ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕಾರಿಗಳಿಗೆ ‘ಶಿಷ್ಟಾಚಾರ’ದ ಸಂಕಟ

ಶಾಸಕ–ಸಂಸದರ ನಡುವೆ ಜಿದ್ದಾಜಿದ್ದಿ ಕಣವಾಗಲಿರುವ ಚಿಕ್ಕಬಳ್ಳಾಪುರ
Published 16 ಜೂನ್ 2024, 8:15 IST
Last Updated 16 ಜೂನ್ 2024, 8:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅತ್ತ ದರಿ ಇತ್ತ ಪುಲಿ’–ಇದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿನ ಅಧಿಕಾರಿಗಳ ಈಗಿನ ಸ್ಥಿತಿ. ಶಾಸಕ ಪ್ರದೀಪ್ ಈಶ್ವರ್ ಮತ್ತು ನೂತನ ಸಂಸದ ಡಾ.ಕೆ.ಸುಧಾಕರ್ ಅವರ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ಚಿಕ್ಕಬಳ್ಳಾಪುರ ಕ್ಷೇತ್ರವು ಮುಂದಿನ ದಿನಗಳಲ್ಲಿ ಕಣವಾಗುವುದು ಖಚಿತ. 

‘ಶಿಷ್ಟಾಚಾರ’ದ ವಿಚಾರಗಳು ಈಗಾಗಲೇ ಅಧಿಕಾರಿಗಳ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. ಅಧಿಕಾರಿಗಳನ್ನು ‘ಆಪ್ತ’ವಾಗಿ ಮಾತಿಗೆ ಎಳೆದರೆ ಶಿಷ್ಟಾಚಾರದ ವಿಚಾರವು ಸಂಕಟವನ್ನು ತರಲಿದೆ ಎನ್ನುವುದು ಅವರ ಮಾತಿನಲ್ಲಿ ಇಣುಕುತ್ತದೆ.  

ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ವೇಳೆ ಸ್ಥಳೀಯ ಶಾಸಕರು ಅಧ್ಯಕ್ಷತೆವಹಿಸುವರು. ಸಂಸದರನ್ನು ಸಹ ಈ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು.  ರಾಷ್ಟ್ರೀಯ ಹಬ್ಬಗಳ ಆಚರಣೆ, ಸರ್ಕಾರದಿಂದ ನಡುವೆಯ ದಾರ್ಶನಿಕರ ಜಯಂತಿಗಳು, ಸರ್ಕಾರಿ ದಿನಾಚರಣೆಗಳಲ್ಲಿಯೂ ಈ ಶಿಷ್ಟಾಚಾರ ಪಾಲನೆ ಇರುತ್ತದೆ. 

ಶಾಸಕ, ಸಂಸದರು ಬರಲಿ ಬಿಡಲಿ ‘ಶಿಷ್ಟಾಚಾರ’ದ ಪ್ರಕಾರ ಅವರ ಹೆಸರನ್ನು ಆಹ್ವಾನ ಪತ್ರಿಕೆಗಳಲ್ಲಿ ನಮೂದಿಸಬೇಕು. ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು. 

ಈ ಶಿಷ್ಟಾಚಾರ ಪಾಲನೆಯ ವಿಚಾರವಾಗಿ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಗದ್ದಲ ಗಲಾಟೆಗಳು ಸಹ ನಡೆದಿವೆ. ಈ ಎಲ್ಲ ಕಾರಣದಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗ ಶಿಷ್ಟಾಚಾರ ಪಾಲನೆಯ ಸಾಧಕ ಬಾಧಕಗಳು ಬಗ್ಗೆ ಅಧಿಕಾರಿ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ಸಂಸದ ಡಾ.ಕೆ.ಸುಧಾಕರ್ ಅವರ ಸ್ವಕ್ಷೇತ್ರ ಚಿಕ್ಕಬಳ್ಳಾಪುರ. ಈ ವಿಧಾನಸಭಾ ಕ್ಷೇತ್ರವನ್ನು ಅವರು ಮೂರು ಬಾರಿ ಪ್ರತಿನಿಧಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ ವಿರುದ್ಧ ಸೋಲು ಅನುಭವಿಸಿದರು. ಅಂದಿನಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕ್ಷೇತ್ರದಲ್ಲಿ ವಾಕ್ಸಮರ ಮತ್ತು ಜಿದ್ದಾಜಿದ್ದು ಹೆಚ್ಚುತ್ತಲೇ ಇದೆ. 

ಈಗ ಸುಧಾಕರ್ ಅವರ ಗೆಲುವು ಬಿಜೆಪಿಗೆ ಬಲ ನೀಡಿದೆ. ಮತ್ತೊಂದು ಕಡೆ ಶಾಸಕ ‍ಪ್ರದೀಪ್ ಈಶ್ವರ್ ಅವರೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ‘ಸುಪ್ರೀಂ’ ಎನಿಸಿದ್ದಾರೆ. ‘ಶಿಷ್ಟಾಚಾರ’ ಪಾಲನೆ ಸಮಯದಲ್ಲಿ ಸ್ವಲ್ಪ ಲೋಪವಾದರೂ ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರು ಅಧಿಕಾರಿ ವಲಯದ ಮೇಲೆ ಮುಗಿಬೀಳುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲ ಕಾರಣದಿಂದ ಅಧಿಕಾರಿಗಳಿಗೆ ‘ಶಿಷ್ಟಾಚಾರ’ವು ತಲೆನೋವು ತಂದಿದೆ.

‘ಯಾವುದೇ ಸಣ್ಣಪುಟ್ಟ ಸರ್ಕಾರಿ ಕಾರ್ಯಕ್ರಮಗಳಿಗೂ ಶಾಸಕರು, ಸಂಸದರನ್ನು ಶಿಷ್ಟಾಚಾರಕ್ಕಾದರೂ ಆಹ್ವಾನಿಸಬೇಕು. ಕೆಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಆಹ್ವಾನ ಪತ್ರಿಕೆಗಳಲ್ಲಿ ಹೆಸರು ಹಾಕಿಸಬೇಕು. ಆದರೆ ಈಗ ಶಾಸಕರು ಮತ್ತು ಸಂಸದರು ಉತ್ತರ ಮತ್ತು ದಕ್ಷಿಣ ಎನ್ನುವಂತೆ ಇದ್ದಾರೆ. ಸಹಜವಾಗಿ ಇದು ಅಧಿಕಾರಿಗಳ ಮೇಲೆ ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ಜಿಲ್ಲೆಯ ಇಲಾಖೆಯೊಂದರ ಅಧಿಕಾರಿಯೊಬ್ಬರು.

‘ಶಿಷ್ಟಾಚಾರ ಪಾಲನೆಯ ವಿಚಾರವು ಈಗಾಗಲೇ ಚಿಕ್ಕಬಳ್ಳಾಪುರ ಕ್ಷೇತ್ರದ ಅಧಿಕಾರಿಗಳ ವಲಯದಲ್ಲಿ ಚರ್ಚೆಗೂ ಕಾರಣವಾಗಿದೆ. ಅವರ ರಾಜಕೀಯ ಜಿದ್ದಿಗೆ ನಾವು ಬಲಿ ಆಗಬೇಕಾಗುತ್ತದೆಯೇ ಎನಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜಗಳದ ಜಿದ್ದು: ಶಿಷ್ಟಾಚಾರ ಪಾಲನೆಯ ವಿಚಾರ ಒಂದೆಡೆ ಇದ್ದರೆ ಮತ್ತೊಂದು ಕಡೆ ದೂರು–ಪ್ರತಿದೂರಿನ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. 

‘ಸುಧಾಕರ್ ಅಧಿಕಾರಕ್ಕೆ ಬಂದ ತಕ್ಷಣ ಮಂಡಿಕಲ್ಲು, ಕಣಜೇನಹಳ್ಳಿಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಗಲಾಟೆಗಳಾಗಿವೆ ಎಂದು ಕಾಂಗ್ರೆಸ್ ಮುಖಂಡರು ದೂರುತ್ತಿದ್ದಾರೆ. ಖುದ್ದು ಶಾಸಕರೇ, ‘ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿಕೊಳ್ಳಬೇಡಿ. ದೂರು ಮತ್ತು ಪ್ರತಿದೂರು ದಾಖಲಾದರೆ ನೀವೇ ಅಲೆದಾಡಬೇಕಾಗುತ್ತದೆ’ ಎಂದಿದ್ದಾರೆ. ಡಾ.ಕೆ.ಸುಧಾಕರ್, ‘ನಾವು ದ್ವೇಷದ ರಾಜಕೀಯ ಮಾಡಿಲ್ಲ’ ಎಂದು ಹೇಳುತ್ತಿದ್ದಾರೆ. 

ಹೀಗೆ ಗ್ರಾಮೀಣ ಭಾಗಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಜಿದ್ದು ಇದ್ದೇ ಇದೆ. ಇದು ಸ್ಪೋಟವಾದ ವೇಳೆ ಅಧಿಕಾರಿಗಳಿಗೂ ತಲೆನೋವಾಗಲಿದೆ. 

ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್

ವೇದಿಕೆ ಹಂಚಿಕೊಳ್ಳದ ಬಚ್ಚೇಗೌಡ–ಎಂಟಿಬಿ ಈ ಹಿಂದಿನ ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಜಿಲ್ಲೆಯಲ್ಲಿ ನಡೆದ ಯಾವುದೇ ಸರ್ಕಾರಿ ಕಾರ್ಯಕ್ರಮಗಳು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಉದ್ಘಾಟನೆಯಲ್ಲಿಯೂ ವೇದಿಕೆ ಹಂಚಿಕೊಳ್ಳಲಿಲ್ಲ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಈ ಇಬ್ಬರು ಮುಖಂಡರು ಜಿದ್ದಾಜಿದ್ದಿ ರಾಜಕಾರಣ ನಡೆಸಿದ್ದರು. ಎಂ.ಟಿ.ಬಿ ಅವರನ್ನು ಬೆಂಗಳೂರು ಗ್ರಾಮಾಂತರ ಉಸ್ತುವಾರಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದಾಗಲೂ ಈ ಜಿದ್ದಾಜಿದ್ದಿ ಮುಂದುವರಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT