ಶನಿವಾರ, ಡಿಸೆಂಬರ್ 14, 2019
26 °C
ಅಂದರ್‌ ಬಾಹರ್‌, ಅಕ್ರಮ ಮದ್ಯ ಮಾರಾಟವೂ ಜೋರು

ಗದಗದಲ್ಲಿ ಯುವಕರಿಗೆ ‘ಕಲ್ಯಾಣಿ ನೈಟ್‌’ ಗುಂಗು!

ಅರುಣಕುಮಾರ ಹಿರೇಮಠ Updated:

ಅಕ್ಷರ ಗಾತ್ರ : | |

ಗದಗ: ರಾತ್ರಿ 9ಗಂಟೆಗೆ ಓಪನ್‌ ಆಗಿ, ಮಧ್ಯರಾತ್ರಿ 12 ಗಂಟೆಗೆ ಕ್ಲೋಸ್‌ (ಒ.ಸಿ) ಆಗುವ, ಸಣ್ಣ ಚೀಟಿಯಲ್ಲಿ ಬರೆದುಕೊಡುವ ಅಂಕಿಗಳ ಮೇಲೆ ಲಕ್ಷಾಂತರ ರೂಪಾಯಿ ಪಣ ಕಟ್ಟುವ ‘ಕಲ್ಯಾಣಿ ನೈಟ್‌’ ಎಂಬ ಮಟ್ಕಾ ದಂಧೆ ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದೃಷ್ಟದ ಮೇಲೆ ಗೆಲುವು ತಂದುಕೊಡುವ ಈ ಜೂಜಾಟದ ಮೋಹದ ಪಾಶಕ್ಕೆ ನಿತ್ಯ ನೂರಾರು ಜನರು ಸಿಲುಕುತ್ತಿದ್ದಾರೆ.

ಕಲ್ಯಾಣಿ ನೈಟ್‌ ಮಾತ್ರವಲ್ಲ, ಅಂದರ್‌– ಬಾಹರ್‌ ಇಸ್ಪೀಟ್‌ ಆಟವೂ ಜಿಲ್ಲೆಯಲ್ಲಿ ಜೋರಾಗಿದೆ. ದೀಪಾವಳಿ ಮುಗಿದರೂ ‘ಅಂದರ್‌– ಬಾಹರ್‌’ಗೆ ತೆರೆಬಿದ್ದಿಲ್ಲ. ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕಳೆದ 15 ದಿನಗಳಲ್ಲಿ (ನ.1ರಿಂದ 15) ಮಟ್ಕಾ ದಂಧೆಗೆ ಸಂಬಂಧಿಸಿದಂತೆ 22 ಪ್ರಕರಣಗಳು ದಾಖಲಾಗಿವೆ. ಅಂದರ್‌–ಬಾಹರ್‌ ಇಸ್ಪೀಟ್‌ ಜೂಜಿಗೆ ಸಂಬಂಧಿಸಿದ 23 ಪ್ರಕರಣಗಳು ದಾಖಲಾಗಿದ್ದು ಪೊಲೀಸರು ₹3.24 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.

ಇಸ್ಪೀಟ್‌ ಮತ್ತು ಮಟ್ಕಾ ದಂಧೆ ಮಾತ್ರವಲ್ಲ, ಅಕ್ರಮ ಮದ್ಯ ಮಾರಾಟವೂ ಜಿಲ್ಲೆಯಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಕಳೆದ ಎರಡು ವಾರಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ 52 ಪ್ರಕರಣಗಳು ದಾಖಲಾಗಿದ್ದು, ₹34 ಸಾವಿರ ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯ ಕಳಸಾಪೂರ ತಾಂಡಾ, ಮಲ್ಲಸಮುದ್ರ, ಕೋಟುಮಚಗಿ, ಅಸುಂಡಿ, ಅಡವಿಸೋಮಾಪುರ, ಚಿಕ್ಕಹಂದಿಗೋಳ, ಹಿರೇಹಂದಿಗೋಳ, ಕುರ್ತಕೋಟಿ, ರೋಣ ತಾಲ್ಲೂಕಿನ ಕೊತಬಾಳ, ಹಿರೇಹಾಳ, ಸವಡಿ, ಬೆಳವಣಿಕಿ, ಶಿರಹಟ್ಟಿ ತಾಲ್ಲೂಕಿನ ಜಲ್ಲಿಗೇರಿ, ಶಿವಾಜಿ ನಗರ, ಮುಂಡರಗಿ ತಾಲ್ಲೂಕಿನ ಡಂಬಳ, ಬಾಗೇವಾಡಿ, ಬೆಣ್ಣಿಹಳ್ಳಿ, ಪೇಠಾಲೂರ, ಗಜೇಂದ್ರಗಡ ಪಟ್ಟಣದಲ್ಲಿ ಆಯ್ದ ಕಿರಾಣಿ ಅಂಗಡಿ, ಚಹಾ ಅಂಗಡಿಗಳಲ್ಲೂ ಓರಿಜಿನಲ್‌ ಚಾಯ್ಸ್‌, ಬೆಂಗಳೂರ ವಿಸ್ಕಿಯ ಟೆಟ್ರಾ ಪ್ಯಾಕ್‌ಗಳು ಸುಲಭವಾಗಿ ಸಿಗುತ್ತಿದೆ.

ಜಿಲ್ಲೆಯಲ್ಲಿ ಕಣ್ಮರೆಯಾಗಿದ್ದ ಮಟ್ಕಾ ದಂಧೆ ಮತ್ತೆ ವ್ಯಾಪಕವಾಗಿರುವುದು ಪೊಲೀಸರಿಗೆ ಸವಾಲಾಗಿದೆ. ₹1ಕ್ಕೆ ₹80 ಲಾಭ ಬರುತ್ತದೆ ಎನ್ನುವ ಬಾಂಬೆ ಒಸಿ ಕೂಡ ಜೂಜುಗಾರರ ನಡುವೆ ಜನಪ್ರಿಯತೆ ಗಳಿಸಿದೆ. ಗದಗ, ಮುಂಡರಗಿ, ಗಜೇಂದ್ರಗಡ ತಾಲ್ಲೂಕು ವ್ಯಾಪ್ತಿಯಲ್ಲಿ ಒಸಿ ಪ್ರಕರಣಗಳು ಗರಿಷ್ಠ ಸಂಖ್ಯೆಯಲ್ಲಿದ್ದರೆ, ರೋಣ, ನರೇಗಲ್‌ ಹಾಗೂ ನರಗುಂದ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಂದರ್‌–ಬಾಹರ್‌ ಜೂಜಾಟದ ಪ್ರಕರಣಗಳು ಹೆಚ್ಚು ದಾಖಲಾಗಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು