ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಗುಂದ: ಮುಂಗಾರು ವೈಫಲ್ಯಕ್ಕೆ ರೈತ ಹೈರಾಣ

ಮಧ್ಯಂತರ ಪರಿಹಾರಕ್ಕೆ ರೈತರ ಮೊರೆ
ಚಂದ್ರಶೇಖರ್ ಭಜಂತ್ರಿ
Published 27 ನವೆಂಬರ್ 2023, 5:14 IST
Last Updated 27 ನವೆಂಬರ್ 2023, 5:14 IST
ಅಕ್ಷರ ಗಾತ್ರ

ಮುಳಗುಂದ: ಪ್ರಸಕ್ತ ವರ್ಷದ ಮುಂಗಾರು ವೈಫಲ್ಯದಿಂದಾಗಿ ರೈತ ಸಮದಾಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮುಂಗಾರು ಪೂರ್ವದ ಅಲ್ಪ ಮಳೆ ನಂಬಿ ಭೂತಾಯಿ ಒಡಲಿಗೆ ಬೀಜ ಬಿತ್ತಿದ್ದ ರೈತರು ಬೆಳೆ ಬರದೇ ಕಂಗಾಲಾಗಿದ್ದಾರೆ. ಮಧ್ಯಂತರ ಪರಿಹಾರಕ್ಕೆ ಕಾದು ಕೂರುವಂತಾಗಿದೆ.

ಪಟ್ಟಣ ಸೇರಿದಂತೆ ಗದಗ ತಾಲ್ಲೂಕಿನಲ್ಲಿ ಎರಿ (ಕಪ್ಪು ಮಣ್ಣು) ಭೂಪ್ರದೇಶದಲ್ಲಿ ಮುಂಗಾರು ಮಳೆ ಆಗದ ಹಿನ್ನೆಲೆ ಬಿತ್ತನೆ ಕಾರ್ಯ ಕುಂಠಿತವಾಗಿತ್ತು. ಆದರೂ, ಬಿದ್ದ ಅಲ್ಪ ಸ್ವಲ್ಪ ಮಳೆ ನಂಬಿ ಹೆಸರು, ಶೇಂಗಾ ಬಿತ್ತನೆ ಮಾಡಲಾಗಿತ್ತು. ಬಸಾಪೂರ, ಮುಳಗುಂದ ಭಾಗದ ಕೆಲವೆಡೆ ಜುಲೈನಲ್ಲಿ ಸುರಿದಿದ್ದ ಮಳೆಗೆ ಕೆಂಪ್ಪು ಮಣ್ಣು (ಮಸಾರಿ) ಭೂಮಿಯಲ್ಲಿ ಬಳ್ಳಿ ಶೇಂಗಾ, ಗೋವಿನ ಜೋಳ ಬಿತ್ತನೆ ಮಾಡಿದ್ದರು. ಬೆಳೆಗಳು ಉತ್ತಮವಾಗಿದ್ದವು. ಆದರೆ, ಬೆಳೆವಣಿಗೆ ಹಂತದಲ್ಲಿದ್ದ ಬೆಳೆಗಳು ಮಳೆ ಕೊರತೆಯಿಂದ ಗಿಡಗಳು ಒಣಗಿ ನಾಶವಾದವು.

ಬೀಜ ಬಿತ್ತನೆ, ರಸಗೊಬ್ಬರ, ಎಡೆಕುಂಟಿ, ಕಳೆ ತೆಗೆಸುವುದು ಸೇರಿದಂತೆ ಪ್ರತಿ ಎಕರೆಗೆ ₹15ರಿಂದ ₹20 ಸಾವಿರ ಖರ್ಚು ಮಾಡಿದ್ದರು. ಮೆಣಸಿನ ಗಿಡ ಬೆಳೆದ ರೈತರು ಸುತ್ತಮುತ್ತಲಿನ ಬೋರ್‌ವೆಲ್, ಟ್ಯಾಂಕರ್ ನೀರು ಬಳಸಿಕೊಂಡು ಮೆಣಸಿನ ಗಿಡಗಳನ್ನ ಪೋಷಿಸಿದ್ದು, ಬೆಳೆಗಳು ಉತ್ತಮವಾಗಿವೆ. ಆದರೆ ಬೆಳೆಗೆ ತಕ್ಕಂತೆ ಇಳುವರಿ ಇಲ್ಲವಾಗಿದೆ. ಗಿಡವೊಂದಕ್ಕೆ 8ರಿಂದ 10 ಕಾಯಿಗಳಾಗಿವೆ. ಕಟಾವಿನ ನಂತರ ಖರ್ಚು ಮಾಡಿದ ಹಣ ಮರಳಿ ಬಾರದಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್‌ನಿಂದ ನವೆಂಬರ್‌ವರೆಗೆ 145 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, 44 ಎಂಎಂ ಮಳೆ ಆಗಿ, ಶೇ 70 ಮಳೆ ಕೊರತೆ ಉಂಟಾಗಿದೆ. ಹಿಂಗಾರಿನಲ್ಲಿ 60,400 ಹೆಕ್ಟೇರ್ ಬಿತ್ತನೆ ಗುರಿ ಇತ್ತು, ಇದರಲ್ಲಿ 52,500 ಹೆಕ್ಟೇರ್ ಬಿತ್ತನೆ ಆಗಿದ್ದು, ಶೇ 87ರಷ್ಟು ಗುರಿ ಸಾಧಿಸಿದೆ. ಪ್ರಸಕ್ತ ವರ್ಷ ಜನವರಿಯಿಂದ ನವೆಂಬರ್‌ವರೆಗೆ 645 ಎಂ.ಎಂ ಮಳೆ ಅಗತ್ಯವಿತ್ತು. ಆದರೆ 435 ಎಂಎಂ ಮಳೆ ಆಗಿ ಶೇ 32ರಷ್ಟು ಮಳೆ ಕೊರತೆ ಉಂಟಾಗಿದೆ.

‘ಗದಗ ತಾಲ್ಲೂಕನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಿದ್ದು, ಮುಂಗಾರಿನ ಬೆಳೆಗಳ ಮಧ್ಯಂತರ ಪರಿಹಾರ ಕೋರಿ ವರದಿ ಮಾಡಲಾಗಿದ್ದು, ಪರಿಹಾರ ವಿತರಣೆ ಪ್ರಕ್ರಿಯೆ ನಡೆಯಬೇಕಿದೆ. ನವೆಂಬರ್ 7 ಮತ್ತು 8ರಂದು ಸುರಿದ ಮಳೆ ಪರಿಣಾಮ ಹಿಂಗಾರಿನ ಬೆಳೆಗಳು ಚೇತರಿಕೆ ಕಂಡಿವೆ. ಆದರೂ ಇಳುವರಿ ಶೇ 15ರಿಂದ 20ರಷ್ಟು ಕಡಿಮೆ ಆಗಲಿದೆ’ ಎಂದು ಕೃಷಿ ಸಹಾಯಕ ಅಧಿಕಾರಿ ಮಲ್ಲಯ್ಯ ಕೊರಣ್ಣವರ ಮಾಹಿತಿ ನೀಡಿದರು.

‘ಬರಗಾಲ ಇರುವುದರಿಂದ ಬೋರ್‌ವೆಲ್‌, ಬಾವಿ, ಕೃಷಿ ಹೊಂಡ ಹೊಂದಿರುವ ರೈತರಿಗೆ ಸೂಕ್ಷ್ಮ ನೀರಾವರಿ ಯೋಜನೆಯಡಿ ಸಾಕಷ್ಟು ಅನುದಾನವಿದೆ. ಶೇ 90 ರಷ್ಟು ರಿಯಾಯಿತಿ ಲಭ್ಯವಿದ್ದು, ಆಸಕ್ತ ರೈತರು ಸ್ಪಿಂಕ್ಲರ್, ಪೈಪ್ ಸೆಟ್ ಖರೀದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೃಷಿ ಇಲಾಖೆಯಲ್ಲಿ ಪೈಪ್‌ಗಳು ಲಭ್ಯವಿದೆ. ನೀರಾವರಿ ಸೌಲಭ್ಯ ಇರುವ ರೈತರಿಗೆ 1 ಹೆಕ್ಟೇರ್‌ಗೆ ₹10 ಸಾವಿರ ಸಹಾಯಧನ ಸೌಲಭ್ಯವಿದೆ. ಬರಗಾಲದ ಪರಿಹಾರ ಸೇರಿದಂತೆ ಸರ್ಕಾರದ ಯೋಜನೆ ಪಡೆಯಲು ರೈತರು ಕಡ್ಡಾಯವಾಗಿ ಎಫ್‌ಐಡಿ ಮತ್ತು ಇ–ಕೆವೈಸಿ ಮಾಡಿಸಬೇಕು’ ಎಂದು ಅವರು ತಿಳಿಸಿದರು.

‘ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರಷ್ಟೇ ಅಲ್ಲದೆ ಕೃಷಿ ಕೂಲಿ ಕಾರ್ಮಿಕರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ದುಡಿದು ಜೀವನ ಸಾಗಿಸುವವರ ಸ್ಥಿತಿ ಗಂಭೀರವಾಗಲಿದೆ. ಸರ್ಕಾರ ಕೂಡಲೇ ಬರಗಾಲ ಘೋಷಿಸಿದೆ. ಆದರೆ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿಲ್ಲ. ಬರಗಾಲ ಕಾಮಗಾರಿ ಆರಂಭಿಸಬೇಕು. ಬೆಳೆ ವಿಮಾ ಮಧ್ಯಂತರ ಪರಿಹಾರ ನೀಡಬೇಕು’ ಎಂದು ರೈತ ಸಂಘದ ಮುಖಂಡ ದೇವರಾಜ ಸಂಗನಪೇಟಿ ಆಗ್ರಹಿಸಿದ್ದಾರೆ.

ಮುಂಗಾರಿನ ಹೆಸರು ಬಿತ್ತನೆಯಲ್ಲಿ ಕುಂಟಿತವಾಗಿ ಹಾನಿ ಆಗಿತ್ತು. ಈ ಪೈಕಿ ಹಾನಿ ವರದಿ ಪ್ರಕಾರ ಗದಗ ತಾಲ್ಲೂಕಿಗೆ ವಿಮಾ ಪರಿಹಾರ ₹9.49 ಕೋಟಿ ಬಿಡುಗಡೆಯಾಗಿ ರೈತರ ಖಾತೆಗೆ ಜಮಾ ಆಗಿದೆ

–ಮಲ್ಲಯ್ಯ ಕೊರಣ್ಣವರ ಕೃಷಿ ಸಹಾಯಕ ಅಧಿಕಾರಿ ಗದಗ ತಾಲ್ಲೂಕು

ಮುಂಗಾರು ವೈಫಲ್ಯದಿಂದ ಮೆಣಸಿನಕಾಯಿ ಗಿಡಗಳ ಒಣಗಿದ್ದವು. ಅವುಗಳ ರಕ್ಷಣೆಗೆ ಹಣ ಖರ್ಚು ಮಾಡಿ ನೀರು ಹಾಯಿಸಿ ಉಳಿಸಿಕೊಂಡಿದ್ದೇವೆ. ಆದರೆ ಇಳುವರಿ ಇಲ್ಲದಾಗಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕು

–ಮುತ್ತಣ್ಣ ಬಳಗೇರ ಮುಳಗುಂದ ರೈತ

ಮುಂಗಾರು ಹಂಗಾಮು: ₹44.21 ಕೋಟಿ ಹಾನಿ ‘ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವದಿಂದ ಒಣ ಬೇಸಾಯದ 27173 ಹೆಕ್ಟೇರ್ ಕೃಷಿ ಭೂಮಿಯಲ್ಲಿನ ಬಿತ್ತನೆ ಬೆಳೆ ನಾಶವಾಗಿ ₹22.44 ಕೋಟಿ ಹಾನಿಯಾಗಿದೆ. 27615 ಭೂಮಿ ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿ ₹21.77 ಕೋಟಿ ಹಾನಿ ಸೇರಿ ಒಟ್ಟು ₹44.21 ಕೋಟಿ ಹಾನಿ ವರದಿಯನ್ನ ಸರ್ಕಾರಕ್ಕೆ ಕೊಡಲಾಗಿದೆ’ ಎಂದು ಎಂದು ಕೃಷಿ ಸಹಾಯಕ ಅಧಿಕಾರಿ ಮಲ್ಲಯ್ಯ ಕೊರಣ್ಣವರ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT