ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಗೇರಿ ಓಣಿಯಲ್ಲಿ ಸ್ವಚ್ಛತೆ ಕೊರತೆ

ಗೌಡರ ಓಣಿ, ಗುಜ್ಜರ ಬಸ್ತಿ ಪ್ರದೇಶ ಮೂಲ ಸೌಲಭ್ಯಗಳಿಂದ ವಂಚಿತ
Last Updated 20 ಜುಲೈ 2018, 17:29 IST
ಅಕ್ಷರ ಗಾತ್ರ

ಗದಗ: ತಿಪ್ಪೆರಾಶಿಯಂತಾದ ಕಸದ ತೊಟ್ಟಿ, ಮಿತಿ ಮೀರಿದ ಹಂದಿಗಳ ಹಾವಳಿ, ಗುಂಡಿಗಳು ಬಿದ್ದು ಹದಗೆಟ್ಟಿರುವ ರಸ್ತೆ, ವಾರ್ಡ್‌ ನಂಬರ್ 23ರ ವ್ಯಾಪ್ತಿಗೆ ಬರುವ ಗದುಗಿನ ಒಕ್ಕಲಗೇರಿ ಓಣಿ, ಗುಜ್ಜರ ಬಸ್ತಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡಿದರೆ ಮೂಲಸೌಕರ್ಯ ಕೊರತೆ ಕಣ್ಣಿಗೆ ರಾಚುತ್ತದೆ.

ಒಕ್ಕಲಗೇರಿ ಓಣಿಯ ಸಮೀಪದ ಸೋಮೇಶ್ವರ ದೇವಸ್ಥಾನದ ಎದುರು ಸಿಮೆಂಟ್‌ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಡಲಾಗಿದೆ. ದೇವಸ್ಥಾನದ ಎದುರು 80 ಮೀಟರ್‌ ಉದ್ದದವರೆಗೆ ರಸ್ತೆಯಲ್ಲಿ ಜಲ್ಲಿಕಲ್ಲು ಹಾಕಲಾಗಿದೆ. ಐದು ತಿಂಗಳು ಕಳೆದರೂ, ರಸ್ತೆ ಕಾಮಗಾರಿ ಆರಂಭವಾಗದ ಕಾರಣ ವಾಹನ ಸವಾರರು, ಪಾದಾಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಚರಂಡಿ ಸ್ವಚ್ಛಗೊಳಿಸದ ಕಾರಣ ಹೂಳಿನಿಂದ ಭರ್ತಿಯಾಗಿವೆ. ಮಳೆಯಾದರೆ ಚರಂಡಿ ನೀರು ರಸ್ತೆಯ ಮೇಲೆ ಉಕ್ಕಿ ಹರಿಯುತ್ತದೆ. ಅಸಮರ್ಪಕ ಕಸ ವಿಲೇವಾರಿಯಿಂದಾಗಿ ಇಡೀ ಬಡಾವಣೆಯಲ್ಲಿ ರಸ್ತೆಯ ಬದಿಗೆ ಎಲ್ಲಿ ಬೇಕೆಂದರಲ್ಲಿ ಕಸ ಸುರಿಯಲಾಗುತ್ತಿದೆ. ತ್ಯಾಜ್ಯದ ದುರ್ವಾಸನೆಯಿಂದ ಜನರು ರಸ್ತೆಯ ಮೇಲೆ ಓಡಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಜೋರಾಗಿ ಗಾಳಿ ಬೀಸಿದರೆ ಪ್ಲಾಸ್ಟಿಕ್‌ ಸೇರಿದಂತೆ ಕಸ ಮನೆಯೊಳಗೆ ನುಗ್ಗುತ್ತದೆ ಎನ್ನುತ್ತಾರೆ ಬಡಾವಾಣೆಯ ನಿವಾಸಿಗಳು.

ಚರಂಡಿಗಳು ಹಂದಿಗಳ ಆವಾಸ ಸ್ಥಳವಾಗಿ ಬದಲಾಗಿವೆ. ಹಂದಿಗಳ ಹಾವಳಿಗೆ ನಿವಾಸಿಗಳು ಕಂಗೆಟ್ಟು ಹೋಗಿದ್ದಾರೆ. ಬಾಗಿಲು ತೆರೆದರೆ ಮನೆಯೊಳಗೆ ಹಂದಿಗಳು ನುಗ್ಗುತ್ತಿವೆ. ಜತೆಗೆ ಸೊಳ್ಳೆಗಳ ಕಾಟವು ವಿಪರೀತವಾಗಿದೆ.

‘ಸೋಮೇಶ್ವರ ದೇವಸ್ಥಾನದ ಎದುರಿನ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಚರಂಡಿ ಸ್ವಚ್ಛತೆಗೆ, ತ್ಯಾಜ್ಯ ವಿಲೇವಾರಿಗೆ ಹಾಗೂ ಹಂದಿಗಳ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ನಿವಾಸಿಗಳಾದ ನಾಗರಾಜ, ಕುಮಾರ ಕರಿಬಿಷ್ಠಿ ಒತ್ತಾಯಿಸಿದರು.

‘23ನೇ ವಾರ್ಡ್‌ನಲ್ಲಿರುವ ಮನೆಗಳಿಗೆ 90ಕ್ಕೂ ಹೆಚ್ಚು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ನಗರಸಭೆ ಸಿಬ್ಬಂದಿ ನಿರ್ಲಕ್ಷ್ವ ವಹಿಸಿದ್ದರಿಂದ ಬಡಾವಣೆಯಲ್ಲಿ ಸಮರ್ಪಕವಾಗಿ ಸ್ವಚ್ಛತೆ ನಡೆದಿಲ್ಲ. ಈಚೆಗೆ ನಡೆದ ಸ್ವಚ್ಛ ಸರ್ವೇಕ್ಷಣ ಸಭೆಯಲ್ಲಿ, ಸಮರ್ಪಕ ಕಸ ವಿಲೇವಾರಿ ಮಾಡುವಂತೆ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಇನ್ನು ಮುಂದೆ ವಾರ್ಡ್ ಸದಸ್ಯರ ಸಮುಖ್ಮದಲ್ಲೇ ಸ್ವಚ್ಛತಾ ಕೆಲಸ ನಡೆಯಲಿದೆ’ ಎಂದು ವಾರ್ಡ್‌ ಸದಸ್ಯ ಬರಕತ್‌ ಅಲಿ ಮುಲ್ಲಾ ಪ್ರಜಾವಾಣಿಗೆ ತಿಳಿಸಿದರು.

ಅನುದಾನದ ಕೊರತೆಯಿಂದ ಗದುಗಿನ ಸೋಮೇಶ್ವರ ದೇವಸ್ಥಾನದ ಎದುರು ಸಿಮೆಂಟ್‌ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಡಲಾಗಿದೆ
– ಬರಕತ್‌ ಅಲಿ ಮುಲ್ಲಾ,23ನೇ ವಾರ್ಡ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT