ಏ.19ರಂದು ಕಾಲಕಾಲೇಶ್ವರ ರಥೋತ್ಸವ

ಭಾನುವಾರ, ಮೇ 26, 2019
27 °C
ದಕ್ಷಿಣದ ಕಾಶಿ ಎಂದೇ ಹೆಸರು ಪಡೆದಿರುವ ಧಾರ್ಮಿಕ ಕ್ಷೇತ್ರ

ಏ.19ರಂದು ಕಾಲಕಾಲೇಶ್ವರ ರಥೋತ್ಸವ

Published:
Updated:
Prajavani

ಗಜೇಂದ್ರಗಡ: ದಕ್ಷಿಣದ ಕಾಶಿ ಎಂದೇ ಹೆಸರು ಪಡೆದಿರುವ ಇಲ್ಲಿನ ಕಾಲಕಾಲೇಶ್ವರನ ರಥೋತ್ಸವ ದವನದ ಹುಣ್ಣಿಮೆ ದಿನವಾದ ಏ.19ರಂದು ನಡೆಯಲಿದೆ.ಅಂದು ಬೆಳಿಗ್ಗೆ ಕಾಲಕಾಲೇಶ್ವರನಿಗೆ ವಿಶೇಷ ಪೂಜೆ ನಡೆಯಲಿದೆ. ಸಂಜೆ ಚಿತ್ತಾ ನಕ್ಷತ್ರದಲ್ಲಿ ರಥೋತ್ಸವಕ್ಕೆ ಚಾಲನೆ ಲಭಿಸುತ್ತದೆ.

ದೇವರ ದರ್ಶನಕ್ಕೆ ಬರುವ ಭಕ್ತರು ದೇವರಿಗೆ ದವನ ಸಮರ್ಪಿಸಿ, ಪೂಜೆ ಸಲ್ಲಿಸುತ್ತಾರೆ. ರಥೋತ್ಸವದ ನಂತರ ದವನ, ಕಬ್ಬುಗಳನ್ನು ಕೊಂಡು ಊರಿಗೆ ಮರಳುತ್ತಾರೆ.ಈ ಜಾತ್ರೆಗೆ ಯುಗಾದಿ ಪಾಡ್ಯದಿಂದ ಚಾಲನೆ ದೊರೆಯುತ್ತದೆ. ಪಾಡ್ಯದಂದು ರಥದ ಕೋಣೆಯಿಂದ ಬೊಳು ರಥವನ್ನು ಐದು ಹೆಜ್ಜೆ ಎಳೆದು ಪೂಜೆ ಸಲ್ಲಿಸಿ ಭಕ್ತರಿಗೆ ಬೇವು, ಬೆಲ್ಲ ವಿತರಿಸಲಾಗುತ್ತದೆ.

ರಥೋತ್ಸವದ 9 ದಿನಗಳ ಮೊದಲು ರಾತ್ರಿ ದೇವಸ್ಥಾನದಲ್ಲಿ ಕಾಲಕಾಲೇಶ್ವರ ಹಾಗೂ ಬೋರಾದೇವಿಯ ಬಸವ ಪಟ (ಲಗ್ನ ಪತ್ರಿಕೆ) ಕಟ್ಟಿಸಲಾಗುತ್ತದೆ. ಅಂದಿನಿಂದ 9 ದಿನಗಳ ಕಾಲ ಪ್ರತಿದಿನ ರಾತ್ರಿ ಒಂದೊಂದು ವಾಹನದ ಮೇಲೆ ಕಾಲಕಾಲೇಶ್ವರ ಹಾಗೂ ಬೋರಾದೇವಿಯ ಉಚ್ಚಯ್ಯ ಎಳೆಯಲಾಗುತ್ತದೆ. ರಥೋತ್ಸವದ ಹಿಂದಿನ ದಿನ ಮದುವೆ ನಡೆಸಿ ಮರುದಿನ ರಥೋತ್ಸವದಲ್ಲಿ ಮೆರವಣಿಗೆ ಮಾಡಲಾಗುತ್ತದೆ.ಅಲ್ಲದೇ ರಥೋತ್ಸವದ ಹಿಂದಿನ ದಿನ ಸಮೀಪದ ರಾಜೂರು ಗ್ರಾಮದಿಂದ ಕಳಸವನ್ನು ಮೆರವಣಿಗೆಯಲ್ಲಿ ಹೊತ್ತು ತಂದು ರಥದ ಮೇಲಿಟ್ಟು ರಥವನ್ನು ಸಿಂಗರಿಸಲಾಗುತ್ತದೆ. ರಥೋತ್ಸವದ ದಿನ ಸಂಜೆ ರಾಜೂರು ಗ್ರಾಮದಿಂದ ರಥದ ಹಗ್ಗವನ್ನು ಮೆರವಣಿಗೆಯಲ್ಲಿ ತರಲಾಗುತ್ತದೆ.ನಾಡಿನ ವಿವಿಧ ಪ್ರದೇಶಗಳಿಂದ ಸಾವಿರಾರು ಭಕ್ತರು ರಥೋತ್ಸದಲ್ಲಿ ಭಾಗವಹಿಸಿ ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸುತ್ತಾರೆ.

ಐತಿಹ್ಯ: ಕಾಲಕಾಲೇಶ್ವರನ ಗರ್ಭ ಗುಡಿಯ ಪಕ್ಕದಲ್ಲಿ ಗಗನಾವತಿ ಗವಿ ಇದೆ. ಇಲ್ಲಿ ಋಷಿ ಮುನಿಗಳು ತಪಸ್ಸು ಮಾಡಿದ್ದಾರೆ ಎಂಬ ಪ್ರತೀತಿ ಇದೆ. ಗರ್ಭ ಗುಡಿಯ ಹೊರಬಾಗದಲ್ಲಿ ಅಂತರಗಂಗೆ ಇದ್ದು ಅಲ್ಲಿ ಆಲದ ಮರದ ಬೇರಿನ ಮೂಲಕ ನೀರು ಜಿನುಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಮೇಲೆ ಒಂದು ಪೊಟರೆಯಲ್ಲಿ ನೀರು ಜಿನುಗುತ್ತದೆ. ಇದು ಯುಗಾದಿ ಪಾಡ್ಯದಂದು ನೀರು ಜಿನುಗಿರುವುದನ್ನು ನೋಡಿ ಈ ಭಾಗದ ರೈತರು ಮಳೆಗಳನ್ನು ನಿರ್ಧರಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !