ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಹಟ್ಟಿ | ಬಂಪರ್ ಬೆಲೆಯ ನಿರೀಕ್ಷೆ; ಸಾವಯುವ ಸಾಧನೆಯ ಹಾದಿಯಲ್ಲಿ ರೈತ ಸಹೋದರರು

ಸಮಗ್ರ ಕೃಷಿ
ನಿಂಗಪ್ಪ ಹಮ್ಮಿಗಿ
Published 5 ಜುಲೈ 2024, 5:13 IST
Last Updated 5 ಜುಲೈ 2024, 5:13 IST
ಅಕ್ಷರ ಗಾತ್ರ

ಶಿರಹಟ್ಟಿ: ಅಪ್ಪಟ ದೇಸಿ ಸಾವಯುವ ಕೃಷಿಯಲ್ಲಿ ವಿವಿಧ ತಳಿಗಳ ಬೆಳೆಗಳೊಂದಿಗೆ ಮಲೆನಾಡಿನ ಕಾಫಿ ಹಾಗೂ ಮೆಣಸು ಬೆಳೆಗಳನ್ನು ಬೆಳೆಯುವುದರ ಮೂಲಕ ಸಾಧನೆಯ ಹಾದಿಯತ್ತ ಸಾಗುತ್ತಿರುವ ಸಹೋದರರು ತಾಲ್ಲೂಕಿನ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಪ್ರಸ್ತುತ ದಿನಗಳಲ್ಲಿ ವ್ಯವಸಾಯಕ್ಕೆ ಮೂಗು ಮುರಿದು ಆಧುನಿಕತೆಯ ಜೀವನಶೈಲಿಗೆ ಮುಖ ಮಾಡಿ ಮಹಾನಗರಗಳತ್ತ ಮಾರು ಹೋಗುತ್ತಿರುವ ಯುವಪೀಳಿಗೆಯು ಕೃಷಿ ಚಟುವಟಿಕೆ ಮರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಣ್ಣನ್ನೇ ನಂಬಿ ಬಂಡವಾಳ ಹಾಕಿ ಸತತ ಶ್ರಮವಹಿಸಿ ದುಡಿಯುತ್ತಿರುವ ತಾಲ್ಲೂಕಿನ ರಣತೂರು ಗ್ರಾಮದ ಅರವಿಂದ ಕಟಗಿ ಹಾಗೂ ಸಹೋದರರು ಅವರ ಕುಟುಂಬದವರೊಂದಿಗೆ ತಮ್ಮ5 ಎಕರೆ ಜಮೀನಿನಲ್ಲಿ ವಿವಿಧ ಹಾಗೂ ವಿಶೇಷ ತಳಿಗಳ ಬೆಳೆಗಳನ್ನು ಬೆಳೆಯುತ್ತಿದ್ದು, ಇದುವರೆಗೆ ಸುಮಾರು ₹10 ಲಕ್ಷ ವ್ಯಯಿಸಿದ್ದಾರೆ.

ಮಲೆನಾಡಿನ ಬೆಳೆಗಳು

ಬಯಲು ಸೀಮೆಯ ಬೇಸಾಯದಲ್ಲಿ ಮಲೆನಾಡಿನ ಬೆಳೆಗಳನ್ನು ಬೆಳೆಯುವ ವಿಶೇಷ ಪ್ರಯತ್ನ ಮಾಡುತ್ತಿರುವ ಕಟಗಿಯವರ ಕುಟುಂಬ ಅಡಿಕೆ, ಕಾಫಿ, ಕೋಕೋ, ಚಕ್ಕೆ, ಮೆಣಸು ಸಸಿಗಳನ್ನು ನಾಟಿ ಮಾಡಿದ್ದಾರೆ. ಇವುಗಳ ಬೆಳವಣಿಗೆಗೆ ಬೇಕಾಗುವ ಪೂರಕವಾದ ವಾತಾವರಣವನ್ನು ಸಹ ನಿರ್ಮಿಸಿದ್ದಾರೆ. ಸಸಿಯಿಂದ ಸಸಿಗೆ ನಿಯಮಿತ ಅಂತರವಿಟ್ಟು 5 ಎಕರೆ ಜಮೀನಿನಲ್ಲಿ ನಾಟಿ ಮಾಡಿದ್ದಾರೆ. 2000 ಕಾಫಿ, 2000 ಅಡಿಕೆ, 500 ಮೆಣಸು, ಚಕ್ಕೆ ಸೇರಿದಂತೆ ಮಲೆನಾಡಿನ ಬೆಳೆಗಳ ಸಸಿಗಳನ್ನು ನಾಟಿ ಮಾಡಿದ್ದು, ಬಂಪರ್ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.

ಸಮಗ್ರ ಬೆಳೆಗಳ ಸಮ್ಮಿಶ್ರಣ

ಒಟ್ಟು 30 ಎಕರೆ ಜಮೀನಿನ ಪೈಕಿ 5 ಎಕರೆಯಲ್ಲಿ ಮಾತ್ರ ತೋಟಗಾರಿಕೆ ಬೆಳೆಗಳನ್ನು ನಾಟಿ ಮಾಡಿದ್ದಾರೆ. 500 ಶ್ರೀಗಂಧ, ಮಹಾಗನಿ 600, ತೆಂಗು 200, ಲಿಂಬು 100, ಗೋಡಂಬಿ 200, ಪೇರಲ 500 ಗಿಡಗಳನ್ನು ಸಹ ಬೆಳೆಸಿದ್ದಾರೆ. ಬಂಗಾರದಷ್ಟೇ ಬೆಲೆ ಬಾಳುವ ಸಸಿಗಳನ್ನು ಅಚ್ಚುಕಟ್ಟಾಗಿ ಬೆಳೆಸುತ್ತಿರುವ ಇವರು, ಬೆಳೆಗಳಿಗೆ ಯಾವುದೇ ರಾಸಾಯನಿಕ ಸಿಂಪಡಣೆ ಮಾಡದೆ ಶುದ್ಧ ಸಾವಯುವದಲ್ಲಿ ಬೆಳೆಸುತ್ತಿರುವುದು ವಿಶೇಷ. ಅಷ್ಟೇ ಅಲ್ಲದೇ 150 ಜಂಬು ನೇರಳೆ ಹಣ್ಣಿನ ಸಸಿಗಳನ್ನು ನೆಟ್ಟಿದ್ದು, ಉತ್ತಮವಾಗಿ ಬೆಳೆಯುತ್ತಿವೆ.

ತರಕಾರಿ ಬೆಳೆಗಳು

ಸಸಿಯಿಂದ ಸಸಿಗೆ ನಾಟಿ ಮಾಡಿದ ಸ್ಥಳವನ್ನು ಖಾಲಿ ಬಿಡದೆ ಬೆಳೆಗಳ ಮಧ್ಯೆ ತರಕಾರಿ ಸಹ ಬೆಳೆಯುತ್ತಾರೆ. ಬದನೆಕಾಯಿ, ಮೆಣಸಿನಕಾಯಿ, ಹಾಗಲಕಾಯಿ, ಸೌತೆಕಾಯಿ ಬೆಳೆಗಳನ್ನು ಬೆಳೆಯುತ್ತಾರೆ. ಕಟಾವು ಮಾಡಿದ ಬೆಳೆಯನ್ನು ಗದಗ, ಲಕ್ಷ್ಮೇಶ್ವರ, ಶಿರಹಟ್ಟಿ ಮಾರುಕಟ್ಟೆಗೆ ಕಳುಹಿಸುತ್ತಾರೆ. ನೀರಾವರಿ ಹೊರತುಪಡಿಸಿ ಒಣ ಬೇಸಾಯದಲ್ಲಿ ಈರುಳ್ಳಿ ಬೀಜ ಬಿತ್ತನೆ ಮಾಡಿ ಉತ್ತಮ ಫಸಲು ಪಡೆಯುತ್ತಾರೆ. ಅದರಲ್ಲೂ ಬಿಳೆ ಈರುಳ್ಳಿ ಬೆಳೆಯುವುದು ಇವರ ವಿಶೇಷತೆ.

ಬಂಪರ್ ಆದಾಯದ ನಿರೀಕ್ಷೆ

ಒಟ್ಟು 30 ಎಕರೆ ಜಮೀನಿನ ಪೈಕಿ 5 ಎಕರೆ ತೋಟಗಾರಿಕೆ ಹಾಗೂ ಉಳಿದ ಜಮೀನಿನಲ್ಲಿ ಒಣ ಬೇಸಾಯ ವ್ಯವಸಾಯವನ್ನು ಮಾಡುತ್ತಿದ್ದಾರೆ. ಅದನ್ನು ಸಹ ದೇಸಿ ಪದ್ಧತಿಯಲ್ಲಿ ಬೆಳೆಸುತ್ತಿದ್ದು, ಗೋವಿನಜೋಳ, ಹೆಸರು, ಶೇಂಗಾ, ಜೋಳವನ್ನು ಸಹ ಬಿತ್ತನೆ ಮಾಡಿ ಉತ್ತಮ ಆದಾಯ‌ ಪಡೆಯುತ್ತಿದ್ದಾರೆ. ಒಟ್ಟು ತೋಟ ಹಾಗೂ ಒಣ ಬೇಸಾಯದ ಕೃಷಿಗೆ ವರ್ಷಕ್ಕೆ ಸುಮಾರು ₹6 ಲಕ್ಷ ಖರ್ಚು ಮಾಡುತ್ತಿದ್ದು, ಅದರಿಂದ ಸದ್ಯ ಸುಮಾರು ₹4 ರಿಂದ 5 ಲಕ್ಷ ನಿವ್ವಳ ಲಾಭ ಪಡೆಯುತ್ತಾರೆ.

ಗೊಬ್ಬರಕ್ಕಾಗಿ ಹೈನುಗಾರಿಕೆ

ದೇಸಿ ಕೃಷಿಯನ್ನು ಅವಲಂಬಿಸಿರುವ ರೈತ ಸಹೋದರರು ಸದ್ಯ ದೇಸಿ ತಳಿಯ ಹಸು, ಎತ್ತು ಹಾಗೂ ಎಮ್ಮೆಗಳನ್ನು ಸಹ ಕಟ್ಟಿದ್ದಾರೆ. 2 ಎತ್ತು ಹಾಗೂ 8 ಎಮ್ಮೆಗಳನ್ನು ಸಾಕುತ್ತಿದ್ದು, ಹಾಲನ್ನು ಮಾರಾಟ ಮಾಡುವುದರೊಂದಿಗೆ ಮನೆಗೂ ಸಹ ಉಪಯೋಗಿಸುತ್ತಾರೆ. ಕೇವಲ ಸಗಣಿ ಗೊಬ್ಬರಕ್ಕಾಗಿಯೇ ಈ ಜಾನುವಾರುಗಳನ್ನು ಸಾಕಲಾಗುತ್ತಿದ್ದು, ಅದರ ಗೊಬ್ಬರದಿಂದ ಬೆಳೆಗಳಿಗೆ ಉತ್ತಮ ಪೌಷ್ಟಿಕಾಂಶ ಹಾಗೂ ರೋಗ ನಿರೋಧಕ ಶಕ್ತಿ ಉಂಟಾಗುತ್ತದೆ ಎಂಬುದು ಅವರ ಅನುಭವದ ಮಾತು.

ಹಲವಾರು ಪ್ರಶಸ್ತಿ: ವಿಜ್ಞಾನಿಗಳ ಭೇಟಿ

ಹಲವಾರು ಬಗೆಯ ತಳಿಗಳನ್ನು ಬೆಳೆದು ಮಾದರಿ ಹಾಗೂ ಪ್ರಗತಿ ಪರ ರೈತ ಅರವಿಂದ ಕಟಗಿ ಅವರಿಗೆ ಕೆವಿಕೆಯಿಂದ ಅತ್ಯುತ್ತಮ ರೈತ ಪ್ರಶಸ್ತಿ ಲಭಿಸಿದೆ. ಅಲ್ಲದೇ ತಾಲ್ಲೂಕಿನ ಪ್ರಗತಿಪರ ರೈತ ಪ್ರಶಸ್ತಿ, ತಾಲ್ಲೂಕು ರೈತ ಪ್ರಶಸ್ತಿ, ಗೋಡಂಬಿ ಬೆಳೆಗಾರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ವಿಶೇಷ ಸಸ್ಯಗಳನ್ನು ಬೆಳೆಯುತ್ತಿರುವ ಕಟಗಿ ಅವರ ತೋಟಕ್ಕೆ ದೂರದಿಂದ ವಿಜ್ಞಾನಿಗಳು ಸಹ ಭೇಟಿ ನೀಡುತ್ತಿದ್ದಾರೆ.

ತೋಟಗಾರಿಕೆಯ ಕುಂಬಾರ ಸರ್ ಅವರ ಮಾರ್ಗದರ್ಶನದಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಸಹೋದರರ ಶ್ರಮದೊಂದಿಗೆ ಕೃಷಿಯಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವ ಹಂಬಲವಿದೆ.
–ಅರವಿಂದ ಕಟಗಿ, ರೈತ
ಶಿರಹಟ್ಟಿ ತಾಲ್ಲೂಕಿನ ರಣತೂರು ಗ್ರಾಮದ ಅರವಿಂದ ಕಟಗಿಯವರ ತೋಟಕ್ಕೆ ಕೃಷಿ ವಿಜ್ಞಾನಿಗಳು ಭೇಟಿ ನೀಡಿರುವುದು.
ಶಿರಹಟ್ಟಿ ತಾಲ್ಲೂಕಿನ ರಣತೂರು ಗ್ರಾಮದ ಅರವಿಂದ ಕಟಗಿಯವರ ತೋಟಕ್ಕೆ ಕೃಷಿ ವಿಜ್ಞಾನಿಗಳು ಭೇಟಿ ನೀಡಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT