ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸಮಾನತೆ ತೊಲಗುವವರೆಗೆ ವಚನ ಚಳವಳಿ ಜೀವಂತ’

ತೋಂಟದ ಸಿದ್ಧಲಿಂಗ ಶ್ರೀಗಳ ತೃತೀಯ ಪುಣ್ಯಸ್ಮರಣೆ, ಪ್ರಶಸ್ತಿ ಪ್ರದಾನ ಸಮಾರಂಭ
Last Updated 17 ಅಕ್ಟೋಬರ್ 2021, 4:53 IST
ಅಕ್ಷರ ಗಾತ್ರ

ಗದಗ: ‘ವಚನ ಚಳವಳಿ ಹರವು ಇಂದು ಇಡೀ ರಾಷ್ಟ್ರವನ್ನು ಆವರಿಸಿದ್ದು, ಅದಕ್ಕೆ ಮುಖ್ಯಕಾರಣ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು. ವಚನ ಚಳವಳಿಯನ್ನು ಅನುಷ್ಠಾನಗೊಳಿಸುವಲ್ಲಿ, ಪ್ರಚುರಗೊಳಿಸುವಲ್ಲಿ, ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡವರಲ್ಲಿ ಪ್ರಮುಖರು ಅವರು’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಅಭಿಪ್ರಾಯಪಟ್ಟರು.

ನಗರದ ತೋಂಟದಾರ್ಯ ಮಠದಲ್ಲಿ ಶನಿವಾರ ನಡೆದ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ತೃತೀಯ ಪುಣ್ಯಸ್ಮರಣೆ ‘ಮರಣವೇ ಮಹಾನವಮಿ’ ಆಚರಣೆ, ‘ತೋಂಟದ ಸಿದ್ಧಲಿಂಗ ಶ್ರೀ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ಮನುಷ್ಯನಿಂದ ಮನುಷ್ಯನ ಮೇಲೆ ಎಲ್ಲೀವರೆಗೆ ಶೋಷಣೆಗಳು ನಡೆಯುತ್ತದೆಯೋ ಅಲ್ಲೀವರೆಗೂ ಹೋರಾಟಗಳು ನಡೆಯುತ್ತಿರುತ್ತವೆ. ಎಲ್ಲೀವರೆಗೂ ಒಂದು ದೇಶದಲ್ಲಿ ಜಾತಿ, ವರ್ಣ, ಧರ್ಮ, ಲಿಂಗ ಅಸಮಾನತೆ ಇರುತ್ತದೋ ಅಲ್ಲೀವರೆಗೂ ವಚನ ಚಳವಳಿ ಮುಂದುವರಿಯುತ್ತದೆ’ ಎಂದು ಅವರು ಹೇಳಿದರು.

‌‘ಭಾರತ ಸಂವಿಧಾನದ ಅನುಷ್ಠಾನ ಅಂದರೆ ವಚನಗಳ ಅನುಷ್ಠಾನ ಎನ್ನಬಹುದು. ಸಂವಿಧಾನ ಓದಿದರೆ ವಚನಗಳನ್ನು ಓದಿದಂತೆ. ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ವಚನಗಳನ್ನು ಅರ್ಥಮಾಡಿಕೊಂಡಂತೆ. ಹಾಗಾಗಿ, ನಾವೆಲ್ಲರೂ ಕೂಡಿ ದಿನನಿತ್ಯದ ಜೀವನದಲ್ಲಿ ವಚನ ಮತ್ತು ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸಬೇಕು. ಈ ಉದ್ದೇಶದಿಂದಲೇ ನಾವು ಸಂವಿಧಾನ ಓದು ಅಭಿಯಾನ ಆರಂಭಿಸಿದೆವು’ ಎಂದು ಹೇಳಿದರು.

ಪ್ರಗತಿಪರ ಚಿಂತಕ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, ‘ವಚನಸಾಹಿತ್ಯ, ಬುದ್ಧ-ಅಂಬೇಡ್ಕರರ ಚಿಂತನೆಗಳು, ಸಂವಿಧಾನ ಹಾಗೂ ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ಆದರ್ಶಗಳೆಲ್ಲ ಏಕರೂಪವಾಗಿದ್ದು, ವೈಚಾರಿಕ ಮನೋಭಾವ ಇವುಗಳ ಮೂಲ ಅಡಿಗಲ್ಲಾಗಿದೆ. ಸಂಪ್ರದಾಯವಾದದ ಪಟ್ಟಭದ್ರ ಹಿತಾಸಕ್ತಿಗಳು ಬಲಶಾಲಿಯಾಗುತ್ತಿರುವ ಈ ವಿಷಮ ಪರಿಸ್ಥಿತಿಗೆ ಭಾವೈಕ್ಯ ತತ್ವಗಳು ದಿವ್ಯ ಔಷಧವಾಗಿದ್ದು, ಜಾತ್ಯತೀತ ಭಾವನೆ ಬೆಳೆಸಿಕೊಳ್ಳುವುದು ಅನಿವಾರ್ಯ’ ಎಂದರು.

ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ನಮ್ಮ ಗುರುಗಳ ಮಾತಿನಲ್ಲಿ ಹೇಳುವುದಾದರೆ ನಾಗಮೋಹನದಾಸ್ ಅವರಿಗೆ ಪ್ರಶಸ್ತಿ ನೀಡಿರುವುದು ಹಂಡೆ ಹಾಲು ಕುಡಿದಷ್ಟು ಖುಷಿಯಾಗಿದೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ, ವಿಶ್ವಕ್ಕೇ ಬೆಳಕು ನೀಡಬಲ್ಲ ತತ್ವ ಬಸವತತ್ವವಾಗಿದ್ದು, ಸಂವಿಧಾನದ ಆಶಯಗಳ ಮೂಲಾಧಾರವಾಗಿದೆ. ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸಂವಿಧಾನ ನಿಷ್ಠೆ ಅನುಪಮವಾಗಿದ್ದು, ಸಂವಿಧಾನಕ್ಕೆ ಗೌರವ ನೀಡುವುದು ಭಾರತೀಯರ ಆದ್ಯ ಕರ್ತವ್ಯ’ ಎಂದರು.

ಕಲಬುರಗಿಯ ಸಾಹಿತಿ ಬಾಲಚಂದ್ರ ಜಯಶೆಟ್ಟಿ ರಚಿಸಿದ ‘ಮಹಾ ಮಾನವತಾವಾದಿ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ’ ಹಿಂದಿ ಗ್ರಂಥ ಲೋಕಾರ್ಪಣೆಗೊಂಡಿತು.

ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಸ್ವಾಗತಿಸಿದರು. ಭೈರನಹಟ್ಟಿ ಶಾಂತಲಿಂಗ ಶ್ರೀಗಳು, ಚಿಂಚಣಿಯ ಅಲ್ಲಮಪ್ರಭು ಶ್ರೀಗಳು, ಅರಸಿಕೆರೆಯ ಶಾಂತಲಿಂಗ ದೇಶಿಕೇಂದ್ರ ಶ್ರೀಗಳು, ಬಸವಬೆಳವಿಯ ಶರಣಬಸವ ಶ್ರೀಗಳು, ಮಹಾಂತದೇವರು, ವಿಧಾನ ಪರಿಷತ್‌ ಸದಸ್ಯ ಎಸ್.ವಿ ಸಂಕನೂರ, ಮಾಜಿ ಸಚಿವ ಎಸ್.ಎಸ್ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಬಸವ ಟಿವಿ ನಿರ್ದೇಶಕ ಎಂ.ಕೃಷ್ಣಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ.ಮೌಲ್ವಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಜಿ.ಸಲಗೆರೆ, ನ್ಯಾಯಾಧೀಶರಾದ ನಾಗರಾಜ, ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ, ಶ್ರೀಮಠದ ವ್ಯವಸ್ಥಾಪಕ ಎಂ.ಎಸ್ ಅಂಗಡಿ ಇದ್ದರು.

‘ಪ್ರಶಸ್ತಿ ಮೊತ್ತ ಸಂವಿಧಾನ ಓದು ಅಭಿಯಾನಕ್ಕೆ ಮೀಸಲು’

‘ಪ್ರಸ್ತುತ ದಿನಗಳಲ್ಲಿ ಸಂವಿಧಾನವಿರೋಧಿ ವಿದ್ಯಮಾನಗಳು ಜರುಗುತ್ತಿರುವುದು ಆತಂಕಕಾರಿಯಾಗಿದ್ದು, ಯುವಜನತೆ ಸಂವಿಧಾನದ ಮಹತ್ವ ಹಾಗೂ ಆಶಯಗಳನ್ನು ಅರಿತುಕೊಳ್ಳುವುದು ಅವಶ್ಯಕ’ ಎಂದು ಎಚ್‌.ಎನ್‌.ನಾಗಮೋಹನದಾಸ್‌ ಅಭಿಪ್ರಾಯಪಟ್ಟರು.

‘ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ಕೋಮುವಾದ-ಅಸಮಾನತೆಗಳನ್ನು ತೊಡೆದುಹಾಕಿ ನಾಡು-ನುಡಿಯ ಹಿತರಕ್ಷಣೆಗೆ ಬೀದಿಗಿಳಿದು ಹೋರಾಟ ಮಾಡಿದರು. ಅವರ ಹೆಸರಿನಲ್ಲಿ ದೊರೆತಿರುವ ಈ ಅಮೂಲ್ಯ ಪ್ರಶಸ್ತಿಯ ಮೊತ್ತ ₹5 ಲಕ್ಷ ಹಣವನ್ನು ‘ಸಂವಿಧಾನ ಓದು’ ಕಾರ್ಯಕ್ರಮಕ್ಕೆ ಮೀಸಲಿಡುವೆ’ ಎಂದು ಘೋಷಿಸಿದರು.

ಮೂಲಭೂತವಾದ, ಕಂದಾಚಾರಗಳನ್ನು ಬದಿಗೊತ್ತಿ ವಚನ ಪರಂಪರೆಯ ಅನುಷ್ಠಾನಕ್ಕೆ ಅವಿತರ ಶ್ರಮಿಸಿದ ಶ್ರೇಷ್ಠ ಸಂತ ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ್ದು ಸಾರ್ಥಕಭಾವ ಮೂಡಿಸಿದೆ
ಎಚ್.ಎನ್.ನಾಗಮೋಹನ್ ದಾಸ್, ನಿವೃತ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT