ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುರ್ತಗೇರಿ: ಮೂಲ ಸೌಲಭ್ಯದ ಕೊರತೆ

ನಿರ್ಮಾಣವಾದ ಸಿಸಿ ರಸ್ತೆ, ಚರಂಡಿ, ಮಳೆ ನೀರು ಶೇಖರಣೆಯಿಂದ ದುರ್ನಾತ
Published 19 ಜೂನ್ 2024, 4:45 IST
Last Updated 19 ಜೂನ್ 2024, 4:45 IST
ಅಕ್ಷರ ಗಾತ್ರ

ಗಜೇಂದ್ರಗಡ: ಸಮೀಪದ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ್ತಗೇರಿ ಗ್ರಾಮದ ಬಹುತೇಕ ಓಣಿಗಳು ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿವೆ.

ಗ್ರಾಮದ ಹರಿಜನ ಕೇರಿಯ ಪಕ್ಕದಲ್ಲಿರುವ ತಗ್ಗು ಪ್ರದೇಶದಲ್ಲಿ ಮಳೆಗಾಲದಲ್ಲಿ ಮಳೆ ನೀರು ಶೇಖರಣೆಯಾಗಿ ದುರ್ನಾತ ಬೀರುತ್ತಿದ್ದು, ಹಾವು-ಚೇಳುಗಳ ಉಪಟಳ ಹೆಚ್ಚಾಗುತ್ತಿದೆ. ಗ್ರಾಮದ ಕಲಕೇರಿಯವರ ಪ್ಲಾಟ್‌ ಹಾಗೂ ಸೈನಿಕ ನಗರದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣವಾಗಿಲ್ಲ. ಹೀಗಾಗಿ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿರುವುದರಿಂದ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಗಜೇಂದ್ರಗಡ- ರೋಣ ರಸ್ತೆಯಿಂದ ಗದಗ ಮಾರ್ಗದಲ್ಲಿ ಜನರು ತ್ಯಾಜ್ಯ ಎಸೆಯುವುದು, ಬಹಿರ್ದೆಸೆಗೆ ಹೋಗುತ್ತಿರುವುದರಿಂದ ದುರ್ನಾತ ಬೀರುತ್ತಿದೆ.

‘ಪುರ್ತಗೇರಿ ಗ್ರಾಮದಲ್ಲಿ ಈ ಹಿಂದೆ ಕಳಕಪ್ಪ ಬಂಡಿ ಅವರು ಶಾಸಕರಿದ್ದಾಗ ಹಂತ ಹಂತವಾಗಿ ಸುಮಾರು ₹1 ಕೋಟಿ ಅನುದಾನದಲ್ಲಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿತ್ತು. ಅಲ್ಲದೆ ₹1.5 ಕೋಟಿ ವೆಚ್ಚದಲ್ಲಿ ಗಜೇಂದ್ರಗಡ- ರೋಣ ಮುಖ್ಯ ರಸ್ತೆಯಿಂದ ಗ್ರಾಮದ ಮೂಲಕ ಗದಗ ರಸ್ತೆವರೆಗೆ ಡಾಂಬರ್‌ ರಸ್ತೆ ನಿರ್ಮಿಸಲಾಗಿದೆ. ಕಲಕೇರಿಯವರ ಪ್ಲಾಟ್‌, ಸೈನಿಕ ನಗರದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣವಾಗಬೇಕಿದೆ. ಗ್ರಾಮ ಪಂಚಾಯಿತಿ ಅನುದಾನದಲ್ಲಿ ದೊಡ್ಡ ಕಾಮಗಾರಿಗಳನ್ನು ಮಾಡಲು ಅನುದಾನದ ಕೊರತೆ ಉಂಟಾಗುತ್ತದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಾಳಾಜಿರಾವ್‌ ಭೋಸಲೆ ಹೇಳಿದರು.

ಮನವಿಗೂ ಸ್ಪಂದಿಸದ ಆಡಳಿತ:

ಗ್ರಾಮದಲ್ಲಿರುವ ಸೈನಿಕ ನಗರದಿಂದ ಗಜೇಂದ್ರಗಡ-ರೋಣ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆ ದುರಸ್ತಿ ಸೇರಿದಂತೆ ಕಾಲೊನಿಯಲ್ಲಿ ಸಿಸಿ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಹಲವು ಬಾರಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಈ ವರೆಗೂ ಕಾಲೊನಿಯಲ್ಲಿ ಯಾವುದೇ ಸೌಲಭ್ಯ ಕಲ್ಪಿಸಲು ಗ್ರಾಮ ಪಂಚಾಯಿತಿ ಆಡಳಿತ ಮುಂದಾಗಿಲ್ಲ ಎಂದು ನಿವೃತ್ತ ಸೈನಿಕರು ದೂರುತ್ತಿದ್ದಾರೆ.

ಸೈನಿಕ ನಗರಕ್ಕೆ ಮೂಲ ಸೌಲಭ್ಯ ಉದ್ಯಾನದಲ್ಲಿ ವಾಕಿಂಗ್‌ ಪಾತ್‌ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ

-ಎಚ್.ಆರ್.ಮುಜಾವರ ಮಾಜಿ ಅಧ್ಯಕ್ಷ ಸೈನಿಕರ ಕ್ಷೇಮಾಭಿವೃದ್ಧಿ ಸಂಘ

ಪುರ್ತಗೇರಿ ಗ್ರಾಮದಲ್ಲಿರುವ ಸೈನಿಕ ನಗರಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಜಿ.ಪಂ ತಾ.ಪಂ ಹಾಗೂ ಗ್ರಾ.ಪಂ ಅನುದಾನಗಳಲ್ಲಿ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ವಿಳಂಬವಾಗಿದೆ

-ಬಿ.ಎನ್.ಇಟಗಿಮಠ ಪಿಡಿಒ ಗ್ರಾಮ ಪಂಚಾಯ್ತಿ ರಾಮಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT