ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ‘ಖಾತ್ರಿ’ಗೆ ಹೊಸ ಜಾಬ್‌ ಕಾರ್ಡ್‌

ಬ್ಯಾಂಕ್‌ ಖಾತೆ–ಆಧಾರ್‌ ಜೋಡಣೆ ಕಡ್ಡಾಯ; ವೇತನ ಪಾವತಿ ವಿಳಂಬಕ್ಕೆ ಕ್ರಮ
Last Updated 7 ಡಿಸೆಂಬರ್ 2018, 17:50 IST
ಅಕ್ಷರ ಗಾತ್ರ

ಗದಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳಿಗೆ ಕಳೆದೊಂದು ತಿಂಗಳಿಂದ ಗ್ರಾಮ ಪಂಚಾಯ್ತಿಗಳಲ್ಲಿ ಹೊಸ ಹೊಸ ಉದ್ಯೋಗ ಚೀಟಿ (ಜಾಬ್‌ ಕಾರ್ಡ್‌) ವಿತರಿಸಲಾಗುತ್ತಿದೆ. ಈ ಹಿಂದೆ ವಿತರಿಸಲಾದ ಜಾಬ್‌ ಕಾರ್ಡ್‌ನ ಅವಧಿ 5 ವರ್ಷ ಮುಗಿದಿದ್ದು, ಬಣ್ಣ ಮಾಸಿರುವ, ಹರಿದು ಹೋಗಿರುವ, ಯಾವುದೇ ರೀತಿಯಲ್ಲಿ ಹಾನಿಯಾಗಿರುವ ಕಾರ್ಡ್‌ಗಳ ಬದಲಿಗೆ, ಹೊಸ ಕಾರ್ಡ್‌ಗಳನ್ನು ಪಡೆದುಕೊಳ್ಳಬಹುದು.

ಹೊಸ ಕಾರ್ಡ್‌ ಪಡೆದುಕೊಳ್ಳುವುದು ಕಡ್ಡಾಯ. ಹಳೆಯ ಕಾರ್ಡ್‌ ಇನ್ನು ಮುಂದೆ ಚಾಲ್ತಿಯಲ್ಲಿ ಇರುವುದಿಲ್ಲ. ಕಾರ್ಮಿಕರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳಲ್ಲಿ, ತಮ್ಮ ಆಧಾರ್‌ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್‌ ಖಾತೆಯ ಪಾಸ್‌ಬುಕ್‌ನ ನಕಲು ಪ್ರತಿ ಸಲ್ಲಿಸಿ ಹೊಸ ಕಾರ್ಡ್‌ ಪಡೆದುಕೊಳ್ಳಬಹುದು. ಹಿಂದೆ ಕುಟುಂಬವೊಂದಕ್ಕೆ ಒಂದೇ ಜಾಬ್ ಕಾರ್ಡ್ ನೀಡಲಾಗುತ್ತಿತ್ತು. ಆದರೆ, ಇದೀಗ ಕುಟುಂಬದ ಅರ್ಹ ಪ್ರತಿ ಸದಸ್ಯರಿಗೂ ಪ್ರತ್ಯೇಕ ಕಾರ್ಡ್ ನೀಡಲಾಗುತ್ತಿದೆ.

ಹೊಸ ಜಾಬ್‌ ಕಾರ್ಡ್‌ನ ಭೌತಿಕ ಸ್ವರೂಪದಲ್ಲಿ ಬದಲಾವಣೆಯೇನೂ ಆಗಿಲ್ಲ. ಹಿಂದೆ ನೀಡಲಾಗಿದ್ದ ಸಂಖ್ಯೆಯೂ ಬದಲಾಗಿಲ್ಲ. ಆದರೆ, ಹೊಸ ಕಾರ್ಡ್‌ ವಿತರಿಸುವಾಗ ಗ್ರಾಮ ಪಂಚಾಯ್ತಿ ‘ಪಿಡಿಒ, ಆತ ನೈಜ ಫಲಾನುಭವಿಯೇ ಅಲ್ಲವೇ ಎನ್ನುವುದನ್ನು ಮತ್ತೊಮ್ಮೆ ಖಾತ್ರಿ ಪಡಿಸಿಕೊಳ್ಳುತ್ತಾನೆ. ಮುಖ್ಯವಾಗಿ ಜಾಬ್‌ ಕಾರ್ಡ್‌ನಲ್ಲಿ ಹೆಸರಿರುವ ವ್ಯಕ್ತಿಯ ಆಧಾರ್‌ ಸಂಖ್ಯೆಯು, ಆತನ ಬ್ಯಾಂಕ್‌ ಖಾತೆಗೆ ಜೋಡಣೆ ಆಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಕುಟುಂಬದ ಮುಖ್ಯಸ್ಥನ ಭಾವಚಿತ್ರ ಪಡೆದುಕೊಂಡು ಕಾರ್ಡ್‌ ವಿತರಿಸುತ್ತಾನೆ. ಮೂರನೆಯ ವ್ಯಕ್ತಿಗೆ ವೇತನ ಪಾವತಿ ತಪ್ಪಿಸಲು ಮತ್ತು ಅರ್ಹ ಫಲಾನುಭವಿಯ ಬ್ಯಾಂಕ್‌ ಖಾತೆಗೆ ಸಕಾಲದಲ್ಲಿ ವೇತನ ಪಾವತಿ ಆಗುವುದನ್ನು ಖಾತ್ರಿಪಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಈ ಕ್ರಮ ಕೈಗೊಂಡಿದೆ.

ಆಧಾರ್ ಸಂಖ್ಯೆ ನೋಂದಣಿ ತ್ವರಿತ
ಹೊಸ ಜಾಬ್‌ ಕಾರ್ಡ್‌ ವಿತರಣೆ ಜತೆಯಲ್ಲೇ, ಈ ಕಾರ್ಡ್‌ಗೆ ಆಧಾರ್ ಸಂಖ್ಯೆ ಜೋಡಣೆಯನ್ನೂ ತ್ವರಿತಗೊಳಿಸಲಾಗಿದೆ. ಜಿಲ್ಲೆಯಲ್ಲಿ 1.29 ಲಕ್ಷ ಸಕ್ರಿಯ ಜಾಬ್‌ಕಾರ್ಡ್‌ಗಳಿದ್ದು, ಇದರಲ್ಲಿ 77,571 ಕಾರ್ಡ್‌ಗಳು ಆಧಾರ್‌ ಮತ್ತು ಬ್ಯಾಂಕ್‌ ಖಾತೆ ಜತೆಗೆ ಜೋಡಣೆ ಆಗಿವೆ. ಸದ್ಯ ಶೇ65 ರಷ್ಟು ಜಾಬ್‍ಕಾರ್ಡ್‍ಗಳಿಗೆ ಮಾತ್ರ ಆಧಾರ್ ಜೋಡಣೆ ಆಗಿದೆ. ಇದನ್ನು ಸರಾಸರಿ ಶೇ 95ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ’ ಎನ್ನುತ್ತಾರೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು.

ಅಂಗವಿಕಲರಿಗೆ ವಿಶೇಷ ಕಾರ್ಡ್
ಕುಟುಂಬ ಸದಸ್ಯರ ಪೈಕಿ ಯಾರಿಗಾದರೂ ಶೇ60ಕ್ಕಿಂತ ಹೆಚ್ಚಿನ ಅಂಗವಿಕತೆ ಹೊಂದಿದ್ದರೆ, ಅವರಿಗೆ ಪ್ರತ್ಯೇಕ ಜಾಬ್‌ ಕಾರ್ಡ್ ನೀಡಲಾಗುತ್ತಿದೆ.ಜತೆಗೆ ಅಂತಹ ವ್ಯಕ್ತಿಗಳಿಗೆ ನರೇಗಾದಡಿ ವರ್ಷಕ್ಕೆ 100 ದಿನಗಳ ಉದ್ಯೋಗ ಒದಗಿಸುವ ಮೂಲಕ, ಆ ವ್ಯಕ್ತಿಯನ್ನು ಒಂದು ಕುಟುಂಬದಂತೆ ಪರಿಗಣಿಸಲಾಗುತ್ತದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 219 ಮಂದಿ ಅಂಗವಿಕಲರಿಗೆ ಕೆಲಸ ಲಭಿಸಿದೆ

*
ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯ ಮಟ್ಟದಲ್ಲಿ 11ನೇ ಸ್ಥಾನದಲ್ಲಿದೆ. ಪ್ರಸಕ್ತ ಸಾಲಿನಲ್ಲಿ 19.76 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ಇದೆ.
-ಮಂಜುನಾಥ ಚವ್ಹಾಣ, ಜಿಲ್ಲಾ ಪಂಚಾಯ್ತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT