ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕೀಕರಣಕ್ಕೆ ಸಮಗ್ರತೆ ಒದಗಿಸಿದ ಕಸಾಪ: ಸಾಹಿತಿ ಅಂದಾನಪ್ಪ ವಿಭೂತಿ

ಗದಗ ಜಿಲ್ಲಾ ಕಸಾಪದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ
Last Updated 6 ಮೇ 2021, 4:20 IST
ಅಕ್ಷರ ಗಾತ್ರ

ಗದಗ: ‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವಧಿಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿತ್ವದ ಫಲವಾಗಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಗೊಂಡು, ಕರ್ನಾಟಕ ಏಕೀಕರಣ ಹೋರಾಟಕ್ಕೆ ಸಮಗ್ರತೆ ಒದಗಿಸಿತು’ ಎಂದು ಸಾಹಿತಿ ಅಂದಾನಪ್ಪ ವಿಭೂತಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಏರ್ಪಡಿಸಿದ್ದ ‘ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಪರಿಷತ್ ಸ್ಥಾಪನೆಗೊಂಡು 106 ವರ್ಷಗಳಾಗಿವೆ. ಇದುವರೆಗೆ 25 ಅಧ್ಯಕ್ಷರುಗಳನ್ನು ಕಂಡ ಪರಿಷತ್ತು 84 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಮೂಲಕ ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಗೆ ಬದ್ಧತೆಯಿಂದ ಕಾರ್ಯ ಮಾಡುತ್ತ ಬಂದಿರುವುದು ಶ್ಲಾಘನೀಯ. 3.26 ಲಕ್ಷಕ್ಕೂ ಹೆಚ್ಚು ಆಜೀವ ಸದಸ್ಯರನ್ನು ಹೊಂದಿದ ಹಿರಿಮೆಗೆ ಪಾತ್ರವಾಗಿದೆ’ ಎಂದರು.

ಹಿರಿಯ ಸಾಹಿತಿ ಪ್ರೊ. ರವೀಂದ್ರ ಕೊಪ್ಪರ ಮಾತನಾಡಿ, ‘ಕಸಾಪ ಕನ್ನಡಿಗರ ಅಪೇಕ್ಷೆ ಮತ್ತು ನಿರೀಕ್ಷೆಗೆ ಸ್ಪಂದಿಸುವ ಸಂಸ್ಥೆ. ಗ್ರಂಥ ಪ್ರಕಟಣೆ, ಸಾಹಿತ್ಯ ಸಮ್ಮೇಳನಗಳ ಆಯೋಜನೆ, ನಿಘಂಟು ರಚನೆ ಮೂಲಕ ಕನ್ನಡ ಬೆಳೆವಣಿಗೆಗೆ ಅಪೂರ್ವ ಕಾರ್ಯವನ್ನು ಮಾಡುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಶರಣು ಗೋಗೇರಿ, ‘ಸುಂದರ, ಸುಲಲಿತವಾದ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಮೃದ್ಧ ಸಾಹಿತ್ಯ ನಿರ್ಮಾಣಗೊಂಡಿದೆ. ಆಂಗ್ಲಭಾಷೆಯ ಪ್ರಭಾವದ ಮಧ್ಯೆಯೂ ಕನ್ನಡ ಸತ್ವಯುತವಾಗಿ ಬೆಳೆಯುತ್ತಿದೆ’ ಎಂದು ಬಣ್ಣಿಸಿದರು.

ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರೇಮನಾಥ ಗರಗ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎ.ಒ. ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಎಂ. ಹಿರೇಮಠ, ಗದಗ ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಶಿವಯೋಗಿ ಬಂಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಫ್. ಹಳ್ಯಾಳ, ಜಿಲ್ಲಾ ಕಸಾಪ ಸಹ ಕಾರ್ಯದರ್ಶಿ ಸಿ.ಕೆ. ಕೇಸರಿ, ಗೌರವ ಕಾರ್ಯದರ್ಶಿ ಅಶೋಕ ಹಾದಿ ಉಪಸ್ಥಿತರಿದ್ದರು.

ಕೆ.ಬಿ. ಕೊಣ್ಣೂರ ಸ್ವಾಗತಿಸಿದರು. ಪ್ರಕಾಶ ಮಂಗಳೂರ ನಿರೂಪಿಸಿದರು. ಡಾ.ಜಿ.ಎಸ್. ಯತ್ನಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT