ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ: ಮಠದ ಜಾಗದಲ್ಲಿ ನಿರ್ಮಿಸಿದ್ದ ಶೌಚಾಲಯ ಧ್ವಂಸ

ಕಿಡಿಗೇಡಿಗಳ ಬಂಧನಕ್ಕೆ ತೋಂಟದಾರ್ಯ ಸೇವಾ ಸಮಿತಿ ಕಾರ್ಯಕರ್ತರ ಆಗ್ರಹ
Published 11 ಜುಲೈ 2024, 14:22 IST
Last Updated 11 ಜುಲೈ 2024, 14:22 IST
ಅಕ್ಷರ ಗಾತ್ರ

ಮುಂಡರಗಿ: ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾ ಮಠದ ಜಾಗದಲ್ಲಿ ಮಠದ ವತಿಯಿಂದ ಸಾರ್ವಜನಿಕರಿಗಾಗಿ ನಿರ್ಮಿಸಿದ್ದ ಶೌಚಾಲಯ ಧ್ವಂಸಗೊಳಿಸಿದವರನ್ನು ಬಂಧಿಸಿ ಅವರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಜಗದ್ಗುರು ತೋಂಟದಾರ್ಯ ಸೇವಾ ಸಮಿತಿ ಕಾರ್ಯಕರ್ತರು ಗುರುವಾರ ತಹಶೀಲ್ದಾರ್‌ ಧನಂಜಯ ಮಾಲಗತ್ತಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲಗಣ್ಣವರ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.

ಶ್ರೀಮಠದ ಅಕ್ಕಪಕ್ಕದ ವಾರ್ಡ್‌ಗಳ ಮಹಿಳೆಯರ ಅನುಕೂಲಕ್ಕೆ ಜಗದ್ಗುರು ತೋಂಟದಾರ್ಯ ಶಾಖಾ ಮಠದ ಬಳಿ ಸುಮಾರು ₹12ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಆದರೆ ಯಾರೋ ದುಷ್ಕರ್ಮಿಗಳು ಜುಲೈ 9ರಂದು ಸಂಜೆ ಸಮುದಾಯ ಶೌಚಾಲಯವನ್ನು ಕೆಡವಿ ಹಾಕಿದ್ದಾರೆ. ಆ ಮೂಲಕ ಪಟ್ಟಣದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಭಕ್ತರು ಆರೋಪಿಸಿದರು.

ಶ್ರೀಮಠದ ಬಳಿ ಮಹಿಳೆಯರಿಗಾಗಿ ಸಮುದಾಯ ಶೌಚಾಲಯ ನಿರ್ಮಿಸಿರುವುದು ಪುರಸಭೆಯ ಗಮನಕ್ಕೂ ಬಂದಿದೆ. ಶೌಚಾಲಯವನ್ನು ಸಾರ್ವಜನಿಕರ ಬಳಸಿಕೊಳ್ಳುವ ಕುರಿತಂತೆ ಮತ್ತು ಪುರಸಭೆಯ ಸುಪರ್ದಿಗೆ ಒಪ್ಪಿಸುವ ಕುರಿತಂತೆ ಪುರಸಭೆಗೆ ಶ್ರೀಮಠದಿಂದ ಪತ್ರವನ್ನೂ ಬರೆಯಲಾಗಿತ್ತು ಎಂದು ತಿಳಿಸಿದರು.

ಶಾಸಕ ಡಾ.ಚಂದ್ರು ಲಮಾಣಿ, ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯವರು ಜುಲೈ 8ರಂದು ಶೌಚಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಶೌಚಾಲಯವು ಸುಸಜ್ಜಿತವಾಗಿದ್ದು, ಪುರಸಭೆಯವರು ಅದನ್ನು ಸಾರ್ವಜನಿಕರ ಬಳಕೆಗೆ ಬಳಸಿಕೊಳ್ಳಬಹುದು ಎಂದು ಶಾಸಕರು ತಿಳಿಸಿದ್ದರು. ಅವರು ಭೇಟಿ ನೀಡಿದ ಮರುದಿನ ದುಷ್ಕರ್ಮಿಗಳು ಶೌಚಾಲಯವನ್ನು ಜೆ.ಸಿ.ಬಿ. ಮೂಲಕ ಧ್ವಂಸಮಾಡಿದ್ದಾರೆ ಎಂದು ಆರೋಪಿಸಿದರು.

ಶೌಚಾಲಯವನ್ನು ಹಾಳು ಮಾಡಿರುವ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು. ಪಟ್ಟಣದ ಅಭಿವೃದ್ದಿ ಸಹಿಸದ ಕೆಲವರು ಇಂತಹ ಹೀನ ಕೃತ್ಯ ಎಸಗಿದ್ದಾರೆ. ಶ್ರೀಮಠಕ್ಕೆ ಹಾಗೂ ಪುರಸಭೆಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಅಂಥವರನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಗದ್ಗುರು ತೋಂಟದಾರ್ಯ ಸೇವಾ ಸಮಿತಿ ಅದ್ಯಕ್ಷ ವಿರುಪಾಕ್ಷಗೌಡ ಹರಗಿನಡೋಣಿ, ಕೊಟ್ರೇಶಪ್ಪ ಅಂಗಡಿ, ಅಡಿವೆಪ್ಪ ಚಲುವಾದಿ, ಈಶಣ್ಣ ಬೆಟಗೇರಿ, ಅಶೋಕ ಹುಬ್ಬಳ್ಳಿ, ಎಸ್.ಎಸ್.ಗಡ್ಡದ, ಶಿವಕುಮಾರ ಬೆಟಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT