ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ: ಭದ್ರತೆ ಇಲ್ಲದ ಬದುಕು; ಪೌರಕಾರ್ಮಿಕರ ಅಳಲು

ಸಿಬ್ಬಂದಿ ಕೊರತೆ ನಡುವೆ ಸ್ವಚ್ಛ ಪಟ್ಟಣ ಖ್ಯಾತಿ ಪಡೆದ ಗಜೇಂದ್ರಗಡ ಪುರಸಭೆ, ಸರ್ಕಾರ ಕಾಯಂಗೊಳಿಸಲಿ
Last Updated 2 ನವೆಂಬರ್ 2022, 7:13 IST
ಅಕ್ಷರ ಗಾತ್ರ

ಗಜೇಂದ್ರಗಡ: ‘ಇಲ್ಲಿನ ಪುರಸಭೆಯಲ್ಲಿ 20 ವರ್ಷಗಳಿಂದ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇವೆ. ಪುರಸಭೆಯಿಂದ ಸುರಕ್ಷತಾ ಸಾಮಗ್ರಿ, ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲ ಸೌಲಭ್ಯಗಳು ಸಿಗುತ್ತಿವೆ. ಆದರೆ, ಇಷ್ಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮ್ಮನ್ನು ಕಾಯಂಗೊಳಿಸಲು ಸರ್ಕಾರ ಕ್ರಮವಹಿಸಬೇಕು’ ಎಂದು ಮಾಳವ್ವ ಮರಿಯವ್ವ ಅರಳಿಗಿಡದ ಕಣ್ಣೀರಾದರು.

ಊರನ್ನು ಸ್ವಚ್ಛವಾಗಿಡಲು ಜೀವನ ಮೀಸಲಿಟ್ಟಿರುವ ಪೌರಕಾರ್ಮಿಕರ ಬದುಕನ್ನು ಭದ್ರಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂಬುದು ಇಲ್ಲಿನ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪೌರಕಾರ್ಮಿಕರ ಒತ್ತಾಯವಾಗಿದೆ.

ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಎಂಬ ಖ್ಯಾತಿ ಪಡೆದಿರುವ ಗಜೇಂದ್ರಗಡ ಪುರಸಭೆ ಸಿಬ್ಬಂದಿ ಕೊರತೆ ನಡುವೆಯೂ ಪೌರ ಕಾರ್ಮಿಕರ ಪರಿಶ್ರಮ, ಕಾಳಜಿಯಿಂದ ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ 2022ರಲ್ಲಿ ರಾಜ್ಯಕ್ಕೆ 16ನೇ ಶ್ರೇಯಾಂಕ ಪಡೆದಿದೆ. ಆದರೆ, ಪುರಸಭೆಯಲ್ಲಿ ಪೌರಕಾರ್ಮಿಕರು ಸೇರಿದಂತೆ ಇತರೆ ಸಿಬ್ಬಂದಿ ಕೊರತೆ ಇದೆ. ಬಹುತೇಕ ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಗಜೇಂದ್ರಗಡ ಪುರಸಭೆ 23 ವಾರ್ಡ್‌ಗಳನ್ನು ಹೊಂದಿದ್ದು, 2011ರ ಜನಗಣತಿ ಪ್ರಕಾರ ಪಟ್ಟಣದಲ್ಲಿನ ಜನಸಂಖ್ಯೆ 32,359 ಇದೆ. ಸದ್ಯ ಅದು ಸುಮಾರು 40-45 ಸಾವಿರ ತಲುಪಿದೆ. ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೊಸ ಬಡಾವಣೆಗಳು ಬೆಳೆಯುತ್ತಿವೆ. ಬಡಾವಣೆಗಳು ಬೆಳೆದಂತೆ ಅವುಗಳ ಸ್ವಚ್ಛತೆಗೆ ಹೆಚ್ಚು ಪೌರಕಾರ್ಮಿಕರ ಅವಶ್ಯಕತೆಯಿದೆ. ಗಜೇಂದ್ರಗಡ ಪುರಸಭೆಯಲ್ಲಿ ಒಟ್ಟು 50 ಪೌರಕಾರ್ಮಿಕರ ಅವಶ್ಯಕತೆಯಿದೆ. ಆದರೆ ಸದ್ಯ ಒಬ್ಬ ಕಾಯಂ ಪೌರಕಾರ್ಮಿಕ ಹಾಗೂ 38 ನೇರ ಪಾವತಿ ಪೌರಕಾರ್ಮಿಕರು ಇದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ 11 ಜನ ವಾಹನ ಚಾಲಕರು ಇದ್ದಾರೆ.

‘ಪೌರಕಾರ್ಮಿಕರ ಶ್ರಮ ಹಾಗೂ ಊರಿನ ಬಗ್ಗೆ ಅವರಿಗಿರುವ ಕಾಳಜಿಯಿಂದ ನಮ್ಮ ಪುರಸಭೆ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ರಾಜ್ಯಕ್ಕೆ 16 ಶ್ರೇಯಾಂಕ ಹಾಗೂ ದೇಶಕ್ಕೆ 89 ಶ್ರೇಯಾಂಕ ಪಡೆದಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

‘ಪೌರಕಾರ್ಮಿಕರಿಗೆ ಸುರಕ್ಷತಾ ಸಾಮಗ್ರಿ ವಿತರಣೆ, ನಿಯಮಿತ ಆರೋಗ್ಯ ತಪಾಸಣೆ, ವಿಮೆ ಸೌಲಭ್ಯ, ನಗರೋತ್ಥಾನ ಯೋಜನೆ ಅಡಿಯಲ್ಲಿ ನಿವೇಶನ ರಹಿತ ಪೌರಕಾರ್ಮಿಕರಿಗೆ ನಿವೇಶನ ಕೊಡುವ ಉದ್ದೇಶದಿಂದ ₹29 ಲಕ್ಷ ಅನುದಾನ ಕಾಯ್ದಿರಿಸಲಾಗಿದ್ದು, ಜಾಗ ಖರೀದಿ ಮಾಡಬೇಕಿದೆ’ ಎಂದು ತಿಳಿಸಿದರು.

****

ಪೌರಕಾರ್ಮಿಕರನ್ನು ಕಾಯಂ ಮಾಡಲು ಸರ್ಕಾರ ವಿಧಿಸಿದ್ದ ಮಾನದಂಡಗಳಲ್ಲಿ ನಮ್ಮ ಪುರಸಭೆಯಲ್ಲಿರುವ 38 ನೇರ ಪಾವತಿ ಪೌರಕಾರ್ಮಿಕರು ಅನರ್ಹರಾಗಿದ್ದಾರೆ

-ಮಹಾಂತೇಶ ಬೀಳಗಿ, ಪುರಸಭೆ ಮುಖ್ಯಾಧಿಕಾರಿ

****

ಈಗಿರುವ ನೇರ ಪಾವತಿ ಪೌರಕಾರ್ಮಿಕರ ಕಾಯಂಗೊಳಿಸಬೇಕೆಂದು ಒತ್ತಾಯಿಸಿ ನ.2ರಂದು ಬೆಂಗಳೂರಿನಲ್ಲಿ ಸಚಿವರ ಮನೆ ಮುಂದೆ ಸತ್ಯಾಗ್ರಹ ನಡೆಸಲಿದ್ದೇವೆ

-ಸಿ.ಡಿ.ದೊಡ್ಡಮನಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ

****

ನೇರ ಪಾವತಿ ನೌಕರರನ್ನು ಕಾಯಂ ಗೊಳಿಸಬೇಕೆಂದು ಸಭೆಯಲ್ಲಿ ಠರಾವ್ ಪಾಸ್ ಮಾಡಲಾಗಿದೆ. ನಿವೇಶನ ರಹಿತ ಪೌರಕಾರ್ಮಿಕರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು

-ವೀರಪ್ಪ ಪಟ್ಟಣಶೆಟ್ಟಿ, ಪುರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT