ಸೋಮವಾರ, ಏಪ್ರಿಲ್ 19, 2021
33 °C
ದಿ.ಕೆ.ಎಚ್‌.ಪಾಟೀಲ ಜಯಂತ್ಯುತ್ಸವ

ಕೆ.ಎಚ್‌.ಪಾಟೀಲರು ಮೇಧಾವಿ ರಾಜಕಾರಣಿ: ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಹುಲಕೋಟಿ ಗ್ರಾಮದ ಹೆಸರು ಭಾರತದ ನಕಾಶೆಯಲ್ಲಿ ಮಿನುಗುತ್ತಲಿದೆ. ಕೆ.ಎಚ್‌.ಪಾಟೀಲ ಅವರಂತಹ ರಾಜಕಾರಣಿ ಈ ರಾಜ್ಯದ ಮುಖ್ಯಮಂತ್ರಿ ಆಗಲಿಲ್ಲವಲ್ಲ ಎಂಬ ನೋವು ಮನಸ್ಸಿನಲ್ಲಿ ಕಾಡುತ್ತಿದೆ. ಆದರೂ, ಅವರು ಒಬ್ಬ ಮುಖ್ಯಮಂತ್ರಿಯಷ್ಟೇ ವರ್ಚಸ್ಸು ಬೆಳೆಸಿಕೊಂಡ ಮೇಧಾವಿ ರಾಜಕಾರಣಿ’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ‌

ಅವರು ಹುಲಕೋಟಿ ಗ್ರಾಮದ ಕೆ.ಎಚ್‌.ಪಾಟೀಲ ವಿದ್ಯಾಮಂದಿರದಲ್ಲಿ ಮಂಗಳವಾರ ನಡೆದ ದಿ. ಕೆ.ಎಚ್‌.ಪಾಟೀಲ ಅವರ 97ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಒಬ್ಬ ಉತ್ತಮ ರಾಜಕಾರಣಿ ಇರಲಿ, ಇಲ್ಲದಿರಲಿ ಅವರ ಹೆಸರು ಸದಾ ನೆನಪಿನಲ್ಲಿ ಇರುತ್ತದೆ. ಆ ರೀತಿ ದೇಶಕ್ಕೆ ಉತ್ತಮ ಕೊಡುಗೆ ಕೊಟ್ಟವರು ಕೆ.ಎಚ್‌.ಪಾಟೀಲ. ಅವರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದ್ದರಿಂದಲೇ ಅವರ ಮಕ್ಕಳು ಕೂಡ ಸಾರ್ವಜನಿಕರಿಗೆ ಅನುಕೂಲವಾದಂತಹ ಕೆಲಸ ಮಾಡಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದ್ದಾರೆ’ ಎಂದು ಹೇಳಿದರು.

‘ಉತ್ತರ ಕರ್ನಾಟಕದ ವಿಷಯ ಬಂದಾಗ ನಾವೆಲ್ಲರೂ ಒಂದಾಗಿ ನಿಲ್ಲುತ್ತಿದ್ದೆವು. ಹಿಂದಿನ ರಾಜಕಾರಣಕ್ಕೂ ಈಗಿನ ರಾಜಕಾರಣಕ್ಕೂ ತುಂಬ ವ್ಯತ್ಯಾಸ ಇದೆ. ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಚುನಾವಣೆ ಮುಗಿದ ನಂತರ ನಮ್ಮ ಊರಿನ, ರಾಜ್ಯದ ಅಭಿವೃದ್ಧಿಗೆ ಮಾತ್ರ ಬಡಿದಾಡಬೇಕು. ರಾಜಕಾರಣವೇ ನಮ್ಮ ಮುಖ್ಯ ಉದ್ಯೋಗ ಆಗಬಾರದು’ ಎಂದು ಹೇಳಿದರು.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ‘ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬುನಾದಿ ಹಾಕಿದ ಕೆ.ಎಚ್‌.ಪಾಟೀಲ ಅವರು ಈ ನಿಟ್ಟಿನಲ್ಲಿ ಅನೇಕ ಮಿಲ್‌ಗಳು, ಶಾಲಾ ಕಾಲೇಜು ಆರಂಭಿಸಿದರು. ರೈತ ಮಿತ್ರರಾಗಿದ್ದ ಅವರು ಹುಲಕೋಟಿ ಹುಲಿ ಎಂದೇ ಖ್ಯಾತರಾಗಿದ್ದರು’ ಎಂದು ಹೇಳಿದರು.

‘ಸರ್ಕಾರ ಸರಿಯಾಗಿ ಕೆಲಸ ನಿರ್ವಹಿಸದಿದ್ದಾಗ ರಚನಾತ್ಮಕವಾಗಿ ಟೀಕಿಸುವುದು ವಿರೋಧ ಪ‍ಕ್ಷದ ಕೆಲಸವಾಗಬೇಕು. ಆದರೆ, ರಾಜಕಾರಣಿಗಳು ಪರಸ್ಪರರ ನಡುವೆ ಟೀಕೆ, ಟಿಪ್ಪಣಿ ಮಾಡಬಾರದು. ಮಾಧ್ಯಮದವರು ಅಥವಾ ಬೇರೆ ಯಾರೊಬ್ಬರ ಪ್ರಚೋದನೆಯಿಂದಲೂ ತಮ್ಮ ಮಿತಿಯನ್ನು ಮೀರಿ ಟೀಕಿಸಲು ಹೋಗಬಾರದು’ ಎಂದು ಹೇಳಿದರು. 

ಶಾಸಕ ಎಚ್‌.ಕೆ.ಪಾಟೀಲ ಮಾತನಾಡಿ, ‘ತಂದೆಯವರ ಪ್ರೇರಣೆ, ಸ್ಫೂರ್ತಿಯಿಂದ ಸಾಕಷ್ಟು ಜನೋಪಯೋಗಿ ಕಾರ್ಯಕ್ರಮಗಳು ನಡೆಯುತ್ತಿವೆ. ಹುಲಕೋಟಿ ದೇಶದಲ್ಲೇ ಶ್ರೇಷ್ಠ ಗ್ರಾಮ ಎಂಬ ಹಿರಿಮೆ ಹೊಂದಿದೆ. ಇದರ ಹಿಂದೆ ಊರಿನ ಹಿರಿಯರ ತ್ಯಾಗ, ಯುವಕರ ಒಗ್ಗಟ್ಟು ಕಾರಣ. ಕೆ.ಎಚ್‌.ಪಾಟೀಲರ ರಾಜಕಾರಣವನ್ನು ರಾಜ್ಯದೆಲ್ಲೆಡೆ ಈಗಲೂ ನೆನಪಿಸಿಕೊಳ್ಳುತ್ತಾರೆ. ಅವರು ಅಷ್ಟು ನಿಷ್ಠುರವಾಗಿ ಆಗಿರದಿದ್ದರೆ ಕನಿಷ್ಠ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಿದ್ದರು’ ಎಂದು ಹೇಳಿದರು.

‘ಸಜ್ಜನ ರಾಜಕಾರಣ ಮಾಡಬೇಕು. ಬೇರೆಯವರನ್ನು ಹೋಲಿಕೆ ಮಾಡಿದರೆ ಇಲ್ಲಿನ ರಾಜಕಾರಣಿಗಳು ಸರಳ ಹಾಗೂ ಸಜ್ಜನ ರಾಜಕಾರಣ ಮಾಡುತ್ತಿದ್ದೇವೆ. ಸಿಟ್ಟಿನಿಂದ ಎಡವಿದ್ದರೆ ಅದನ್ನು ಸರಿಪಡಿಸಿಕೊಂಡು ಮುನ್ನಡೆಯುವ ಪ್ರತಿಜ್ಞೆ ಮಾಡಬೇಕು’ ಎಂದು ಹೇಳಿದರು.

ಮಾಜಿ ಸಚಿವ ಬಿ.ಆರ್‌.ಯಾವಗಲ್‌, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ನಾಡಗೌಡ್ರ, ಮಾಜಿ ಶಾಸಕ ಡಿ.ಆರ್‌.‍ಪಾಟೀಲ ಇದ್ದರು.

ಸಮನ್ವಯ ಸಂಸ್ಥೆಗೆ ಚಾಲನೆ

ಶಾಸಕ ಎಚ್‌.ಕೆ.ಪಾಟೀಲ ಮಾತನಾಡಿ, ‘ಡಿ.ಆರ್‌.ಪಾಟೀಲ ಅವರ ಮಾರ್ಗದರ್ಶನದಲ್ಲಿ ಗ್ರಾಮದ ಮಂದಿರ, ಮಸೀದಿ ಮತ್ತು ಚರ್ಚ್‌ಗಳನ್ನು ಸೇರಿಸಿ ಒಂದು ಒಕ್ಕೂಟದ ಮಾದರಿಯಲ್ಲಿ ಸಮನ್ವಯ ಸಂಸ್ಥೆಯನ್ನು ನೋಂದಣಿ ಮಾಡಿಸಿದ್ದು, ಅದಕ್ಕೆ ಇಂದು ಚಾಲನೆ ನೀಡಿದ್ದೇವೆ. ಊರಿನ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂಬ ಕನಸಿನೊಂದಿದೆ ಇದಕ್ಕೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

‘ಈ ಹಿಂದೆ ಸ್ಥಾಪಿಸಿದ ಕುಡಿಯುವ ಶುದ್ಧ ನೀರಿನ ಘಟಕಗಳು ರಾಷ್ಟ್ರ ಮಟ್ಟದಲ್ಲಿ ಜನಪ್ರಿಯತೆ ಪಡೆದಂತೆ ಇದು ಕೂಡ ರಾಜ್ಯದ ಗಮನ ಸೆಳೆಯುವಂತಾಗಬೇಕು. ಅದಕ್ಕೆ ಊರಿನ ಯುವಕರೆಲ್ಲರೂ ಶ್ರಮಿಸಬೇಕು’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು