ಜಿಂಕೆಗಳನ್ನು ಬೆದರಿಸಲು ಬೆದರು ಬೊಂಬೆ!

7
ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಕೃಷ್ಣಮೃಗಗಳ ಹಾವಳಿಗೆ ಬೇಸತ್ತ ರೈತರು

ಜಿಂಕೆಗಳನ್ನು ಬೆದರಿಸಲು ಬೆದರು ಬೊಂಬೆ!

Published:
Updated:
Deccan Herald

ಲಕ್ಷ್ಮೇಶ್ವರ: ತಾಲ್ಲೂಕಿನ ರೈತರು ಜಿಂಕೆ ಹಾವಳಿಗೆ ಕಂಗಾಲಾಗಿದ್ದಾರೆ. ಸಮೀಪದ ಗೋವನಾಳ, ಶಿಗ್ಲಿ, ಒಡೆಯರಮಲ್ಲಾಪುರ, ಅಡರಕಟ್ಟಿ, ಬಟ್ಟೂರು, ಪುಟಗಾಂವ್‌ ಬಡ್ನಿ ಗ್ರಾಮಗಳಲ್ಲಿ ಜಿಂಕೆಗಳ ಹಾವಳಿ ಹೆಚ್ಚಾಗಿದ್ದು, ಬೆಳೆದು ನಿಂತ ಬೆಳೆಗಳನ್ನು ತಿಂದು ಹಾಳು ಮಾಡುತ್ತಿವೆ.

ಮಳೆ ಕೊರತೆಯಿಂದ ಈಗಾಗಲೇ ರೈತರು ಬೆಳೆ ಹಾನಿ ಅನುಭವಿಸಿದ್ದಾರೆ. ಇದರ ಜತೆಗೆ ಜಿಂಕೆಗಳ ಉಪದ್ರವ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಂಕೆಗಳು ಜಮೀನಿನತ್ತ ಸುಳಿಯದಂತೆ ಮಾಡಲು ಕೆಲವು ರೈತರು ಹೊಲಗಳಲ್ಲಿ ಬೆದರು ಬೊಂಬೆ ನಿಲ್ಲಿಸಿದರೆ, ಕೆಲವರು ಗಂಟೆ, ಬಿಯರ್‌ ಬಾಟಲಿಗಳನ್ನು ಕಟ್ಟಿ ಬೆಳೆ ಉಳಿಸಿಕೊಳ್ಳುತ್ತಿದ್ದಾರೆ.

ಲಕ್ಷ್ಮೇಶ್ವರದ ಮರಿತಮ್ಮಪ್ಪ ಅಕ್ಕಿ ಎಂಬ ರೈತರು ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆಯನ್ನು ರಕ್ಷಿಸಿಕೊಳ್ಳುವ ಸಲುವಾಗಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಳಕೆಯಾದ ಪಕ್ಷದ ಧ್ವಜಗಳನ್ನೇ ಜಮೀನಿನಲ್ಲಿ ನೆಟ್ಟಿದ್ದಾರೆ. ಗಾಳಿ ಬೀಸಿದಾಗ ಇದರ ಶಬ್ದಕ್ಕೆ ಬೆದರುವ ಜಿಂಕೆಗಳು ಜಮೀನಿನತ್ತ ಸುಳಿಯುವುದಿಲ್ಲ ಎನ್ನುತ್ತಾರೆ ಅವರು.

ಗೋವನಾಳ ಭಾಗದ ರೈತರು ಜಿಂಕೆಗಳ ಹಾವಳಿ ತಡೆಗೆ ಖಾಲಿ ಬಿಯರ್‌ ಬಾಟಲಿಗಳನ್ನು ಹೊಲದ ಬದುವಿನ ಸುತ್ತಮುತ್ತಲಿನ ಗಿಡಗಳಿಗೆ ಕಟ್ಟಿದ್ದಾರೆ. ಬಾಟಲಿ ಜತೆಗೆ ಸಣ್ಣ ಕಲ್ಲನ್ನೂ ಕಟ್ಟಿದ್ದಾರೆ. ಗಾಳಿ ಬೀಸಿದಾಗ ಕಲ್ಲು ಬಾಟಲಿಗೆ ಬಡಿದು ‘ಠಣ್’ ಎಂಬ ಶಬ್ದ ಹೊರಡುತ್ತದೆ. ಇದರಿಂದ ಜಿಂಕೆಗಳು ಹೆದರಿ ಓಡಿ ಹೋಗುತ್ತವೆ ಎನ್ನುತ್ತಾರೆ ರೈತರು.

‘ನಮ್ಮ ಭಾಗದಾಗ ಚಿಗರಿ ಹಾವಳಿ ಭಾಳ ಇದೆ. ರಾತ್ರಿ, ಹಿಂಡು ಹಿಂಡಾಗಿ ಹೊಲಕ್ಕೆ ನುಗ್ಗಿ, ಬೆಲೆ ತಿಂದು ಹಾಕುತ್ತಿವೆ’ ಎಂದು ಗೋವನಾಳ ಗ್ರಾಮದ ರೈತ ಚಂದ್ರು ತಳವಾರ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !