ಬನಹಟ್ಟಿ: ಅಧ್ಯಕ್ಷರ ಆಯ್ಕೆಯಲ್ಲಿ ಗೊಂದಲ, ತನಿಖೆಗೆ ತಹಶೀಲ್ದಾರ್‌ಗೆ ಮನವಿ
ನರಗುಂದ: ತಾಲ್ಲೂಕಿನ ಬನಹಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆಯಲ್ಲಿ ಗೊಂದಲ ಉಂಟಾಗಿ ಬಿಜೆಪಿ ಬೆಂಬಲಿತರು ಅಧ್ಯಕ್ಷರ ಆಯ್ಕೆ ನ್ಯಾಯ ಸಮ್ಮತವಾಗಿಲ್ಲ. ತನಿಖೆ ಮಾಡುವಂತೆ ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ ಘಟನೆ ಗುರುವಾರ ನಡೆದಿದೆ.
ಒಟ್ಟು 13 ಸ್ಥಾನಗಳಲ್ಲಿ 7 ಮಂದಿ ಬಿಜೆಪಿ ಬೆಂಬಲಿತ ಹಾಗೂ 6 ಮಂದಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎರಡೂ ಕಡೆಯ ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಬಿಜೆಪಿ ಬೆಂಬಲಿತರ ಗುಂಪಿನಲ್ಲಿ ಒಬ್ಬ ಮಹಿಳಾ ಸದಸ್ಯರು ಮತದಾನ ಮಾಡುವ ಪ್ರಕ್ರಿಯೆ ಗೊತ್ತಾಗದಿರುವಾಗ ನಿಯಮಗಳ ಪ್ರಕಾರ ಚುನಾವಣಾ ಅಧಿಕಾರಿ ಮೂಲಕ ಮತ ಚಲಾಯಿಸಿದ್ದಾರೆ. ಚುನಾವಣೆ ಪ್ರಕ್ರಿಯೆ ಮುಗಿದ ಮೇಲೆ ಮತ ಎಣಿಕೆ ನಂತರ ಅಧ್ಯಕ್ಷರ ಘೋಷಣೆ ನಡೆದಿದೆ.
ನಂತರ ಬಿಜೆಪಿ ಬೆಂಬಲಿತರು ಹಾಗೂ ಚುನಾವಣಾಧಿಕಾರಿ ಮೂಲಕ ಮತ ಚಲಾಯಿಸಿದ ಸದಸ್ಯರು, ಚುನಾವಣಾಧಿಕಾರಿ ಸರಿಯಾಗಿ ಚುನಾವಣೆ ಪ್ರಕ್ರಿಯೆ ನಡೆಸಿಲ್ಲ ಎಂದು ಆರೋಪಿಸಿದರು. ಜೊತೆಗೆ ಚುನಾವಣೆ ರದ್ದು ಮಾಡಬೇಕು ಎಂದು ಪಟ್ಟು ಹಿಡಿದರು. ಇದು ನ್ಯಾಯ ಸಮ್ಮತವಲ್ಲ, ಅನ್ಯಾಯವಾಗಿದೆ ಎಂದು ಚುನಾವಣೆ ಅಧಿಕಾರಿಗಳ ಮೇಲೆ ದೂರು ನೀಡುವ ಮೂಲಕ ತನಿಖೆಗೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ: ತಹಶೀಲ್ದಾರ್ ಎ.ಡಿ.ಅಮರವಾಡಗಿ ಬನಹಟ್ಟಿ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿ, ‘ಅಧ್ಯಕ್ಷರ ಆಯ್ಕೆ ನಿಯಮಗಳ ಪ್ರಕಾರ ನಡೆದಿದೆ. ನೇಮಕಗೊಂಡ ಚುನಾವಣಾಧಿಕಾರಿ ಸರಿಯಾಗಿ ನಿಯಮ ಪಾಲಿಸಿ ಚುನಾವಣೆ ನಡೆಸಿದ್ದಾರೆ’ ಎಂದರು.
ಆದರೂ ಇದಕ್ಕೆ ಒಪ್ಪದ ಒಂದು ಗುಂಪಿನ ಸದಸ್ಯರು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.
‘ಈ ಬಗ್ಗೆ ವರದಿ ತಯಾರಿಸಿ ಜಿಲ್ಲಾಧಿಕಾರಿಗೆ ತಿಳಿಸಲಾಗುವುದು’ ಎಂದು ತಹಶೀಲ್ದಾರ್ ಅಮರವಾಡಗಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.