ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ಸಚಿವ ಎಚ್‌.ಕೆ.‍ಪಾಟೀಲ ತರಾಟೆ

ಗದಗ ಕ್ಷೇತ್ರಕ್ಕೆ ಸಂಬಂಧಿಸಿದ 19 ವಿಷಯಗಳ ಪ್ರಗತಿ ಪರಿಶೀಲನೆ
Published 30 ಮೇ 2023, 16:24 IST
Last Updated 30 ಮೇ 2023, 16:24 IST
ಅಕ್ಷರ ಗಾತ್ರ

ಗದಗ: ‘24/7 ಕುಡಿಯುವ ನೀರು ಯೋಜನೆ ಅಡಿ ಅವಳಿ ನಗರಕ್ಕೆ ‘ಎ’ ಪಾಯಿಂಟ್‌ನಿಂದ ಎಷ್ಟು ನೀರು ಬರುತ್ತದೆ ಎಂದು ಅಳೆಯುವ ಫ್ಲೋ ಮೀಟರ್ ಈವರೆಗೂ ಅಳವಡಿಸಿಲ್ಲ. ತುರ್ತು ಸಂದರ್ಭದಲ್ಲಿ ನಿರಂತರ ನೀರು ಪೂರೈಕೆಗಾಗಿ ನೀರಿನ ಸಂಗ್ರಹ ಮಟ್ಟವನ್ನು ಕಾಯ್ದುಕೊಳ್ಳಲು ರೂಪಿಸಿದ್ದ ಜಲ ಸಂಗ್ರಹಗಾರ ನಿರ್ಮಾಣ ಕಾಮಗಾರಿ ಕೂಡ ವಿಳಂಬಗೊಂಡಿದೆ. ಜನರ ಸಮಸ್ಯೆ ನಿವಾರಿಸಲು ಅಧಿಕಾರಿಗಳ ನಿಷ್ಕಾಳಜಿ ಸಹಿಸುವುದಿಲ್ಲ’ ಸಚಿವ ಎಚ್.ಕೆ.ಪಾಟೀಲ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಗದಗ ಮತಕ್ಷೇತ್ರದ 19 ವಿಷಯಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ಕುಡಿಯುವ ನೀರಿನ ವಿಷಯ ರಾಜಕೀಯ ಆಗಬೇಕು ಎಂಬ ಉದ್ದೇಶದಿಂದ ಸಮಸ್ಯೆ ಉಲ್ಬಣ ಆಗುವಂತೆ ಮಾಡಿದ್ದೀರಿ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ‘ಕೂಡಲೇ ಫ್ಲೋ ಮೀಟರ್‌ ಅಳವಡಿಸಬೇಕು. ನೀರಿನ ಸೋರಿಕೆ ತಡೆಗಟ್ಟಲು ಕ್ರಮವಹಿಸಬೇಕು. ಅವಳಿ ನಗರದ ಒಳಚರಂಡಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾತನಾಡಿ, ಒಳಚರಂಡಿ ಯೋಜನೆಯಡಿ ಈಗಾಗಲೇ ಶೇ 40ರಷ್ಟು ಪೈಪ್‍ಲೈನ್ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ಉಳಿದ ಕಾರ್ಯವನ್ನು ಪೂರ್ಣಗೊಳಿಸುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತ ರಮೇಶ ಸುಣಗಾರ ಮಾತನಾಡಿ, ‘15 ದಿನದೊಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

ಹಕ್ಕುಪತ್ರ ಹಂಚಿಕೆಯಲ್ಲಿ ವಿಳಂಬವಾಗುತ್ತಿದ್ದು, ನಗರಸಭೆಯಿಂದ ನಮೂನೆ 3 ವಿತರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು. ನಮೂನೆ 3 ವಿತರಣೆಯಲ್ಲಿ ವಿಳಂಬಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪರಿಶೀಲಿಸಿ ವರದಿ ಸಲ್ಲಿಸಬೇಕು. ನಗರಸಭೆಗೆ ಸಂಬಂಧಪಟ್ಟಂತೆ ವಿಭಾಗವಾರು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ನಗರಸಭೆಯಲ್ಲಿ ಏಜೆಂಟರ ಹಾವಳಿಗೆ ಕಡಿವಾಣ ಹಾಕಬೇಕು. ಅಕ್ರಮ ಚಟುವಟಿಕೆ ನಡೆಸಿದಲ್ಲಿ ಏಜೆಂಟರ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಲಾಗುವುದು ಎಂದು ನಾಮಫಲಕ ಅಳವಡಿಸಬೇಕು ಎಂದು ಸಚಿವ ಎಚ್‌.ಕೆ.ಪಾಟೀಲ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಸುಶೀಲಾ ಬಿ ಮಾತನಾಡಿ, ‘ಜಿಲ್ಲೆಯಲ್ಲಿ ಒಟ್ಟು 439 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಈ ಪೈಕಿ 412 ಘಟಕಗಳು ಸುಸ್ಥಿತಿಯಲ್ಲಿವೆ. ಬಾಕಿ ಉಳಿದ 27 ಘಟಕಗಳಲ್ಲಿ 13 ಘಟಕಗಳಿಗೆ ಕೊಳವೆಬಾವಿ ಬತ್ತಿ ಹೋಗಿರುವ ಕಾರಣ ಕಚ್ಚಾ ನೀರಿನ ತೊಂದರೆಯಾಗಿದೆ. 10 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಾರ್ವಜನಿಕರು ಅಕ್ಷೇಪಣೆ ವ್ಯಕ್ತಪಡಿಸಿರುವುದರಿಂದ ಬೇರೆಡೆ ಸ್ಥಳಾಂತರಗೊಳಿಸಬೇಕಿದೆ. 3 ಶುದ್ಧ ಕುಡಿಯುವ ನೀರಿನ ಘಟಕಗಳು ಸಂಪೂರ್ಣವಾಗಿ ಹಾಳಾಗಿವೆ’ ಎಂದು ತಿಳಿಸಿದರು.

ಭೀಷ್ಮ ಕೆರೆ ಅಭಿವೃದ್ಧಿ ಯೋಜನೆ ಅರ್ಧಕ್ಕೆ ನಿಲ್ಲಿಸಿರುವುದಕ್ಕೆ ಕೆಂಡಾಮಂಡಲರಾದ ಸಚಿವ ಎಚ್‌.ಕೆ.ಪಾಟೀಲ, ಸಂಬಂಧಪಟ್ಟ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ವಿಳಂಬಕ್ಕೆ ಕಾರಣವೇನು ಎಂಬುದರ ವರದಿ ನೀಡುವಂತೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಉಪವಿಭಾಗಾದಿಕಾರಿ ಅನ್ನಪೂರ್ಣ, ಜಿ.ಪಂ. ಉಪಕಾರ್ಯದರ್ಶಿ ಬಸವರಾಜ ಅಡವಿಮಠ, ಜಿಮ್ಸ್ ನಿರ್ದೇಶಕ ಡಾ. ಬೊಮ್ಮನಹಳ್ಳಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ನಗರಾಬಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಡಿಡಿಪಿಐ ಬಸವಲಿಂಗಪ್ಪ, ಡಿಎಚ್‍ಒ ಡಾ. ಜಗದೀಶ ನುಚ್ಚಿನ್, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗಂಗಾಧರ ಶಿರೋಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT