ನೇರ, ಅಥವಾ ದ್ವಿತೀಯ ಸಂಪರ್ಕಕ್ಕೂ ಬಂದಿಲ್ಲ. ಹೀಗಾಗಿ ಮತ್ತೆ ಯಾವ ಮೂಲದಿಂದ ಈ ವೃದ್ಧನಿಗೆ ಸೋಂಕು ತಗುಲಿರಬಹುದು ಎನ್ನುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

ಪಿ-514 ಸೋಂಕಿತನ ಮನೆಯಲ್ಲಿ ಒಟ್ಟು 9 ಸದಸ್ಯರಿದ್ದಾರೆ. ಇವರ ಜತೆಗೆ ವೃದ್ಧನ ಪ್ರಾಥಮಿಕ ಸಂಪರ್ಕಕ್ಕೆ ಬಂದ 15 ಜನರು ಸೇರಿ ಒಟ್ಟು 24 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ 13 ವರದಿಗಳು ನೆಗಟಿವ್‌ ಆಗಿದೆ. ಇನ್ನು 11 ವರದಿ ಬರುವುದು ಬಾಕಿ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರೆಲ್ಲರನ್ನೂ ಕೋವಿಡ್‌ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ತಿಳಿಸಿದ್ದಾರೆ.

ಸ್ವಲ್ಪ ಸಡಿಲಿಕೆ: ಸದ್ಯ ಗದಗ ಜಿಲ್ಲೆ ಸರ್ಕಾರ ನಿಯಮದ ಪ್ರಕಾರ ಹಳದಿ ವಲಯದ (1ರಿಂದ 5 ಸೋಂಕಿತರು) ಪಟ್ಟಿಯಲ್ಲಿದೆ. ನಗರದಲ್ಲಿ ರಂಗನವಾಡ ಪ್ರದೇಶ, ಗಂಜಿ ಬಸವೇಶ್ವರ ಓಣಿ ಹೊರತುಪಡಿಸಿ ಉಳಿದೆಡೆ ಹಂತ-ಹಂತವಾಗಿ ಜನ ಹಾಗೂ ವಾಹನ ಸಂಚಾರ ಆರಂಭವಾಗಿದೆ. ಮತ್ತೊಂದೆಡೆ ನಗರದ ನೋಂದಣಾಧಿಕಾರಿ ಕಚೇರಿಯೂ ಆರಂಭವಾಗಿದ್ದರಿಂದ ತಹಶೀಲ್ದಾರ ಕಚೇರಿ ಎದುರಿನ ಮಳಿಗೆಗಳ ಪೈಕಿ ಕೆಲವೊಂದು ತೆರೆದಿದ್ದು ಕಂಡು ಬಂತು. ‘ಅಂತರ’ ಪಾಲನೆ ಕಟ್ಟುನಿಟ್ಟಾಗಿ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT