ಗುರುವಾರ , ಜನವರಿ 20, 2022
15 °C
ಕಾಂಗ್ರೆಸ್‌ ಹಿರಿಯ ನಾಯಕ ಎಚ್‌.ಕೆ. ಪಾಟೀಲ ಆಗ್ರಹ

ಓಮೈಕ್ರಾನ್‌ ಪರೀಕ್ಷಾ ವರದಿ ಶೀಘ್ರ ಕೈಸೇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ರಾಜ್ಯದಲ್ಲಿ ಓಮೈಕ್ರಾನ್‌ ಆಂತಕ ದಿನೇ ದಿನೇ ಹೆಚ್ಚುತ್ತಿದ್ದು ವೈರಸ್‌ ಹರಡುವುದನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಜತೆಗೆ 136ನೇ ತಾಂತ್ರಿಕ ಸಲಹಾ ಮಂಡಳಿ ಮಾಡಿರುವ ಶಿಫಾರಸುಗಳನ್ನು ತಕ್ಷಣವೇ ಬಹಿರಂಗಪಡಿಸಿ, ಅನುಷ್ಠಾನಗೊಳಿಸಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ಒತ್ತಾಯಿಸಿದರು.‌

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಿಂದ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ, ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಬೇಕು. ಜಿನೋಮ್‌ ಸೀಕ್ವೆನ್ಸಿಂಗ್ ಪರೀಕ್ಷಾ ವರದಿ ಶೀಘ್ರವಾಗಿ ದೊರಕಿಸಲು ಕ್ರಮವಹಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಅಗತ್ಯವಿರುವ ಪರಿಣಾಮಕಾರಿ ಚಿಕಿತ್ಸಾ ವಿಧಾನವನ್ನು ತಕ್ಷಣವೇ ಪ್ರಕಟಿಸಬೇಕು’ ಎಂದು ಆಗ್ರಹಿಸಿದರು.

‘ನ.20ರಂದು ಬೆಂಗಳೂರಿನಲ್ಲಿ ನಡೆದ ವೈದ್ಯರ ಸಮ್ಮೇಳನದಲ್ಲಿ 250 ಮಂದಿ ವೈದ್ಯರು ಪಾಲ್ಗೊಂಡಿದ್ದರು. ಅವರಲ್ಲಿ ರಾಜ್ಯದ ಒಬ್ಬ ವೈದ್ಯರಿಗೆ ಓಮೈಕ್ರಾನ್‌ ಸೋಂಕು ದೃಢಪಟ್ಟಿದೆ. ಜತೆಗೆ ಅವರ ಕುಟುಂಬದ ಸದಸ್ಯರಿಗೂ ಕೋವಿಡ್‌ ದೃಢಪಟ್ಟಿದ್ದು, ಅದು ಓಮೈಕ್ರಾನ್‌ ಅಲ್ಲವೇ ಹೌದೇ ಎಂಬುದು ಇನ್ನಷ್ಟೇ ದೃಢಪಡಬೇಕಿದೆ. ಸಮ್ಮೇಳನ ನಡೆದು 13 ದಿನಗಳು ಕಳೆದಿವೆ. ಆದರೆ, ಅಲ್ಲಿ ಪಾಲ್ಗೊಂಡಿದ್ದವರ ಪಟ್ಟಿ ಸಂಗ್ರಹಿಸಿ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವುದು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ’ ಎಂದು ತಿಳಿಸಿದರು.

‘ವೈದ್ಯರ ಸಮ್ಮೇಳನಕ್ಕೆ ಬಂದವರು 125 ಕ್ಯಾಬ್‌ಗಳನ್ನು ಬಳಕೆ ಮಾಡಿದ್ದಾರೆ. ಸಮ್ಮೇಳನ ಮುಗಿಸಿ ಮಾಲ್‌, ರೆಸ್ಟೊರೆಂಟ್‌ಗಳಿಗೆ ಅಡ್ಡಾಡಿದ್ದಾರೆ. ಇದರಿಂದಾಗಿ ಸೋಂಕು ಹೆಚ್ಚು ಜನರಿಗೆ ಹರಡಿರಬಹುದು’ ಎಂಬ ಭೀತಿ ವ್ಯಕ್ತಪಡಿಸಿದರು.

‘ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಡಿ.2ರ ಸಂಜೆ ವೇಳೆಗಾಗಲೇ 16 ಮಂದಿಯಲ್ಲಿ ಓಮೈಕ್ರಾನ್‌ ಸೋಂಕು ದೃಢಪಟ್ಟಿದೆ. ಪರಿಸ್ಥಿತಿ ಗಂಭೀರಗೊಳ್ಳುತ್ತಿದ್ದರೂ ಸರ್ಕಾರ ಮಾತ್ರ ಇನ್ನೂ ವಿಳಂಬ ಧೋರಣೆ ಅನುಸರಿಸುತ್ತಿದೆ. ಕಳೆದ ವಾರ 466 ಮಂದಿ ವಿದೇಶಿಗರು ಬೆಂಗಳೂರಿಗೆ ಬಂದಿದ್ದಾರೆ. ಅವರಲ್ಲಿ 100 ಮಂದಿ ಮಾತ್ರ ತಪಾಸಣೆಗೆ ಒಳಪಟ್ಟಿ‌ದ್ದಾರೆ. ಸೋಂಕು ದೃಢಪಟ್ಟ ನಂತರ ಸರ್ಕಾರ ಉಳಿದ ವಿದೇಶಿಗರ ಮಾಹಿತಿ ಕಲೆ ಹಾಕಲು ಮುಂದಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊರೊನಾ ತಡೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ತುರ್ತು ಸಭೆ, ಚರ್ಚೆ ನಡೆಸಲು ಅನುವಾಗುವಂತೆ ಚುನಾವಣಾ ಆಯೋಗ ನೀತಿ ಸಂಹಿತೆಯಲ್ಲಿನ ನಿಯಮಾವಳಿ ಸಡಿಲಿಸಬೇಕು
ಎಚ್.ಕೆ.ಪಾಟೀಲ, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.