ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕಾ ವಿತರಕರ ಕಷ್ಟಗಳಿಗೆ ಸ್ಪಂದಿಸದ ಸರ್ಕಾರ: ಕನಿಷ್ಠ ಸೌಲಭ್ಯಕ್ಕಾಗಿ ಆಗ್ರಹ

ವಿವಿಧ ಸೌಲಭ್ಯಗಳಿಗೆ ಆಗ್ರಹ
Last Updated 3 ಸೆಪ್ಟೆಂಬರ್ 2020, 15:21 IST
ಅಕ್ಷರ ಗಾತ್ರ

ಗದಗ: ಕೋಳಿ ಕೂಗುವ ಮುನ್ನವೇ ಎದ್ದು ಕಾಯಕದಲ್ಲಿ ತೊಡಗಿಸಿಕೊಳ್ಳುವ, ಜನರು ಪ್ರತಿದಿನ ಬೆಳ್ಳಂಬೆಳಿಗ್ಗೆ ಎದ್ದು ಕಾಫಿ ಕುಡಿಯುವ ವೇಳೆಗೆ ಅವರ ಕೈಯಲ್ಲಿ ಪತ್ರಿಕೆ ಇರುವಂತೆ ನೋಡಿಕೊಳ್ಳುವ ಪತ್ರಿಕಾ ವಿತರಕರ ಬದುಕು ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ದೇಶದಲ್ಲಿ ಅನ್‌ಲಾಕ್‌ ಘೋಷಣೆ ಆದ ನಂತರವೂ ಬದುಕು ಸುಧಾರಿಸಿಲ್ಲ ಎಂಬ ನೋವು ಅವರಲ್ಲಿ ಮಡುಗಟ್ಟಿದೆ.

‘ಕೊರೊನಾ ವೈರಸ್‌ ಕಾಲಿಟ್ಟ ಆರಂಭದಲ್ಲಿ ಇಡೀ ದೇಶದ ಜನರು ಸಾಮೂಹಿಕ ಸನ್ನಿಗೆ ಒಳಗಾದಂತೆ ವರ್ತಿಸಿದರು. ಯಾರೋ ಕಿಡಿಗೇಡಿಗಳು ಪತ್ರಿಕೆಗಳಿಂದಲೂ ಕೊರೊನಾ ಹರಡುತ್ತದೆ ಎಂಬ ಸುದ್ದಿ ಹಬ್ಬಿಸಿದ್ದರಿಂದ ಅನೇಕರು ಮನೆಗಳಿಗೆ ಪತ್ರಿಕೆ ಹಾಕಿಸಿ ಕೊಳ್ಳುವುದನ್ನೇ ನಿಲ್ಲಿಸಿದರು. ಜನರು ಪತ್ರಿಕಾ ವಿತರಕರನ್ನೂ ಸೋಂಕು ದಾಟಿಸುವ ವ್ಯಕ್ತಿಗಳು ಎಂಬಂತೆ ನೋಡತೊಡಗಿದರು. ಅಷ್ಟು ದಿನ ಪ್ರೀತಿಯಿಂದ ಮಾತನಾಡಿಸು ತ್ತಿದ್ದವರು ನಮ್ಮನ್ನು ಮನೆ ಹತ್ತಿರಕ್ಕೆ ಸೇರಿಸಿಕೊಳ್ಳಲು ಭಯಪಡತೊಡಗಿದರು’ ಎಂದು ನೋವಿನಿಂದ ಹೇಳುತ್ತಾರೆ ಗದಗ ನಗರದ ಪತ್ರಿಕಾ ವಿತರಕ ಸಿದ್ಧಲಿಂಗೇಶ ಮಡಿವಾಳರ.

‘ಲಾಕ್‌ಡೌನ್‌ ಸಮಯದಲ್ಲಿ ಎಷ್ಟೋ ಬಾರಿ ಪೊಲೀಸರಿಂದ ಹೊಡೆತ ತಿಂದಿದ್ದೇವೆ. ಬೆಳಿಗ್ಗೆ ವೇಳೆ ಸೈಕಲ್‌ ಮೇಲೆ ಪತ್ರಿಕೆಗಳು ಇರುತ್ತಿದ್ದವು. ಅವನ್ನು ಮನೆ ಮನೆಗೆ ಹಂಚಿದ ನಂತರ ನಾವು ಸುಖಾಸುಮ್ಮನೆ ಊರು ತುಂಬ ಅಡ್ಡಾಡುತ್ತಿದ್ದೇವೆ ಎಂದು ಪೊಲೀಸರು ಲಾಠಿ ಬೀಸಿದ್ದಿದೆ. ಲಾಕ್‌ಡೌನ್‌ ವೇಳೆ ಶೇ 30ರಷ್ಟು ಜನರು ಪತ್ರಿಕೆ ತರಿಸುವುದನ್ನು ನಿಲ್ಲಿಸಿಬಿಟ್ಟರು. ಅದು ಅನ್‌ಲಾಕ್‌ ನಂತರವೂ ಮೇಲೇಳಲಿಲ್ಲ. ನಾವು ಗ್ಲೌಸ್‌, ಸ್ಯಾನಿಟೈಸರ್‌, ಮಾಸ್ಕ್‌ ಧರಿಸಿ ಪತ್ರಿಕೆ ಹಂಚುವುದನ್ನು ಶ್ರದ್ಧೆಯಿಂದ ರೂಢಿಸಿಕೊಂಡಿದ್ದರೂ ಜನರು ಮನೆಗಳಿಗೆ ಪತ್ರಿಕೆಗಳನ್ನು ಹಾಕಿಸಿಕೊಳ್ಳಲು ಹಿಂದೆಮುಂದೆ ನೋಡುತ್ತಿದ್ದಾರೆ’ ಎನ್ನುತ್ತಾರೆ ಸಿದ್ಧಲಿಂಗೇಶ.

ಪತ್ರಿಕಾ ವಿತರಕರನ್ನು ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರು ಎಂದು ಗುರುತಿಸಬೇಕು. ಅವರಿಗೆ ದೊರೆಯುವ ಸೌಲಭ್ಯಗಳನ್ನು ನಮಗೂ ಒದಗಿಸಿಕೊಡಬೇಕು ಎಂದು ಒತ್ತಾಯ ಪತ್ರಿಕಾ ವಿತರಕರದ್ದು.

‘ಲಾಕ್‌ಡೌನ್‌ ವೇಳೆ ಪತ್ರಿಕೆ ವಿತರಣೆಯ ಸಮಸ್ಯೆ ಒಂದೆಡೆಯಾದರೆ ಬಿಲ್ ವಸೂಲಿ ಇನ್ನೂ ಕಷ್ಟಕರವಾಗಿತ್ತು. ಚಂದಾದಾರರು ಪತ್ರಿಕೆಯ ಹಣವನ್ನು ಪೂರ್ಣವಾಗಿ ನೀಡುತ್ತಿರಲಿಲ್ಲ. ಒಂದು ದಿನ ಪತ್ರಿಕೆ ವಿತರಿಸದಿದ್ದರೆ ನಾಲ್ಕು ದಿನ ಪೇಪರ್‌ ಹಾಕಿಲ್ಲ ಅಂತ ಹೇಳಿ ಹಣ ಮುರಿದುಕೊಳ್ಳುತ್ತಿದ್ದರು. ಹೀಗಾಗಿ ಬಿಲ್ ವಸೂಲಿಯಲ್ಲಿಯೂ ತೀವ್ರ ಹಿನ್ನಡೆಯಾಯಿತು’ ಎನ್ನುತ್ತಾರೆ ಮುಂಡರಗಿಯ ಪತ್ರಿಕಾ ವಿತರಕ ಪ್ರಕಾಶ ಕಿನ್ನಾಳ.

‘ಕೊರೊನಾ ವಾರಿಯರ್ಸ್‌ ರೀತಿಯಲ್ಲಿ ನಾವು ಕೆಲಸ ಮಾಡಿದರೂ ನಮಗೆ ಆರೋಗ್ಯ ವಿಮೆ ಇಲ್ಲ. ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳಿಲ್ಲ. ವರ್ಷಪೂರ್ತಿ ಕೆಲಸ ಮಾಡುವ ನಮಗೆ ವಿಶೇಷ ‌ಭತ್ಯೆ ನೀಡಬೇಕು. ಆಶ್ರಯ ಯೋಜನೆಯಡಿ ಮನೆ ಕಟ್ಟಿಸಿಕೊಡಬೇಕು. ಮಕ್ಕಳ ಶಿಕ್ಷಣಕ್ಕೆ ಶುಲ್ಕದಲ್ಲಿ ರಿಯಾಯಿತಿ ನೀಡಬೇಕು. ಆಗ ಮಾತ್ರ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಕ್ಕೂ ಸಾರ್ಥಕತೆ ಸಿಗುತ್ತದೆ’ ಎನ್ನುತ್ತಾರೆ ಪತ್ರಿಕಾ ವಿತರಕ ಅಶೋಕ ಶೆಳಕೆ.

ಮೈ ಕೊರೆಯುವ ಚಳಿ, ಸುರಿಯುವ ಮಳೆ ಸೇರಿದಂತೆ ವರ್ಷದ ಎಲ್ಲ ಋತುಗಳಲ್ಲಿಯೂ ಶ್ರದ್ಧೆಯಿಂದ ದುಡಿಯುವ ಪತ್ರಿಕಾ ವಿತರಕರ ಬದುಕು ಚೆಲ್ಲಾಪಿಲ್ಲಿಯಾಗಿದೆ. ಆದರೂ, ತೀವ್ರ ಕಷ್ಟದ ಪರಿಸ್ಥಿತಿಯಲ್ಲಿಯೂ ಶ್ರದ್ಧೆಯಿಂದ ದುಡಿಯುತ್ತಿರುವ ಪ್ರತಿಕಾ ಯೋಧರು ನಾವು ಎಂಬ ಹೆಮ್ಮೆ ಅವರಿಗೆ ಇದೆ!

ಅನಿಶ್ಚಿತತೆಯ ಆ ನಾಲ್ಕು ತಿಂಗಳು

ಮುಂಡರಗಿ: ಕೊರೊನಾ ಕಾರಣದಿಂದಾಗಿ ನಾಲ್ಕು ತಿಂಗಳ ಕಾಲ ಹೇರಲಾಗಿದ್ದ ಲಾಕ್‌ಡೌನ್ ಪತ್ರಿಕಾ ವಿತರಕರಿಗೆ ಮಾರಕವಾಗಿ ಪರಿಣಮಿಸಿತು. ತೀವ್ರ ಅನಿಶ್ಚಿತತೆ ಎದುರಿಸಬೇಕಾಯಿತು ಎನ್ನುತ್ತಾರೆಮುಂಡರಗಿ ಪತ್ರಿಕಾ ವಿತರಕ ರಾಮಣ್ಣ ನಿಟ್ಟಾಲಿ.

ಅನ್‌ಲಾಕ್‌ ನಂತರವೂ ಪ್ರತಿನಿತ್ಯ ಪಟ್ಟಣದ ಒಂದಿಲ್ಲೊಂದು ಭಾಗದಲ್ಲಿ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಇಂತಹ ಸಮಯದಲ್ಲಿ ಪೊಲೀಸರು ನಿರ್ಬಂಧಿತ ಪ್ರದೇಶಗಳ ಪ್ರವೇಶಕ್ಕೆ ಅವಕಾಶ ನೀಡುತ್ತಿರಲಿಲ್ಲ.

ಕೊರೊನಾ ಭಯದಿಂದಾಗಿ ಕೆಲವು ಪಾಲಕರು ತಮ್ಮ ಮಕ್ಕಳನ್ನು ಪತ್ರಿಕೆ ಹಂಚಲು ಕಳುಹಿಸುತ್ತಿರಲಿಲ್ಲ. ಆಗ ಒಬ್ಬನೇ ಪಟ್ಟಣದ ಸುಮಾರು 350 ಗ್ರಾಹಕರಿಗೆ ಪತ್ರಿಕೆ ವಿತರಿಸಿದ್ದಿದೆ. ಒಟ್ಟಾರೆ ಕೊರೊನಾ ನಿರ್ಬಂಧವು ಪತ್ರಿಕಾ ವಿತರಕರನ್ನು ಹೈರಾಣು ಮಾಡಿತು. ಇನ್ನಾದರೂ ಒಳ್ಳೆಯ ದಿನಗಳು ಬರಬಹುದು ಎಂದು ಕಾಯುತ್ತಿದ್ದೇವೆ ಎಂದರು.

‘ಮನವೊಲಿಸಿ ಪತ್ರಿಕೆಗಳನ್ನು ವಿತರಿಸಿದೆವು’

ನರೇಗಲ್: ಕೊರೊನಾ ಸಂದರ್ಭದಲ್ಲಿ ಪತ್ರಿಕೆಗಳನ್ನು ಮನೆ, ಮನೆಗೆ ತಲುಪಿಸಿದ್ದು 30 ವರ್ಷಗಳ ವೃತ್ತಿ ಜೀವನದಲ್ಲಿ ಐತಿಹಾಸಿಕವಾದ ಅನುಭವ ನೀಡಿದೆ ಎಂದು ಪತ್ರಿಕಾ ವಿತರಕ ರಾಜೇಂದ್ರ ಜಕ್ಕಲಿ ಹೇಳಿದರು.

ಕೊರೊನಾ ಹಾವಳಿ ನಿಲ್ಲುವವರೆಗೆ ನಮ್ಮ ಮನೆಗೆ ಪತ್ರಿಕೆ ಹಾಕಬೇಡಿ ಎಂದು ಎಷ್ಟೋ ಓದುಗರು ಹೇಳಿದರು. ಸ್ಯಾನಿಟೈಸ್‌ ಮಾಡಿದ ನಂತರ ಪತ್ರಿಕೆಗಳನ್ನು ಒದಗಿಸುತ್ತಿದ್ದಾರೆ ಎಂದು ಕೆಲವರಿಗೆ ಮನವೊಲಿಸಿ ಪತ್ರಿಕೆ ಹಾಕಿದೆವು.

ಲಾಕ್‌ಡೌನ್ ಸಂದರ್ಭದಲ್ಲಿ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ನೀಡಿದಾಗ ಹಾಗೂ ಅಂಗಡಿ ಬಂದ್ ಆದಾಗ ಪತ್ರಿಕೆಗಳು ಹೆಚ್ಚಾಗಿ ಉಳಿತ್ತಿತ್ತು. ಈಗ ಕೊರೊನಾ ಬಗ್ಗೆ ಜಾಗೃತಿ ಇದ್ದರೂ ಸಹ ಅದೇ ಗುಂಗಲ್ಲಿ ಪತ್ರಿಕೆಗಳಿಂದ ದೂರ ಇರುವುದು ನೋವಿನ ಸಂಗತಿ. ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಹಕರು ಚಂದಾಹಣ ನೀಡುವಲ್ಲಿ ಹಿಂದೇಟು ಹಾಕಿದ್ದು ಜೀವನ ನಿರ್ವಹಣೆಗೆ ಕಷ್ಟವಾಯಿತು ಎಂದು ಹೇಳಿದರು.

ಸರ್ಕಾರದ ಸಹಾಯ ಅಗತ್ಯ

ಲಕ್ಷ್ಮೇಶ್ವರ: ಲಾಕ್‌ಡೌನ್ ಸಮಯದಲ್ಲಿ ಪತ್ರಿಕೆ ಹಾಕಲು ಪಾಲಕರು ತಮ್ಮ ಮಕ್ಕಳನ್ನು ಕಳುಹಿಸಲು ಹಿಂಜರಿದರು. ಆದರೂ ಓದುಗರಿಗೆ ತೊಂದರೆ ಆಗದಂತೆ ಪತ್ರಿಕೆ ವಿತರಿಸಿದೆವು ಎನ್ನುತ್ತಾರೆ ಲಕ್ಷ್ಮೇಶ್ವರದ ಪತ್ರಿಕಾ ವಿತರಕ ಸಾದಿಕ್ ಮಿರ್ಜಾ.

ಕೊರೊನಾ ಸಂಕಷ್ಟದಿಂದ ಪಾರಾಗುವ ನಿಟ್ಟಿನಲ್ಲಿ ಸರ್ಕಾರ ಪತ್ರಿಕಾ ವಿತರಕರಿಗೆ ಸೂಕ್ತ ಸಹಾಯ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಕಷ್ಟಗಳ ತಂದಿತ್ತ ಲಾಕ್‌ಡೌನ್‌

ನರಗುಂದ: ಪತ್ರಿಕೆ ವಿತರಣೆ ದೇವರ‌‌‌‌ ಸೇವೆ‌ ಎಂದು ನಂಬಿ ಎರಡು ದಶಕಗಳಿಂದ‌ ಇದರಲ್ಲಿ ತೊಡಗಿಸಿಕೊಂಡಿದ್ದೇನೆ. ಇದಕ್ಕೆ‌‌ ನನ್ನ ಸಹೋದರರು ನಿರಂತರ ಸಾಥ್ ನೀಡಿದ್ದಾರೆ. ಆದರೆ ಲಾಕ್‌ಡೌನ್ ಸಮಯ ನಮಗೆ ತುಂಬ ತೊಂದರೆ‌ ನೀಡಿತು ಎಂದರು ಪತ್ರಿಕಾ ವಿತರಕ ಅಶೋಕ ಶೆಳಕೆ.

ಕೊರೊನಾ ಇದ್ದವರ‌ ಮನೆಗಳಿಗೆ ಹೋಗಿ ಪತ್ರಿಕೆ ವಿತರಣೆ ಮಾಡುವಾಗ ಜೀವ ಅದುರಿದ್ದಿದೆ. ಓದುಗರು ಪತ್ರಿಕೆ ಚಂದಾಹಣವನ್ನು ಸಮಯಕ್ಕೆ ನೀಡದಿದ್ದಾಗ, ಕಂಪನಿಯವರು ನಮಗೆ ಬಿಲ್ ಕಟ್ಟು‌ ಎಂದಾಗ ನಾವು ಪಟ್ಟ ಪಾಡು ನಮಗಷ್ಟೇ ಗೊತ್ತು. ಆದರೂ ಸ್ವಯಂ ರಕ್ಷಣೆಯೊಂದಿಗೆ ಪತ್ರಿಕೆ ವಿತರಣೆ ಮಾಡಿದರೂ ಇಲ್ಲಿಯವರೆಗೆ ಸರ್ಕಾರ ನಮ್ಮ ರಕ್ಷಣೆಗೆ ಬಂದಿಲ್ಲ ಎಂದು ನೋವು ತೋಡಿಕೊಂಡರು.

‘ಹೆಚ್ಚಿದ ಆರ್ಥಿಕ ಹೊರೆ’

ಗಜೇಂದ್ರಗಡ: ಲಾಕ್‌ಡೌನ್ ಸಮಯದಲ್ಲಿ ಪತ್ರಿಕೆ ಹಾಕಲು ಹುಡುಗರು ಬರದ ಹಿನ್ನೆಲೆಯಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎನ್ನುತ್ತಾರೆ ಗಜೇಂದ್ರಗಡದ ಪತ್ರಿಕೆ ವಿತರಕ ಸಿದ್ದಪ್ಪ ಚುರ್ಚಿಹಾಳ.

‘ಜನರು ಪತ್ರಿಕೆ ಬಿಲ್ ಅನ್ನು ಸರಿಯಾಗಿ ಪಾವತಿಸುತ್ತಿಲ್ಲ. ನಮ್ಮ ಪತ್ರಿಕೆ ದರ ₹6 ಇರುವುದರಿಂದ ಹೆಚ್ಚಿಗೆ ಒತ್ತಾಯ ಮಾಡಿ ಕೇಳಿದರೆ ನಾಳೆಯಿಂದ ಪತ್ರಿಕೆ ಹಾಕಬೇಡಿ ಎನ್ನುತ್ತಾರೆ. ಕಚೇರಿಯಲ್ಲಿ ಪತ್ರಿಕೆಗಳ ಸಂಖ್ಯೆ ಕಡಿಮೆ ಮಾಡುವಂತೆ ಸೂಚಿಸಿದರೂ ಸಕಾಲದಲ್ಲಿ ಕಡಿಮೆ ಮಾಡುವುದಿಲ್ಲ. ಪತ್ರಿಕೆಗಳು ನಮ್ಮಲ್ಲಿಯೇ ಉಳಿಯುವುದರಿಂದ ಆರ್ಥಿಕ ಹೊರೆ ಹೆಚ್ಚಾಗಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT