ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದದ ನೆಲ ಗದಗ: ಇಬ್ರಾಹಿಂ

ಯಂಗ್‌ ಇಂಡಿಯಾ’ಕ್ಕೆ ಬೆಳ್ಳಿಹಬ್ಬದ ಸಂಭ್ರಮ: ಸಾಧಕರಿಗೆ ಪ್ರಶಸ್ತಿ ಪ್ರದಾನ
Last Updated 28 ಡಿಸೆಂಬರ್ 2022, 4:00 IST
ಅಕ್ಷರ ಗಾತ್ರ

ಗದಗ: ‘ಕೋಮು ಸೌಹಾರ್ದದ ನಾಡು ಗದಗ ಜಿಲ್ಲೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ನಗರದ ಸಿ.ಎಸ್.ಪಾಟೀಲ ಪ್ರೌಢಶಾಲೆ ಆವರಣದಲ್ಲಿ ಯಂಗ್ ಇಂಡಿಯಾ ಪರಿವಾರದ ಬೆಳ್ಳಿ ಹಬ್ಬದ ಅಂಗವಾಗಿ ನಡೆದ ‘ಯಂಗ್ ಇಂಡಿಯಾ ಉತ್ಸವ 2022’ ಕಾರ್ಯಕ್ರಮದಲ್ಲಿ ಸಾಧಕರಿಗೆ ‘ಪ್ರೈಡ್ ಆಫ್ ಗದಗ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಶರಣರು, ಸೂಫಿ ಸಂತರು ನಡೆದಾಡಿದ ಈ ನೆಲದಲ್ಲಿ ಯಂಗ್ ಇಂಡಿಯಾ ಪರಿವಾರ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವುದು ಶ್ಲಾಘನೀಯ’ ಎಂದರು.

‘ವಚನಗಳನ್ನು ಹಿಂದಿಯೂ ಸೇರಿದಂತೆ ದೇಶದ ಎಲ್ಲ ಭಾಷೆಗಳಿಗೆ ತರ್ಜುಮೆ ಮಾಡಿಸಲು ಹಣ ಮೀಸಲಿಟ್ಟಿದ್ದೇವು. ಆದರೆ, ಕೇಶವ ಕೃಪಾ ಅದಕ್ಕೆ ಒಪ್ಪಲಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಬಸವತತ್ವ ಪ್ರಸಾರ ಮಾಡುತ್ತೇವೆ’ ಎಂದು ತಿಳಿಸಿದರು.

‘ಯಂಗ್ ಇಂಡಿಯಾ ಪರಿವಾರದ ವೆಂಕನಗೌಡ ಗೋವಿಂದಗೌಡ್ರ 25 ವರ್ಷಗಳಿಂದ ಸಾಮಾಜಿಕ ಸೇವೆ ಮಾಡುತ್ತಿದ್ದು, ಅವರು ನಮ್ಮೊಂದಿಗೆ ಕೈಜೋಡಿಸಿದರೆ ಅವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ನಮ್ಮದು’ ಎಂದು ಹೇಳಿದರು.

ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ, ‘ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳು ಯಂಗ್ ಇಂಡಿಯಾ ಪರಿವಾರದ ಚಟುವಟಿಕೆ, ಸಾಮಾಜಿಕ ಹೋರಾಟಕ್ಕೆ ಬೆನ್ನೆಲುಬಾಗಿದ್ದರು’ ಎಂದು ಸ್ಮರಿಸಿದರು.

ಯಂಗ್ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ, ‘ತರುಣ ಭಾರತ ಯೂಥ್ ಅಸೋಸಿಯೇಶನ್ ಯಂಗ್ ಇಂಡಿಯಾ ಪರಿವಾರವಾಗಿ ಪರಿವರ್ತನೆಗೊಂಡಿದೆ’ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂಡರಗಿ ತಾಲ್ಲೂಕು ವಿಸ್ತೀರ್ಣಾಧಿಕಾರಿ ಬಸವರಾಜ ಬಳ್ಳಾರಿ, ಸಿಐಡಿ ಕಾನೂನು ಸಲಹೆಗಾರ ಮಹೇಶ ವೈದ್ಯ, ಅಂತರರಾಷ್ಟ್ರೀಯ ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ, ಡಾ.ಗಿರೀಶ ಕುಲಕರ್ಣಿ, ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಎಸ್.ವೈ.ಚಿಕ್ಕಟ್ಟಿ, ಸನ್ಮಾರ್ಗ ಕಾಲೇಜಿನ ಚೇರಮನ್ ಪ್ರೊ.ರಾಜೇಶ ಕುಲಕರ್ಣಿ, ಸಿಟಿ ಟಿವಿ ಸುನೀಲ ತೆಂಬದಮನಿ, ಮುನೀರ ಎಚ್.ಅಹ್ಮದ, ನಗರಸಭೆ ಕಂದಾಯ ಅಧಿಕಾರಿ ಮಹೇಶ ಹಡಪದ, ಸುಷ್ಮಾ ಮೇಟಿ, ರಾಜೇಂದ್ರಸಿಂಗ್ ಬ್ಯಾಳಿ ಸೇರಿದಂತೆ 20 ಸಾಧಕರಿಗೆ ‘ಪ್ರೈಡ್ ಆಫ್ ಗದಗ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಿವಾನಂದ ಬೃಹನ್ಮಠದ ಅಭಿನವ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುಚ್ಚಣ್ಣ ಶಹಪುರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ, ಯುಸೂಫ್‌ ನಮಾಜಿ, ಚಂದ್ರು ಚವ್ಹಾಣ ಇದ್ದರು.

ಸಂಗೀತ ರಸದೌತಣ

‘ಯಂಗ್ ಇಂಡಿಯಾ ಉತ್ಸವ’ದ ಅಂಗವಾಗಿ ಏರ್ಪಡಿಸಿದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್‌, ಹಿನ್ನಲೆ ಗಾಯಕಿ ಚೈತ್ರಾ, ಮಿಮಿಕ್ರಿ ದಯಾನಂದ ಮತ್ತು ತಂಡದವರು ಸಾವಿರಾರು ಮಂದಿ ಪ್ರೇಕ್ಷಕರನ್ನು ರಂಜಿಸಿದರು.

ಆಟೊ ಚಾಲಕರೊಂದಿಗೆ ಸಮಾಜದ ಶ್ರಮಿಕ ವರ್ಗದ ಸಂಘಟನೆ, ಜಾಗೃತಿಗೊಳಿಸುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಜಾತಿ, ಪಕ್ಷರಹಿತ ಸಂಘಟನೆ ಮಾಡಿರುವ ನಮ್ಮ ಪರಿವಾರ 25 ವರ್ಷಗಳನ್ನು ಪೂರೈಸಿದೆ. ಜನರ ಸಹಕಾರ ನಿರಂತರವಾಗಿರಲಿ
ವೆಂಕನಗೌಡ ಗೋವಿಂದಗೌಡ್ರ, ಯಂಗ್‌ ಇಂಡಿಯಾ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT