ಕಳಚಿದ ಸ್ವಚ್ಛ ನಗರಿಯ ಗರಿ

7
ಸ್ವಚ್ಛ ಸರ್ವೇಕ್ಷಣೆ 2018ರ ವರದಿ; ಗದಗ–ಬೆಟಗೇರಿ ಅವಳಿ ನಗರಕ್ಕೆ 290ನೇ ರ್‍ಯಾಂಕ್‌

ಕಳಚಿದ ಸ್ವಚ್ಛ ನಗರಿಯ ಗರಿ

Published:
Updated:
ಗದಗ ನಗರದಲ್ಲಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರು (ಸಾಂದರ್ಭಿಕ ಚಿತ್ರ)

ಗದಗ: ಮುದ್ರಣ ಕಾಶಿ ಗದಗ–ಬೆಟಗೇರಿ ಅವಳಿ ನಗರದ ಮುಡಿಯೇರಿದ್ದ ದೇಶದ ‘ಸ್ವಚ್ಛ ನಗರ’ ಎಂಬ ಗರಿ ಈ ವರ್ಷ ಕಳಚಿದೆ.

ಸ್ವಚ್ಛ ಸರ್ವೇಕ್ಷಣೆ 2018ರ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಗದಗ ನಗರಸಭೆಯ ಸ್ಥಾನ 290ನೇ ರ್‍ಯಾಂಕ್‌ಗೆ ಕುಸಿದಿದೆ. 2017ರಲ್ಲಿ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ 167ನೇ ಸ್ಥಾನ ಮತ್ತು ರಾಜ್ಯ ಮಟ್ಟದಲ್ಲಿ 7ನೇ ಸ್ಥಾನ ಪಡೆದು ದೇಶ ಮಟ್ಟದಲ್ಲಿ ಸೆಳೆದಿದ್ದ ಅವಳಿ ನಗರ ಈ ಬಾರಿ ಪಟ್ಟಿಯಲ್ಲಿ 195 ಸ್ಥಾನಗಳಷ್ಟು ಇಳಿಕೆ ಕಂಡಿದೆ.

ಈ ಬಾರಿ ರಾಷ್ಟ್ರಮಟ್ಟದಲ್ಲಿ ಜನಸಂಖ್ಯೆ ಆಧರಿಸಿದ ವಿವಿಧ ವಿಭಾಗಗಳಲ್ಲಿ ಒಟ್ಟು 485 ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ರಾಜ್ಯ ಮಟ್ಟದಲ್ಲೂ ಗದುಗಿನ ಸ್ಥಾನ ಕುಸಿದಿದೆ. ರಾಜ್ಯದ 26 ಸ್ವಚ್ಛ ನಗರಗಳ ಪೈಕಿ ಈ ಬಾರಿ ಗದುಗಿಗೆ 17ನೇ ಸ್ಥಾನ ಲಭಿಸಿದೆ.

ಸ್ವಚ್ಛತೆ ಕಾಪಾಡುವ ನಗರಗಳನ್ನು ಪ್ರೋತ್ಸಾಹಿಸಲು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ 2016ರಿಂದ ಈ ಸಮೀಕ್ಷೆ ನಡೆಸುತ್ತಿದೆ. ಮೊದಲ ಗದಗ ನಗರಸಭೆ ಈ ಸಮೀಕ್ಷೆಯಲ್ಲಿ ಭಾಗವಹಿಸಿರಲಿಲ್ಲ. ಭಾಗವಹಿಸಿದ ಎರಡನೆಯ ವರ್ಷ ಅಂದರೆ 2017ರಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯನ್ನೂ ಹಿಂದಿಕ್ಕಿ ಗದಗ ನಗರಸಭೆ ರಾಜ್ಯಮಟ್ಟದ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಸಮರ್ಪಕ ಕಸ ವಿಲೇವಾರಿಗೆ ವಿಶೇಷ ಮೆಚ್ಚುಗೆಗೂ ಪಾತ್ರವಾಗಿತ್ತು.

ಆದರೆ, ಒಂದೇ ವರ್ಷದಲ್ಲಿ ಈ ಸ್ಥಾನ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. ಗದಗ–ಬೆಟಗೇರಿ ನಗರಸಭೆಯ 35 ವಾರ್ಡ್‌ಗಳ ಪೈಕಿ ವೈಯಕ್ತಿಕ ಶೌಚಾಲಯಗಳ ಕೊರತೆ, ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ಮತ್ತು ಸ್ವಚ್ಛತೆ ಕುರಿತು ನಾಗರಿಕರಲ್ಲಿ ಅರಿವಿನ ಕೊರತೆ ವಿಷಯಗಳೂ ಪ್ರಸಕ್ತ ಸಾಲಿನ ಸಮೀಕ್ಷೆಯಲ್ಲಿ ಢಾಳಾಗಿ ಗೋಚರಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಬಾರಿ ಸಮೀಕ್ಷೆಗೆ ಒಟ್ಟು 4000 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ 2 ಸಾವಿರ ಅಂಕಗಳನ್ನು ಸ್ವಚ್ಛತಾ ಪ್ರಗತಿ ವಿಶ್ಲೇಷಣೆಗೆ ಮತ್ತು 2 ಸಾವಿರ ಅಂಕಗಳನ್ನು ಸಾರ್ವಜನಿಕರ ಅಭಿಪ್ರಾಯಕ್ಕೆ ಮೀಸಲಿಡಲಾಗಿತ್ತು. ಗದಗ–ಬೆಟಗೇರಿ ನಗರಸಭೆಗೆ ಒಟ್ಟು 1724 ಅಂಕಗಳು ಲಭಿಸಿವೆ. ಸ್ವಚ್ಛತೆ ಸೇವೆ ಪ್ರಗತಿ ವಿಭಾಗದಲ್ಲಿ 242 ಅಂಕ, ಸ್ವಚ್ಛತೆ ಕಾರ್ಯಕ್ರಮಗಳ ಮೇಲಿನ ನಿಗಾ ವ್ಯವಸ್ಥೆಗೆ 811ಅಂಕ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ಸಾರ್ವಜನಿಕರ ಸಲಹೆ–ಸೂಚನೆಗಳಿಗೆ 670 ಅಂಕಗಳು ಲಭಿಸಿವೆ.

ದೇಶ ಮಟ್ಟದಲ್ಲಿ ಸ್ಥಾನ ಕುಸಿದರೂ, ರಾಜ್ಯದ ಬಾಗಲಕೋಟೆ, ಚಿಕ್ಕಮಗಳೂರು, ಕೋಲಾರ, ರಾಯಚೂರು, ಬಳ್ಳಾರಿ ಜಿಲ್ಲೆಗಳಿಗಿಂತಲೂ ಗದಗ ಜಿಲ್ಲೆ ಈ ಸ್ವಚ್ಛ ಸರ್ವೇಕ್ಷಣೆ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿದೆ ಎನ್ನುವುದು ಗಮನೀಯ ಅಂಶ.

ಬದಲಾದ ಮಾನದಂಡ;ಕುಸಿದ ಸ್ಥಾನ
ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಈ ಬಾರಿ ಸ್ವಚ್ಛ ನಗರದ ಆಯ್ಕೆಗೆ ನಿಗದಿಪಡಿಸಿದ್ದ ಮಾನದಂಡಗಳನ್ನು ಬದಲಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸಮೀಕ್ಷೆಯಲ್ಲಿ ಭಾಗವಹಿಸಿದ ನಗರ/ಪಟ್ಟಣಗಳ ಸಂಖ್ಯೆಯೂ ಹೆಚ್ಚಿದ್ದವು.

ಮನೆ ಮನೆಯಿಂದ ಕಸ ಸಂಗ್ರಹ, ಬೀದಿಗಳ ಕಸ ಗುಡಿಸುವಿಕೆ, ತ್ಯಾಜ್ಯ ಸಂಸ್ಕರಣೆ, ಘನತ್ಯಾಜ್ಯ ನಿರ್ವಹಣೆ ಜತೆಗೆ ಶಾಲೆಗಳಲ್ಲಿ ಸ್ವಚ್ಛತೆಗೆ ಕೈಗೊಂಡ ಕ್ರಮಗಳು, ಹೊಟೇಲ್‌ಗಳ ಸ್ವಚ್ಛತೆ, ರೈಲು, ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿನ ಸ್ವಚ್ಛತೆ, ಎಲ್‌ಪಿಜಿ ಬದಲು ಜೈವಿಕ ಅನಿಲ ಬಳಕೆ, ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಪ್ರಗತಿ ಇತ್ಯಾದಿ ಅಂಶಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಇದರ ಜತೆಗೆ ಸಾರ್ವಜನಿಕರ ಅಭಿಪ್ರಾಯಗಳಿಗೆ 2 ಸಾವಿರ ಅಂಕಗಳನ್ನು ನಿಗದಿಪಡಿಸಲಾಗಿತ್ತು. ‘2017ರಲ್ಲಿ ಸಮೀಕ್ಷೆ ನಡೆದಾಗ ಇಷ್ಟೊಂದು ವಿಷಯಗಳು ಇರಲಿಲ್ಲ. ಕಸ ವಿಲೇವಾರಿ ಅಂಶವೇ ಪ್ರಮುಖವಾಗಿತ್ತು. ಹೊಸ ಅಂಶಗಳನ್ನು ಸಮೀಕ್ಷೆಗೆ ಒಳಪಡಿಸಿದ್ದರಿಂದ ರ್‍ಯಾಂಕ್‌ ಪಟ್ಟಿಯಲ್ಲಿ ನಗರದ ಸ್ಥಾನ ಕುಸಿತ ಕಂಡಿದೆ’ ಎಂದು 2018ರ ಸಮೀಕ್ಷೆಯ ನೋಡಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ನಗರಸಭೆ ಅಧಿಕಾರಿ ಅಶೋಕ್‌ ದೊಡ್ಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ವಚ್ಛತೆ; ನಗರ/ಪಟ್ಟಣಗಳ ಸ್ಥಾನ ಮಾನ

ರ್‍ಯಾಂಕ್‌ ನಗರ/ಪಟ್ಟಣ
145 ಹುಬ್ಬಳ್ಳಿ–ಧಾರವಾಡ
270 ಬೆಳಗಾವಿ
277 ವಿಜಾಪುರ
290 ಗದಗ ಬೆಟಗೇರಿ
295 ರಾಣೆಬೆನ್ನೂರು
331 ಬಾಗಲಕೋಟೆ
397 ಬಳ್ಳಾರಿ
407 ಹೊಸಪೇಟೆ
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !