ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ | ಕೃಷಿ ಆಶ್ರಮ: ಜ್ಞಾನ ವಿನಿಮಯದ ತೊಟ್ಟಿಲು

ಕೆ.ಎಂ.ಸತೀಶ್‌ ಬೆಳ್ಳಕ್ಕಿ
Published 18 ಮೇ 2024, 5:53 IST
Last Updated 18 ಮೇ 2024, 5:53 IST
ಅಕ್ಷರ ಗಾತ್ರ

ಗದಗ: ಕೃಷಿ ಕ್ಷೇತ್ರದಲ್ಲಿನ ಆವಿಷ್ಕಾರ, ಹೊಸ ಆಲೋಚನೆಗಳ ವಿನಿಮಯಕ್ಕೆ ವೇದಿಕೆ ನಿರ್ಮಿಸಲು ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯವು ‘ಕೃಷಿ ಆಶ್ರಮ’ ಎಂಬ ವಿನೂತನ ಪರಿಕಲ್ಪನೆ ಪರಿಚಯಿಸಿದೆ. ಇಲ್ಲಿ ನಡೆಯುವ ಜ್ಞಾನ ವಿನಿಮಯ ಚಟುವಟಿಕೆಗಳಲ್ಲಿ ರೈತರು ಮುಕ್ತವಾಗಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಹಳ್ಳಿಮನೆಯ ಸೊಗಡಿನಲ್ಲೇ ಆಶ್ರಮ ಕಟ್ಟಲಾಗಿದೆ.

ಕೃಷಿ ಆಶ್ರಮದಲ್ಲಿ ರೈತರು ನೇರವಾಗಿ ತಜ್ಞರೊಂದಿಗೆ ಚರ್ಚಿಸಬಹುದು. ಜೊತೆಗೆ ಕೃಷಿ ಕ್ಷೇತ್ರದಲ್ಲಿನ ತಮ್ಮ ಅನುಭವ ಹಂಚಿಕೊಳ್ಳಬಹುದು. ಒಟ್ಟಾರೆ, ಕೃಷಿ ಚಟುವಟಿಕೆಗೆ ಪೂರಕವಾದ ಕಾರ್ಯಗಳು ಆಶ್ರಮದಲ್ಲಿ ನಡೆಯಲಿದೆ.

ಕೃಷಿ ಆಶ್ರಮದಲ್ಲಿ ವಿಷಯಗಳನ್ನು ಆಸಕ್ತಿಯಿಂದ ಆಲಿಸುವುದರ ಜೊತೆಗೆ ಪ್ರತ್ಯಕ್ಷವಾಗಿ ನೋಡಿ ಕಲಿಯುವ ಅವಕಾಶವೂ ಇದೆ. ಸಸಿ ಬೆಳೆಸುವ ಆಸಕ್ತಿಯುಳ್ಳ ರೈತ, ಇಲ್ಲಿನ ಸಸ್ಯಪಾಲನಾ ಕ್ಷೇತ್ರಕ್ಕೆ ಭೇಟಿ ನೀಡಿ ಸಸಿಗಳನ್ನು ಬೆಳೆಸುವ ಮತ್ತು ಪೋಷಿಸುವ ವಿಧಾನ ತಿಳಿಯಬಹುದು. ಅದೇ ರೀತಿ, ಇಲ್ಲಿ ರಾಶಿವನ, ಪಂಚವಟಿ, ಸ್ಮೃತಿವನ, ಗೋಶಾಲೆ, ಜೈವಿಕ ಇಂಧನ ಘಟಕವೂ ಇದೆ. ಗಾಣದಿಂದ ಎಣ್ಣೆ ತೆಗೆಯುವ ಘಟಕವೂ ಇದೆ. ಇಲ್ಲಿ ಇವೆಲ್ಲವನ್ನೂ ಕೇಳಿ ತಿಳಿದುಕೊಳ್ಳಬಹುದು ಮತ್ತು ನೋಡಿ, ಕಲಿಯಬಹುದು.

‘ರೈತರನ್ನು ವಿಶ್ವವಿದ್ಯಾಲಯದ ಸಭಾಂಗಣಕ್ಕೆ ಕರೆಯಿಸಿ, ಹೊಸ ವಿಷಯ ತಿಳಿಸಿಕೊಡುವುದಕ್ಕೆ ಮತ್ತು ದೈನಂದಿನ ಜೀವನದಲ್ಲಿನ ವಾತಾವರಣದಲ್ಲಿ ಅವರಿಗೆ ಹೇಳಿಕೊಡುವುದಕ್ಕೆ ವ್ಯತ್ಯಾಸ ಇದೆ. ರೈತರು ಸಹಜವಾದ ವಾತಾವರಣದಲ್ಲೇ ಎಲ್ಲವನ್ನೂ ಕೇಳಿ ತಿಳಿದುಕೊಳ್ಳಲಿ ಎಂಬ ಕಾರಣಕ್ಕೆ ಕೃಷಿ ಆಶ್ರಮ ನಿರ್ಮಿಸಲಾಗಿದೆ’ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೃಷಿ ಆಶ್ರಮದಲ್ಲಿ ಯುವಜನರಿಗೂ ತರಬೇತಿ ನೀಡಲಾಗುವುದು. ಉತ್ತಮ ಶಿಕ್ಷಣ ಪಡೆದು ಕೃಷಿಯತ್ತ ಆಸಕ್ತಿ ತಳೆಯುವ ಯುವಜನರಿಗೆ ಅಗತ್ಯ ತರಬೇತಿ, ಮಾರ್ಗದರ್ಶನ ನೀಡುತ್ತೇವೆ. ಉಳುಮೆ ಮಾಡುವುದು ಹೇಗೆ? ನೇಗಿಲಿಗೆ ಎತ್ತು ಕಟ್ಟುವುದು ಹೇಗೆ ಎಂಬುದು ಸೇರಿ ಸಣ್ಣ ಸಣ್ಣ ವಿಷಯಗಳನ್ನೂ ಪ್ರಾಯೋಗಿಕವಾಗಿ ತಿಳಿಸಲಾಗುವುದು’ ಎಂದರು.

ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ
ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ
ಕೃಷಿ ಆಶ್ರಮದ ಮೂಲಕ ಒಕ್ಕಲುತನದ ಪ್ರಾಮುಖ್ಯತೆ ತಿಳಿಸಿಕೊಡುವ ಉದ್ದೇಶವಿದೆ. ಸಾಮಾನ್ಯ ರೈತರೊಂದಿಗೆ ಯಶಸ್ವಿ ರೈತರು ತಮ್ಮ ಅನುಭವ ಹಂಚಿಕೊಳ್ಳಲು ಇದು ವೇದಿಕೆ ಒದಗಿಸಲಿದೆ
ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ, ಕುಲಪತಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT