ಮಂಗಳವಾರ, ಡಿಸೆಂಬರ್ 1, 2020
23 °C
ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು

ತಪ್ಪು ಮಾಡಿದ್ದು ಖಚಿತವಾದರೆ ಹೊರದಬ್ಬುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಮಠದ ಒಳಗೆ ಇದ್ದುಕೊಂಡು ಅವ್ಯವಹಾರ ನಡೆಸಿರುವುದು ದೃಢಪಟ್ಟಲ್ಲಿ ಅಂತವರನ್ನು ನಿರ್ದಾಕ್ಷಣ್ಯದಿಂದ ಮಠದಿಂದ ಹೊರಕ್ಕೆ ದಬ್ಬಲಾಗುವುದು. ಹಾಗೆಯೇ, ಒಂದು ವೇಳೆ ಈಗ ಕೇಳಿಬಂದಿರುವ ಆರೋಪಗಳ ಸತ್ಯಾಸತ್ಯತೆ ಅರಿಯಲು ನನಗೆ ಸಾಧ್ಯವಾಗದಿದ್ದರೆ ತನಿಖೆಗೆ ಒಪ್ಪಿಸಲಾಗುವುದು’ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘2020ರ ಆಗಸ್ಟ್‌ 1ರಿಂದ ಈಚೆಗೆ ಪ್ರತಿದಿನದ ವಹಿವಾಟು, ಲೆಕ್ಕಾಚಾರವನ್ನು ನಾನೇ ನೋಡಿಕೊಂಡು ಬರುತ್ತಿದ್ದೇನೆ. ಪ್ರತಿ ಪೈಸೆಗೂ ಲೆಕ್ಕ ಇಟ್ಟಿದ್ದೇನೆ. ಈ ಹಿಂದೆ ಮಠದ ಆಡಳಿತ, ಹಣಕಾಸಿನ ವ್ಯವಹಾರವನ್ನೆಲ್ಲಾ ವ್ಯವಸ್ಥಾಪಕರೇ ನೋಡಿಕೊಂಡು ಬರುತ್ತಿದ್ದರು. ಈಗ ಮಠದ ಬಗ್ಗೆ ಕೇಳಿಬಂದಿರುವ ಆರೋಪದಂತೆ ಈ ಹಿಂದೆ ನಡೆದಿರುವ ಘಟನೆಗಳ ಸತ್ಯಾಸತ್ಯತೆ ಅರಿಯಲು ನನಗೆ ಸ್ವಲ್ಪ ಸಮಯ ಬೇಕಿದೆ. ಎಲ್ಲ ಲೆಕ್ಕಪತ್ರಗಳನ್ನು ಪರಿಶೀಲಿಸಿ, ಮಠದ ಭಕ್ತರ ಮುಂದೆ ಸತ್ಯ ತೆರದಿಡುತ್ತೇನೆ’ ಎಂದು ಅವರು ಹೇಳಿದರು.

‘ಮಠದಲ್ಲಿ ಅವ್ಯವಹಾರ ಆಗಿದೆ ಎಂಬುದು ಸುಳ್ಳು. ಆರೋಪ ಕೇಳಿ ಬಂದ ನಂತರ, ಹಿಂದಿನ ಲೆಕ್ಕಪತ್ರಗಳನ್ನು ನೋಡಲು ತೊಡಗಿದ್ದೇನೆ. ಅಷ್ಟು ವರ್ಷಗಳ ವ್ಯವಹಾರ ವಹಿವಾಟುಗಳ ಬಗ್ಗೆ ತಿಳಿಯಲು ತುಂಬ ಸಮಯ ಹಿಡಿಯುತ್ತದೆ. ಈಗ ನೋಡಿರುವ ಪ್ರಕಾರ ಅವ್ಯವಹಾರ ನಡೆದಿದೆ ಎಂಬ ಆರೋಪ ಸುಳ್ಳು. ಮಠದ ಆದಾಯ, ಖರ್ಚುಗಳ ಆಡಿಟ್‌ ಮಾಡಿಸಲಾಗಿದ್ದು, ಅವುಗಳನ್ನು ತಾಳೆ ಮಾಡಿ ನೋಡಿ ಅವ್ಯವಹಾರ ಆಗಿದೆಯೋ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಲಾಗುವುದು’ ಎಂದು ಹೇಳಿದರು.

‘ಕಳೆದ ವರ್ಷ ಉಂಟಾದ ಪ್ರವಾಹದಿಂದಾಗಿ ಸಾವಿರಾರು ಸಂತ್ರಸ್ತರಿಗೆ ಶ್ರೀಮಠದಲ್ಲಿ ವಸತಿ, ಅನ್ನದಾಸೋಹ ಕಲ್ಪಿಸಲಾಗಿತ್ತು. ಆ ಸಂದರ್ಭದಲ್ಲಿ ಚಿನ್ನವನ್ನು ಮಾರಿ ಖರ್ಚುವೆಚ್ಚ ಭರಿಸಲಾಗಿದೆ. ಅದರ ದಾಖಲೆಪತ್ರಗಳನ್ನು ಹುಡುಕಲಾಗುತ್ತಿದೆ. ಜತೆಗೆ ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಹೊಸದಾಗಿ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳನ್ನು ಕಟ್ಟಿಸಲಾಗಿದೆ. ಮಠಕ್ಕೆ ಆರ್ಥಿಕ ಸಂಕಷ್ಟ ಎದುರಾದ ಸಮಯದಲ್ಲಿ ಚಿನ್ನವನ್ನು ಮಾರಿ ಹಣ ಬಳಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಅವ್ಯವಹಾರ ನಡೆದಿಲ್ಲ ಎಂಬುದು ತಿಳಿಯುತ್ತದೆ. ಒಂದು ವೇಳೆ, ಮಠದ ಒಳಗಿದ್ದುಕೊಂಡು 1ರೂಪಾಯಿ ಅವ್ಯವಹಾರ ಮಾಡಿದ್ದು ಗೊತ್ತಾದರೂ ಅವರನ್ನು ಮುಲಾಜಿಲ್ಲದೇ ಹೊರಹಾಕುತ್ತೇನೆ’‍ ಎಂದು ಅವರು ಪುನರುಚ್ಚರಿಸಿದರು.

‘‌ಪುತ್ಥಳಿ ನಿರ್ಮಾಣಕ್ಕೆ ನೀಡಿದ ₹3 ಕೋಟಿ ಹಣದಲ್ಲಿ ₹1.32 ಲಕ್ಷ ಜಿಲ್ಲಾಧಿಕಾರಿ ಸುಪರ್ದಿಯಲ್ಲಿದೆ. ₹60 ಲಕ್ಷ ವೆಚ್ಚದಲ್ಲಿ ಪುಟ್ಟಯ್ಯಜ್ಜನವರ ಮೂರ್ತಿ ನಿರ್ಮಾಣ ಮಾಡಲಾಗಿದೆ. ಹಾತಲಗೇರಿ ನಾಕಾದಲ್ಲಿ ಕಟ್ಟಿಸಿದ ಕಟ್ಟಡ, ಎರಡು ನೀರಿನ ಟ್ಯಾಂಕ್‌ ನಿರ್ಮಾಣ ಮಾಡಲಾಗಿದೆ’ ಎಂದು ಹೇಳಿದರು.

‘ಎಲ್ಲದಕ್ಕೂ ಲೆಕ್ಕ ಪತ್ರಗಳು ಇದ್ದು ಅವುಗಳನ್ನು ಸೋಸಿ ತೆಗೆಯಲು ಸ್ವಲ್ಪ ಸಮಯಾವಕಾಶ ನೀಡಬೇಕು. ಸತ್ಯವನ್ನು ಅರಿತು ಮತ್ತೊಮ್ಮೆ ಭಕ್ತರ ಮುಂದೆ ಬರುತ್ತೇನೆ. ಆಶ್ರಮ ಉಳಿಸಿ ಬೆಳೆಸಬೇಕು ಎಂಬುದು ನನ್ನ ಆಸೆ. ಕಳ್ಳರಿಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ನಾನೇನು ಹುಲಿಯೇ, ಕರಡಿಯೇ?

ಮಠದಲ್ಲಿ ನಡೆದಿರುವ ಅವ್ಯವಹಾರದ ತನಿಖೆ ನಡೆಸುವಂತೆ ಒತ್ತಾಯಿಸಿ ಪತ್ರ ಬರೆದವರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂಬ ಪ್ರಶ್ನೆಗೆ, ‘ಅವರನ್ನು ಹೆದರಿಸಲು ನಾನೇನು ಹುಲಿಯೇ, ಕರಡಿಯೇ? ಕಣ್ಣಿಲ್ಲದ ಸಾಮಾನ್ಯ ಮನುಷ್ಯ. ಸಮಾಜಕ್ಕೆ, ಭಕ್ತರಿಗೆ ಮೋಸ ಮಾಡಿ ಮಾಡುವುದಾದರೂ ಏನಿದೆ. ನನ್ನ ಅವಧಿಯಲ್ಲಿ 1433 ತುಲಾಭಾರಗಳು ನಡೆದಿದ್ದು, ಒಂದು ತುಲಾಭಾರದಿಂದ ₹12 ಸಾವಿರ ಸಿಗುತ್ತದೆ. ಆ ಹಣವನ್ನೆಲ್ಲಾ ವ್ಯವಸ್ಥಾಪಕರ ಬಳಿಯೇ ಕೊಟ್ಟಿದ್ದೇವೆ. ಅದಕ್ಕೆ ಎಲ್ಲ ಲೆಕ್ಕಪತ್ರಗಳು ಇವೆ’ ಎಂದು ಕಲ್ಲಯ್ಯಜ್ಜನವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.