ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲಿಂಗ್‌ ಸಂಭ್ರಮ; ಡೌನ್‌ಹಿಲ್‌ ಧಮಾಕ

ಗದಗ: 17ನೇ ರಾಷ್ಟ್ರ ಮಟ್ಟದ ಮೌಂಟೆನ್‌ ಟೆರೈನ್‌ ಬೈಕ್‌ ಸೈಕ್ಲಿಂಗ್‌ ಸ್ಪರ್ಧೆಗೆ ತೆರೆ
Last Updated 21 ಫೆಬ್ರುವರಿ 2021, 18:15 IST
ಅಕ್ಷರ ಗಾತ್ರ

ಗದಗ: ಇಲ್ಲಿನ ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಮೂರು ದಿನಗಳ ಕಾಲ ನಡೆದ 17ನೇ ರಾಷ್ಟ್ರ ಮಟ್ಟದ ಮೌಂಟೆನ್‌ ಟೆರೈನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ಗೆ ಭಾನುವಾರ ತೆರೆಬಿದ್ದಿತು. ದಿನದ ಕೊನೆಯಲ್ಲಿ ನಡೆದ ಡೌನ್‌ಹಿಲ್‌ ಸೈಕ್ಲಿಂಗ್‌ ಸ್ಪರ್ಧೆ ಚಾಂಪಿಯನ್‌ಷಿಪ್‌ನ ಸಮಾರೋಪಕ್ಕೆ ರೋಚಕತೆಯ ಮೆರುಗು ನೀಡಿತು.

ಭಾನುವಾರದ ಆರಂಭ 18.5 ಕಿ.ಮೀ. ಗುರಿಯ ಮಿಶ್ರ ರಿಲೇ ಸೈಕ್ಲಿಂಗ್‌ ಸ್ಪರ್ಧೆಯೊಂದಿಗೆ ಆರಂಭಗೊಂಡಿತು. ಕಠಿಣ ಅಡ್ಡ ಗುಡ್ಡ, ಹಳ್ಳ ದಿಣ್ಣೆ ಹಾಗೂ ರ‍್ಯಾಂಪ್‌ಗಳನ್ನು ಒಳಗೊಂಡಿದ್ದ ‘ಎ’ ಟ್ರ್ಯಾಕ್‌ನಲ್ಲಿ ನಡೆದ ಈ ಸ್ಪರ್ಧೆ ಸೈಕ್ಲಿಂಗ್‌ ಪ್ರಿಯರಿಗೆ ರೋಚಕ ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಒದಗಿಸಿತು.

ಗುರಿ ತಲುಪಲು ಐದು ಲ್ಯಾಪ್ಸ್‌ ಸುತ್ತಬೇಕಿದ್ದ ಸೈಕ್ಲಿಸ್ಟ್‌ಗಳು ಉತ್ಸಾಹದಿಂದಲೇ ಸೈಕಲ್‌ ತುಳಿದರು. ಇಳಿಜಾರು ಪ್ರದೇಶದಿಂದ ವೇಗವಾಗಿ ಬಂದು ರ‍್ಯಾಂಪ್‌ ಹಾರಿಸುವ ಸಂದರ್ಭದಲ್ಲಿ ಒಬ್ಬ ಯುವತಿ, ಇಬ್ಬರು ಪುರುಷ ಸೈಕ್ಲಿಸ್ಟ್‌ಗಳು ಸಮತೋಲನ ಕಳೆದುಕೊಂಡು ಬಿದ್ದು ಗಾಯಮಾಡಿಕೊಂಡರು. ಸ್ಪರ್ಧೆ ಗೆಲ್ಲುವ ಉದ್ದೇಶದಿಂದ ಹೊರ ರಾಜ್ಯಗಳಿಂದ ಬಂದಿದ್ದ ಸೈಕ್ಲಿಸ್ಟ್‌ಗಳು ಹೆಚ್ಚು ಪೆಟ್ಟು ಮಾಡಿಕೊಂಡು ಸ್ಟ್ರೆಚರ್‌ ಮೇಲೆ ಮಲಗಿ ಆಸ್ಪತ್ರೆಗೆ ಸಾಗಿದ್ದನ್ನು ಕಂಡು ವೀಕ್ಷಕರು ಮರುಗಿದರು.

ನಂತರ, ಪುರುಷರ ವಿಭಾಗದ 36.8 ಕಿ.ಮೀ. ಗುರಿಯ ಕ್ರಾಸ್‌ಕಂಟ್ರಿ ಸೈಕ್ಲಿಂಗ್‌ ಸ್ಪರ್ಧೆ ಕೂಡ ‘ಎ’ ಟ್ರ್ಯಾಕ್‌ನಲ್ಲಿ ನಡೆಯಿತು. ಸೈಕ್ಲಿಸ್ಟ್‌ಗಳು ಎಂಟು ಲ್ಯಾಪ್ಸ್‌ಗಳನ್ನು ಉತ್ಸಾಹದಿಂದಲೇ ಮುಗಿಸಿದರು.

ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ಜತೆಗೆ ಆಯೋಜನೆಗೊಂಡಿದ್ದ ಡೌನ್‌ಹಿಲ್‌ ಸೈಕ್ಲಿಂಗ್‌ನಲ್ಲಿ 30 ವೃತ್ತಿಪರ
ಸೈಕ್ಲಿಸ್ಟ್‌ಗಳು ಸೈಕ್ಲಿಂಗ್‌ ಕೌಶಲ ಪ್ರದರ್ಶಿಸಿದರು. 500 ಮೀಟರ್‌ ಕಠಿಣ ಟ್ರ್ಯಾಕ್‌ನಲ್ಲಿ 50ರಿಂದ 60 ಕಿ.ಮೀ. ವೇಗದಲ್ಲಿ ಸೈಕ್ಲಿಸ್ಟ್‌ಗಳು ಸಾಗುತ್ತಿದ್ದರೆ ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡುತ್ತಿದ್ದರು. ಕೆಲವರಂತೂ ಯಾವ ಸೈಕ್ಲಿಸ್ಟ್‌ಗಳು ಕೂಡ ಆಯತಪ್ಪಿ ಬಿದ್ದು, ಗಾಯ ಮಾಡಿಕೊಳ್ಳದಿರಲಿ ಎಂದು ಪ್ರಾರ್ಥಿಸುತ್ತಿದ್ದ ದೃಶ್ಯ ಕಂಡುಬಂತು.

ಡೌನ್‌ಹಿಲ್‌ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಸೈಕ್ಲಿಸ್ಟ್‌ಗಳು ಟ್ರ್ಯಾಕ್‌ನಲ್ಲಿದ್ದ ಮೂರನೇ ರ‍್ಯಾಂಪ್‌ ಅನ್ನು ಹಾರಿಸಿದ ಜನರುಹರ್ಷೋದ್ಗಾರ ಮಾಡುತ್ತಿದ್ದರು. ವಿಸಿಲ್‌ ಹಾಕಿ ಖುಷಿ ವ್ಯಕ್ತಪಡಿಸುತ್ತಿದ್ದರು. ಡೌನ್‌ಹಿಲ್‌ ಸ್ಪರ್ಧೆಯಲ್ಲಿ ಒಬ್ಬ ಸೈಕ್ಲಿಸ್ಟ್‌ ರ‍್ಯಾಂಪ್‌ ಹಾರಿಸಿ, ಸೈಕಲ್‌ ಅನ್ನು ನೆಲಕ್ಕಿಳಿಸುವ ವೇಳೆ ರಪ್ಪನೆ ನೆಲಕ್ಕೆ ಬಿದ್ದರು. ಆದರೂ, ತಕ್ಷಣವೇ ಮೇಲೆದ್ದು ಸೈಕಲ್‌ ಹತ್ತಿ ಮುಂದೆ ಸಾಗಿದ ಅವರ ಕ್ರೀಡಾಪ್ರೀತಿಗೆ ಎಲ್ಲರೂ ಜೋರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗದುಗಿನ ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಮೂರು ದಿನಗಳ ಕಾಲ ನಡೆದ ಸೈಕ್ಲಿಂಗ್‌ ಸ್ಪರ್ಧೆ ಹಲವು ರೋಚಕ, ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಸೈಕ್ಲಿಂಗ್‌ ಅನ್ನು ಹಬ್ಬದಂತೆ ಆಚರಿಸುವ ಸೈಕ್ಲಿಂಗ್‌ ಪ್ರಿಯರು ಮೂರು ದಿನಗಳು ಸೈಕ್ಲಿಸ್ಟ್‌ಗಳನ್ನು ಹುರಿದುಂಬಿಸಿ ಕ್ರೀಡಾಸ್ಫೂರ್ತಿ ಮೆರೆದರು. ಮನದಲ್ಲೇ ಸುಮಧುರ ನೆನಪುಗಳೊಂದಿಗೆ ಜೀಕುತ್ತಾ ಮನೆಯತ್ತ ಹೆಜ್ಜೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT