ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದುಗಿನಲ್ಲಿ ಮೂರನೇ ಪಾಸಿಟಿವ್‌ ಪ್ರಕರಣ: ಆತಂಕ

12 ದಿನಗಳ ಅಂತರದಲ್ಲಿ ಮೂರು ಪ್ರಕರಣ; ಬೆಚ್ಚಿಬಿದ್ದ ಜಿಲ್ಲೆಯ ಜನತೆ
Last Updated 18 ಏಪ್ರಿಲ್ 2020, 10:48 IST
ಅಕ್ಷರ ಗಾತ್ರ

ಗದಗ: ನಗರದ ರಂಗನವಾಡ ಪ್ರದೇಶದ ಮತ್ತೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಮೂರು ಕೊರೊನಾ ಪಾಸಿಟಿವ್‌ ಪ್ರಕರಣಗಳು ಬೆಳಕಿಗೆ ಬಂದಿವೆ.

ಜಿಲ್ಲೆಯಲ್ಲಿ ಏ.6ರಂದು 80 ವರ್ಷದ ವೃದ್ಧೆಗೆ (ಪಿ–166) ಮೊದಲ ಬಾರಿ ಸೋಂಕು ದೃಢಪಟ್ಟಿತ್ತು. ಏ.8ರಂದು ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದಾಗಿ 8 ದಿನಗಳು ಕಳೆದ ನಂತರ, ಅವರ ಸಂಪರ್ಕಕ್ಕೆ ಬಂದ 59 ವರ್ಷದ ಮಹಿಳೆಗೆ (ಪಿ–304) ಸೋಂಕು ಇರುವುದು ದೃಢಪಟ್ಟಿತ್ತು. ಇದೀಗ ಎರಡನೆಯ ಸೋಂಕಿತ ಮಹಿಳೆಯ ದ್ವಿತೀಯ ಸಂಪರ್ಕಕ್ಕೆ ಬಂದ 42 ವರ್ಷದ ಪುರುಷನಿಗೆ (ಪಿ–370) ಸೋಂಕು ಧೃಡ ಪಟ್ಟಿದೆ.

ಸೋಂಕು ದೃಢಪಟ್ಟಿರುವ ಮೂವರೂ ಗದಗ ನಗರದ ರಂಗನವಾಡ ಪ್ರದೇಶದ ನಿವಾಸಿಗಳು ಎನ್ನುವುದು ಗಮನೀಯ. ಇದೀಗ ಸೋಂಕು ದೃಢಪಟ್ಟಿರುವ ಪುರುಷ ಗಲ್ಲಿ, ಗಲ್ಲಿ ತಿರುಗುತ್ತಾ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಎಂಬ ಪ್ರಾಥಮಿಕ ಮಾಹಿತಿ ಲಭಿಸಿದೆ. ಜಿಲ್ಲಾಡಳಿತವು ಈ ವ್ಯಕ್ತಿಯ ಪ್ರಯಾಣದ ಇತಿಹಾಸ ಮತ್ತು ಸಂಪರ್ಕಕ್ಕೆ ಬಂದಿರಬಹುದಾದ ವ್ಯಕ್ತಿಗಳ ಮಾಹಿತಿ ಕಲೆಹಾಕುತ್ತಿದ್ದಾರೆ.

12 ದಿನಗಳ ಅಂತರದಲ್ಲಿ ಮೂರು ಪಾಸಿಟಿವ್‌ ಪ್ರಕರಣಗಳು ವರದಿಯಾಗಿರುವುದು ಜಿಲ್ಲೆಯ ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ರಂಗನವಾಡ ಪ್ರದೇಶವನ್ನು ಜಿಲ್ಲಾಡಳಿತ ಈಗಾಗಲೇ ಕಂಟೈನ್‌ಮೆಂಟ್‌ ಪ್ರದೇಶ ಎಂದು ಘೋಷಿಸಿದೆ. ಇಲ್ಲಿಗೆ ಹೊರಗಿನ ವ್ಯಕ್ತಿಗಳ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಇಲ್ಲಿನ ನಿವಾಸಿಗಳಿಗೆ ಜಿಲ್ಲಾಡಳಿತವೇ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದು, ಯಾರಿಗೂ ಹೊರಗೆ ಹೋಗಲು ಅವಕಾಶ ನೀಡುತ್ತಿಲ್ಲ.

ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿ: ಈಗ ಸೋಂಕು ದೃಢಪಟ್ಟಿರುವ ವ್ಯಕ್ತಿ ‘ಪಿ-304’ ಪ್ರಕರಣದ ದ್ವೀತಿಯ ಸಂಪರ್ಕದಲ್ಲಿದ್ದರು. ಇವರಿಗೆ ತಂದೆ,ತಾಯಿ ಹೆಂಡತಿ, ಇಬ್ಬರು ಮಕ್ಕಳಿದ್ದಾರೆ. ಇವರೆಲ್ಲರನ್ನು ಮುಂಜಾಗ್ರತಾ ಕ್ರಮವಾಗಿ ನಿಗಾದಲ್ಲಿ ಇರಿಸಲಾಗಿದ್ದು, ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT