ಸೋಮವಾರ, ಜನವರಿ 18, 2021
27 °C
ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ವಿರುದ್ಧ ಕಿಡಿಕಾರಿದ ಮುಖಂಡ

ಬಿಜೆಪಿಯತ್ತ ದಲಿತ ಸಮುದಾಯ: ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಕಾಂಗ್ರೆಸ್ ಹೇಳುತ್ತಿದ್ದ ಸುಳ್ಳಿನ ಅರಿವಾಗಿ ಪರಿಶಿಷ್ಟ ಸಮುದಾಯದ ಜನರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಇಂದು ಬೋನ್‍ಲೆಸ್ ಆಗಿದೆ’ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದರು.

‘ಬಿಜೆಪಿ ದಲಿತ ವಿರೋಧಿ ಹಾಗೂ ಸಂವಿಧಾನ ವಿರೋಧಿ. ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆದು ಹಾಕುತ್ತದೆ ಎಂಬ ಸುಳ್ಳುಗಳನ್ನು ಹೇಳಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದ ಕಾಂಗ್ರೆಸ್‍ ಪಕ್ಷಕ್ಕೆ ದಲಿತರೇ ಬೆನ್ನೆಲುಬಾಗಿದ್ದರು. ಈವರೆಗೆ ಕಾಂಗ್ರೆಸ್ ಹೇಳುತ್ತಿದ್ದ ಸುಳ್ಳುಗಳನ್ನು ನಂಬಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ದಲಿತ ಸಮುದಾಯ ಇಂದು ಬಿಜೆಪಿಯತ್ತ ಮುಖ ಮಾಡಿದೆ. ಈ ಕಾರಣಕ್ಕಾಗಿಯೇ ಶೇ 85ರಷ್ಟು ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸುತ್ತಿದೆ’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮುಂಬರುವ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ದಲಿತ ಸಮುದಾಯ ಬಿಜೆಪಿ ಬೆಂಬಲಿಸಲಿದೆ. ಅಷ್ಟೇ ಅಲ್ಲ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕನಿಷ್ಠ 150 ಸ್ಥಾನ ಗಳಿಸಲಿದೆ’ ಎಂದು ಹೇಳಿದರು.

ದೂಳು ತಿನ್ನುತ್ತಿರುವ ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಸರ್ಕಾರದಲ್ಲಿ ತಾರ್ಕಿಕ ಅಂತ್ಯ ಸಿಗಲಿದೆ. ಇದು ನಮ್ಮ ಒತ್ತಾಯವೂ ಹೌದು. ವರದಿಯಲ್ಲಿನ ನೂನ್ಯತೆ ಸರಿಪಡಿಸಿ, ಎಲ್ಲರಿಗೂ ಸಮಾಧಾನ ಆಗುವ ರೀತಿಯಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡ ಅನಿಲ ಮೆಣಸಿನಕಾಯಿ, ಜಿಲ್ಲಾ ಬಿಜೆಪಿ ಎಸ್‍ಸಿ ಮೋರ್ಚಾ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಪಡಿಯಪ್ಪ ಪೂಜಾರ, ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ನಾಯ್ಕ್, ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಉಡುಪಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿನಕರ ಬಾಬು, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂಗಮೇಶ ದುಂದೂರ, ಕಾಂತಿಲಾಲ ಬನ್ಸಾಲಿ, ಎಂ.ಎಸ್. ಕರಿಗೌಡ್ರ ಇದ್ದರು.

ಚುರುಮುರಿ ತಿಂತಿದ್ದರೇನು?

‘ರಾಜ್ಯದಲ್ಲಿನ ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸುವ ಸಂಬಂಧ 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ನ್ಯಾ.ಸದಾಶಿವ ಆಯೋಗ ರಚಿಸಿದ್ದರು. ಸಮಿತಿ ವರದಿ ನೀಡಿತ್ತು. ಇದೀಗ ಈ ವರದಿ ಯಥಾವತ್ ಜಾರಿಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್, ತಮ್ಮ ಅಧಿಕಾರಾವಧಿಯಲ್ಲಿ ಜಾರಿ ಮಾಡದೇ ಇರಲು ಕಾರಣವೇನು? ನೀವೇನು ಆಗ ಚುರುಮುರಿ ತಿನ್ನುತ್ತಿದ್ದರೇನು?’ ಎಂದು ಕಾಂಗ್ರೆಸ್-ಜೆಡಿಎಸ್ ಮುಖಂಡರ ವಿರುದ್ಧ ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು