ಲಕ್ಷ್ಮೇಶ್ವರ: ಗದಗ ಜಿಲ್ಲೆಯಲ್ಲಿ ಕೃಷಿ ನಂತರ ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಕ್ಷೇತ್ರ ನೇಕಾರಿಕೆ. ಆದರೆ ಕೃಷಿಗೆ ಸಿಕ್ಕಷ್ಟು ಪ್ರೋತ್ಸಾಹ ನೇಕಾರಿಕೆಗೆ ಸಿಕ್ಕಿಲ್ಲ. ಈ ಕಾರಣಕ್ಕಾಗಿ ಇಂದು ನೇಕಾರಿಕೆ ಅವಸಾನದ ಅಂಚಿನಲ್ಲಿದೆ.

ಒಂದು ಕಾಲದಲ್ಲಿ ಸಾವಿರಾರು ಮಗ್ಗಗಳು ಇದ್ದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ ಗ್ರಾಮದ ನೇಕಾರಿಕೆಗೆ ಗ್ರಹಣ ಹಿಡಿದಿದೆ. ಕುಣಿಮಗ್ಗಗಳಿಂದ ಹಿಡಿದು ವಿದ್ಯುತ್ ಹಾಗೂ ಸ್ವಯಂಚಾಲಿತ ಮಗ್ಗಗಳವರೆಗೆ ಮಾಲೀಕರು, ನೇಕಾರ ಕಾರ್ಮಿಕರು ಹತ್ತಾರು ಏಳುಬೀಳುಗಳನ್ನು ಕಂಡಿದ್ದಾರೆ. ಸಾವಿರ ಸಂಖ್ಯೆಯಲ್ಲಿದ್ದ ಮಗ್ಗಗಳು ಇಂದು ನೂರಕ್ಕೆ ಕುಸಿದಿದ್ದು, ಗ್ರಾಮದ ಆರ್ಥಿಕತೆಗೆ ಹೊಡೆತ ಕೊಟ್ಟಿದೆ.

ಕುಣಿಮಗ್ಗಗಳ ತವರೂರು:

ನೂರಾರು ವರ್ಷಗಳಿಂದ ಶಿಗ್ಲಿ ನೇಕಾರಿಕೆಗೆ ಪ್ರಸಿದ್ಧ. ಇಲ್ಲಿನ ಕುಣಿಮಗ್ಗಗಳಲ್ಲಿ ತಯಾರಾಗುತ್ತಿದ್ದ ಟೋಪು ಸೀರೆ ಹಾಗೂ ಕುಬಸದ ಖಣಗಳಿಗೆ ಎಲ್ಲಿಲ್ಲದ ಬೇಡಿಕೆ. ಬೆಳಿಗ್ಗೆ ನಾಲ್ಕು ಗಂಟೆಗೆ ಊರಿನ ಗಲ್ಲಿ ಗಲ್ಲಿಯಲ್ಲಿ ‘ಚಟಕ್ ಪಟಕ್’ ಎಂಬ ಮಗ್ಗಗಳ ಶಬ್ದ ಕೇಳಿ ಬರುತ್ತಿತ್ತು.

ನಾಲ್ಕು ದಶಕಗಳ ಹಿಂದೆ ಶಿಗ್ಲಿಯಲ್ಲಿ ಅಂದಾಜು 500 ಕುಣಿಮಗ್ಗಗಳು ಇದ್ದವು. ಸಿರಿವಂತರು ಮಗ್ಗಗಳನ್ನು ಹಾಕಿಕೊಂಡು ಕಾರ್ಮಿಕರಿಂದ ಸೀರೆ ನೇಯಿಸುತ್ತಿದ್ದರು. ಆದರೆ ಪವರ್ ಲೂಮ್ ಕಾಲಿಟ್ಟ ನಂತರ ಕುಣಿಮಗ್ಗಗಳು ಕುಣಿ ಸೇರಿದವು. ಅನಿವಾರ್ಯವಾಗಿ ಮಾಲೀಕರು ವಿದ್ಯುತ್ ಮಗ್ಗಗಳನ್ನು ಅಳವಡಿಸಿಕೊಂಡು ನೇಕಾರಿಕೆ ಮುಂದುವರಿಸಿದರು. ಆದರೆ ಅವರಿಗೆ ಸಹಾಯಕರಾಗಿದ್ದ ಹಣಗಿ ಕಟ್ಟುವ, ತಟ್ಟು ಕಟ್ಟುವ, ಉಂಕಿ ಕೆಚ್ಚುವ, ಬಣ್ಣ ಹಾಕುವ ಕಸುಬುದಾರರು ಮಾತ್ರ ಉದ್ಯೋಗ ಕಳೆದುಕೊಂಡು ದಿಕ್ಕಾಪಾಲಾದರು. ಈಗಲೂ ಇಂಥ ನಾಲ್ಕೈದು ಕುಣಿಮಗ್ಗಗಳು ನೋಡಲು ಸಿಗುತ್ತಿವೆ.

ವಿದ್ಯುತ್ ಮಗ್ಗಗಳ ಭರಾಟೆ:

ವಿದ್ಯುತ್ ಮಗ್ಗಗಳ ಭರಾಟೆ ಶುರುವಾದ ನಂತರ ಗ್ರಾಮದ ಚಿತ್ರಣವೇ ಬದಲಾಯಿತು. ಕೊರೊನಾಕ್ಕಿಂತ ಮೊದಲು ಒಂದೂವರೆಯಿಂದ ಎರಡು ಸಾವಿರಕ್ಕೂ ಹೆಚ್ಚು ವಿದ್ಯುತ್ ಮಗ್ಗಗಳು ಶಿಗ್ಲಿಯಲ್ಲಿದ್ದವು. ಕಾರ್ಮಿಕರು ಪಾಲಿಸ್ಟರ್ ಹಾಗೂ ಮಸರಾಯಿ ಸೀರೆಗಳನ್ನು ನೇಯುತ್ತಿದ್ದರು. ನೇಕಾರಿಕೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಬೇರೆ ಬೇರೆ ಊರುಗಳಿಂದ ನೂರಾರು ಕಾರ್ಮಿಕರು ಇಲ್ಲಿಗೆ ನೇಯಲು ಬಂದರು. ಆಗ ಮನೆ ಮಂದಿಗೆಲ್ಲ ಕೈ ತುಂಬ ಕೆಲಸ.

ಸ್ವಯಂಚಾಲಿತ ಮಗ್ಗಗಳ ಹಾವಳಿ:

ವಿದ್ಯುತ್ ಮಗ್ಗಗಳ ಭರಾಟೆ ಮಧ್ಯೆಯೇ ಸರ್ಕಾರ ನೇಕಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆ ಮೂಲಕ ಆಟೊಮ್ಯಾಟಿಕ್ ಮಗ್ಗಗಳನ್ನು ನೇಕಾರರಿಗೆ ನೀಡಿತು.

ಇಂತಹ ಮಗ್ಗಗಳು ಬಂದ ನಂತರ ಸಾಮಾನ್ಯ ಕೂಲಿಕಾರರು ನಿಗಮ ಕೊಡುತ್ತಿದ್ದ ಮಗ್ಗ ಹಾಕಿಕೊಳ್ಳುವಂತಾಯಿತು. ಇಲ್ಲಿ ಸಿದ್ಧವಾಗುತ್ತಿದ್ದ ಉತ್ಪನ್ನಗಳನ್ನು ನಿಗಮವೇ ನೇರವಾಗಿ ಖರೀದಿಸಿ ನೇಕಾರರಿಗೆ ಕೂಲಿ ಪಾವತಿಸುತ್ತಿತ್ತು. ಇಂಥ 500 ಮಗ್ಗಗಳು ಶಿಗ್ಲಿಯಲ್ಲಿದ್ದವು. ಆದರೆ ಈ ವೈಭವ ಕೂಡ ಬಹಳ ದಿನ ಉಳಿಯಲಿಲ್ಲ. ದುರ್ದೈವ ಎಂದರೆ ಎರಡೇ ದಶಕಗಳಲ್ಲಿ ಆಟೊಮ್ಯಾಟಿಕ್ ಮಗ್ಗಗಳು ಬಂದ್ ಆದವು. ಇದಕ್ಕೆ ಹತ್ತು ಹಲವು ಕಾರಣಗಳಿದ್ದು ಅವುಗಳನ್ನು ಕೆಎಚ್ಡಿಸಿ ಅಧಿಕಾರಿಗಳೇ ಬಹಿರಂಗ ಪಡಿಸಬೇಕು ಎನ್ನುತ್ತಾರೆ ನೇಕಾರರು.

ಗ್ರಾಮದ ಆರ್ಥಿಕತೆ ಹೆಚ್ಚಿಸಿದ್ದ ನೇಕಾರಿಕೆ:

ಶಿಗ್ಲಿಯಲ್ಲಿ ನೇಕಾರಿಕೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಗ್ರಾಮದ ಆರ್ಥಿಕತೆಯೂ ಉತ್ತಮವಾಗಿತ್ತು. ಗಲ್ಲಿಗೊಂದರಂತೆ ಹತ್ತಾರು ಚಹಾದ ಅಂಗಡಿಗಳು, ಖಾನಾವಳಿಗಳು, ಅದರೊಂದಿಗೆ ಕಿರಾಣಿ ಅಂಗಡಿಗಳು ಮತ್ತು ಒಂದು ಚಿತ್ರಮಂದಿರ ಕೂಡ ಭರ್ಜರಿಯಾಗಿ ನಡೆಯುತ್ತಿತ್ತು. ಜನರಲ್ಲಿ ಹಣ ಇರುತ್ತಿದ್ದುದರಿಂದ ಗ್ರಾಮದ ಆರ್ಥಿಕಮಟ್ಟ ಎತ್ತರದಲ್ಲಿತ್ತು.

ನೆಲ ಕಚ್ಚಿದ ನೇಕಾರಿಕೆ:

ಕುಣಿಮಗ್ಗ ಮತ್ತು ಆಟೊಮ್ಯಾಟಿಕ್ ಮಗ್ಗಗಳು ಸದ್ದು ನಿಲ್ಲಿಸಿದ ನಂತರ ಕೇವಲ ವಿದ್ಯುತ್ ಮಗ್ಗಗಳು ನಡೆಯುತ್ತಿದ್ದವು. ಮೊದಲೇ ಕುಂಟುತ್ತ ಸಾಗಿದ್ದ ನೇಕಾರಿಕೆ ಕೊರೊನಾ ನಂತರ ಮತ್ತಷ್ಟು ನೆಲ ಕಚ್ಚಿತು. ಸಿದ್ಧವಾದ ಸೀರೆಗಳನ್ನು ಮಾರಾಟ ಮಾಡಲಾಗದೆ ಮಾಲೀಕರು ನಷ್ಟ ಅನುಭವಿಸಿದರು. ಇದರಿಂದಾಗಿ ಅವರು ಮಗ್ಗಗಳನ್ನು ಬಂದ್ ಮಾಡಿ ಮಾರಾಟಕ್ಕೆ ಮುಂದಾದರು.

ಆದರೆ ನೇಕಾರಿಕೆಯನ್ನೇ ನೆಚ್ಚಿದ್ದ ಕಾರ್ಮಿಕರು ಮಾತ್ರ ಕೆಲಸ ಇಲ್ಲದೆ ದಿಕ್ಕೆಟ್ಟಿದ್ದು ನೂರಾರು ಕಾರ್ಮಿಕರು ಶಿಗ್ಲಿ ತೊರೆದಿದರು. ಕೆಲವರು ಗಾರೆ ಕೆಲಸ, ಎಗ್ರೈಸ್ ಅಂಗಡಿಗಳಲ್ಲಿ ದುಡಿಯುತ್ತಿದ್ದಾರೆ. ಒಂದು ಕಾಲದಲ್ಲಿ ಇಡೀ ಗ್ರಾಮಕ್ಕೆ ಆರ್ಥಿಕ ಚೈತನ್ಯ ನೀಡಿದ್ದ ನೇಕಾರಿಕೆ ಇಂದು ಚೈತನ್ಯರಹಿತವಾಗಿದೆ. ಕೆಲವೇ ಮಾಲೀಕರು ಧೈರ್ಯದಿಂದ ನೇಕಾರಿಕೆ ಮುಂದುವರಿಸಿದ್ದಾರೆ. ಅವರಲ್ಲೂ ಲಕ್ಷಾಂತರ ರೂಪಾಯಿ ಕಿಮ್ಮತ್ತಿನ ಸೀರೆ ಮಾರಾಟವಾಗದೆ ಹಾಗೆ ಉಳಿದಿವೆ.

ನೇಕಾರಿಕೆಗೆ ಕಾಡಿದ ಸಮಸ್ಯೆಗಳು:

ಕೊರೊನಾ ನಂತರ ಮಾರುಕಟ್ಟೆ ಸಂಪೂರ್ಣ ನೆಲ ಕಚ್ಚಿದ್ದು, ಈ ಕ್ಷೇತ್ರವನ್ನು ಮೇಲೇಳದಂತೆ ಮಾಡಿದೆ. ಇನ್ನು ನೇಯ್ದ ಸೀರೆಗಳು ಮಾರಾಟ ಆಗುತ್ತಿಲ್ಲ. ಅದರಲ್ಲೂ ಜಿಎಸ್ಟಿ ಜಾರಿ ನಂತರ ವ್ಯಾಪಾರ ಸಂಪೂರ್ಣ ಕುಸಿದಿದೆ. ಅದರೊಂದಿಗೆ ಕಚ್ಚಾ ಮಾಲಿನ ದರ ವಿಪರೀತ ಏರಿಕೆ ಆಗಿದೆ. ಮಾಲೀಕರು ಜಿಎಸ್ಟಿ ಪಾವತಿಸಿ ಕಚ್ಚಾ ಮಾಲು ಖರೀದಿ ಮಾಡಬೇಕು. ಸೀರೆ ಮಾರುವಾಗ ಜಿಎಸ್ಟಿ ಆಕರಣೆ ಮಾಡಬೇಕು. ಆದರೆ ಜಿಎಸ್ಟಿ ಹಾಕಿದರೆ ಸೀರೆ ದರ ಹೆಚ್ಚಾಗುತ್ತದೆ. ಬೆಲೆ ಹೆಚ್ಚಾದರೆ ಠೋಕ ಖರೀದಿದಾರರು ಸೀರೆ ಖರೀದಿಸಲು ಹಿಂದೇಟು ಹಾಕುತ್ತಾರೆ ಎಂದು ಮಾಲೀಕರು ಹೇಳುತ್ತಾರೆ.

ಇನ್ನು ನೇಕಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಬಂದಿದೆ. ಆದರೆ ನೇಕಾರರು ಅದನ್ನು ಅಳವಡಿಸಿಕೊಳ್ಳಲು ಸಿದ್ಧರಿಲ್ಲ. ಅಲ್ಲದೆ ಕೌಶಲ ಬೆಳೆಸಿಕೊಳ್ಳಲು ಕಾರ್ಮಿಕರು ಮುಂದೆ ಬರುತ್ತಿಲ್ಲ ಎಂಬ ಆರೋಪಗಳೂ ಇವೆ. ಈ ಎಲ್ಲ ಕಾರಣಗಳಿಂದಾಗಿ ಶಿಗ್ಲಿಯಲ್ಲಿ ನೇಕಾರಿಕೆ ನೇಪಥ್ಯಕ್ಕೆ ಸರಿಯುತ್ತಿದೆ. ಇದು ಸರ್ಕಾರದ ಜವಳಿ ಇಲಾಖೆ ಅಧಿಕಾರಿಗಳ ಗಮನಕ್ಕೂ ಬಂದಿದೆ. ನೇಕಾರಿಕೆಯನ್ನು ಉಳಿಸಲು ಕೈಮಗ್ಗ ಮತ್ತು ಜವಳಿ ಇಲಾಖೆ ಹತ್ತು ಹಲವು ಯೋಜನೆಗಳನ್ನು ರೂಪಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂಬುದು ನೇಕಾರರ ಆಗ್ರಹವಾಗಿದೆ.

ತಂತ್ರಜ್ಞಾನಕ್ಕೆ ಹೊಂದಿಕೊಳ್ಳದ್ದೇ ಸಮಸ್ಯೆ

ನೇಕಾರ ಸಮ್ಮಾನ್ ಯೋಜನೆಯಡಿ ನೋಂದಾಯಿತ ನೇಕಾರರಿಗೆ ₹2500 ಸರ್ಕಾರ ಕೊಡುತ್ತಿದೆ. 10 ಎಚ್ಪಿವರೆಗೆ ಮಾಲೀಕರಿಗೆ ಉಚಿತ ವಿದ್ಯುತ್ ಪೂರೈಸಲಾಗುತ್ತಿದೆ. ನೇಕಾರರಿಗೆ ಲೇಬರ್ ಕಾರ್ಡ್ ಮಾಡಿಸಿಕೊಟ್ಟು ಆ ಮೂಲಕ ಕಾರ್ಮಿಕ ಇಲಾಖೆಯಿಂದ ಬರುವ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ ನೇಕಾರಿಕೆ ಚೇತರಿಸಿಕೊಳ್ಳುತ್ತಿಲ್ಲ. ಇಂದು ನೇಕಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಬಂದಿದೆ. ಅದಕ್ಕೆ ಮಾಲೀಕರು ಮತ್ತು ಕಾರ್ಮಿಕರು ಹೊಂದಿಕೊಳ್ಳುತ್ತಿಲ್ಲ. ಹೀಗಾಗಿ ನೇಕಾರಿಕೆ ಕ್ಷೇತ್ರ ಹಿಂದುಳಿಯುತ್ತಿದೆ.

- ಎಚ್.ಬಿ. ಪಾಟೀಲ ಉಪ ನಿರ್ದೇಶಕರು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಗದಗ

ಯಾರು ಏನಂತಾರೆ?

ಜಿಎಸ್ಟಿ ಬರೆ

ಕೊರೊನಾ ನಂತರ ಮಾರುಕಟ್ಟೆಯಲ್ಲಿ ಸೀರೆಗಳನ್ನು ಕೊಳ್ಳುವವರೇ ಇಲ್ಲ. ಇದರಿಂದಾಗಿ ಮಗ್ಗಗಳು ಬಂದ್ ಆಗುತ್ತಿವೆ. ಅಲ್ಲದೆ ಜಿಎಸ್ಟಿ ನೇಕಾರಿಕೆ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಿದೆ

- ವೀರಣ್ಣ ಪವಾಡದ, ಮಗ್ಗಗಳ ಮಾಲೀಕ

ಪ್ರೋತ್ಸಾಹ ಸಾಲದು

ಸರ್ಕಾರ ಎಷ್ಟೇ ಪ್ರೋತ್ಸಾಹ ಕೊಟ್ಟರೂ ಕುಶಲ ನೇಕಾರರು ಕಡಿಮೆ ಆಗುತ್ತಿದ್ದಾರೆ. ಮನೆಯಲ್ಲಿ ನೇಯುವವರು ಇದ್ದರೆ ಮಾತ್ರ ಮಗ್ಗ ಹಾಕುವ ಪರಿಸ್ಥಿತಿ ಇದೆ

- ಸುಭಾಷ ಹುಲಗೂರ, ಮಗ್ಗಗಳ ಮಾಲೀಕ

ತಂತ್ರಜ್ಞಾನದ ಅರಿವು ಬೇಕು

ಕಾರ್ಮಿಕರು ಆಧುನಿಕ ತಂತ್ರಜ್ಞಾನದ ತರಬೇತಿ ಪಡೆಯಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ನೇಕಾರಿಕೆ ನೇಪಥ್ಯಕ್ಕೆ ಸರಿದಿದೆ

- ಯಲ್ಲಪ್ಪ ತಳವಾರ, ಮಗ್ಗಗಳ ಮಾಲೀಕ

ಎಗ್ರೈಸ್ ಅಂಗಡಿಯಲ್ಲಿ ಕೆಲಸ

ನನಗೆ ತಿಳಿವಳಿಕೆ ಬಂದಾಗಿನಿಂದ ಪವರ್ ಲೂಮ್ ನಡೆಸುತ್ತಿದ್ದೆ. ಆದರೆ ಕೊರೊನಾ ನಂತರ ಮಗ್ಗಗಳು ಬಂದ್ ಆದವು. ಹೀಗಾಗಿ ಎಗ್ ರೈಸ್ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದೇನೆ

- ಹೊನ್ನಪ್ಪ ರಾವಳ, ನೇಕಾರ ಕಾರ್ಮಿಕ

ಕುಗ್ಗಿದ ವ್ಯಾಪಾರ

ನಮ್ಮೂರಲ್ಲಿ ನೇಕಾರಿಕೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಹಣದ ಹರಿವು ಜೋರಾಗಿತ್ತು. ಕಾರ್ಮಿಕರು ದುಡಿದ ಹಣವನ್ನು ಖರ್ಚು ಮಾಡುತ್ತಿದ್ದರು. ಆಗ ಚಹಾದ ಅಂಗಡಿ, ಕಿರಾಣಿ ಹಾಗೂ ಖಾನಾವಳಿಗಳಲ್ಲಿ ವ್ಯಾಪಾರ ಚೆನ್ನಾಗಿತ್ತು

- ಅಶೋಕ ಶಿರಹಟ್ಟಿ, ಅಧ್ಯಕ್ಷರು, ವ್ಯಾಪಾರಸ್ಥರ ಸಂಘ, ಶಿಗ್ಲಿ

ಪ್ರೋತ್ಸಾಹ ಅಗತ್ಯ

ಸರ್ಕಾರ ಜಿಎಸ್ಟಿ ತೆಗೆದು ಹಾಕಿ ನೇಕಾರಿಕೆ ಉಳಿಯಲು ಇನ್ನಷ್ಟು ಪ್ರೋತ್ಸಾಹದಾಯಕ ಯೋಜನೆಗಳನ್ನು ಜಾರಿಗೆ ತಂದಾಗ ಮಾತ್ರ ನೇಕಾರಿಕೆ ಮತ್ತೆ ಚೇತರಿಸಿಕೊಳ್ಳಲು ಸಾಧ್ಯ

- ವಾಸಣ್ಣ ಹೆಬ್ಬಳ್ಳಿ, ಮಗ್ಗಗಳ ಮಾಲೀಕ

ನೇಯುವವರೇ ಇಲ್ಲ

ಮೊದ್ಲ ನೂರಾರು ಮಂದಿ ಮಗ್ಗ ನೇಯಾಕ ಶಿಗ್ಲಿಗೆ ಬರ್ತಿದ್ರು. ಆದರ ಈಗ ಭಾಳ ಕಡಿಮಿ ಆಗ್ಯಾರ

- ರಾಜು ಧರಣಿ, ನೇಕಾರ ಕಾರ್ಮಿಕ

ಖರ್ಚು ಮಾಡಲು ಹಣವಿಲ್ಲ

ಶಿಗ್ಲಿಯಲ್ಲಿ ನೇಕಾರಿಕೆ ಉತ್ತಮವಾಗಿ ನಡೆಯುವಾಗ ಊರಿನ ಎಲ್ಲ ಅಂಗಡಿ ಚೆನ್ನಾಗಿ ನಡೆಯುತ್ತಿದ್ದವು. ಕಾರ್ಮಿಕರು ಹೆಚ್ಚು ಹಣ ಖರ್ಚು ಮಾಡುತ್ತಿದ್ದರು. ಈಗ ಖರ್ಚು ಮಾಡಲು ಅವರ ಬಳಿ ಹಣವೇ ಇಲ್ಲ

- ಮಂಜುನಾಥ ಬದಿ, ಕೋಲ್ಡ್ರಿಂಕ್ಸ್ ವ್ಯಾಪಾರಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.