ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ಬದಲಾವಣೆಯ ನಿರೀಕ್ಷೆಯಲ್ಲಿ ಕಾಲೊನಿಗಳು

ಮೂಲಸೌಲಭ್ಯ ವಂಚಿತ ಆಶ್ರಯ ಬಡಾವಣೆಗಳು; ಹಂಚಿಕೆ ಆಗದ ನಿವೇಶನಗಳು
Published 1 ಏಪ್ರಿಲ್ 2024, 5:02 IST
Last Updated 1 ಏಪ್ರಿಲ್ 2024, 5:02 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಬಡಜನತೆಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆಗಳ ಮೂಲಕ ಆಶ್ರಯ ನಿವೇಶನಗಳನ್ನು ನೀಡುತ್ತಲೇ ಇದೆ. ಅದರಂತೆ ಇಲ್ಲಿನ ಪುರಸಭೆಯಿಂದ ಈಗಾಗಲೇ ಸಾವಿರಾರು ಜನರಿಗೆ ಆಶ್ರಯ ನಿವೇಶನಗಳನ್ನು ನೀಡಿದ್ದು ಮನೆಗಳೂ ನಿರ್ಮಾಣಗೊಂಡಿವೆ. ಆದರೆ ಹಲವೆಡೆ ಮೂಲಸೌಕರ್ಯ ಮಾತ್ರ ಮರೀಚಿಕೆಯಾಗಿದೆ.

ನಲವತ್ತು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಇಂದಿರಾನಗರ ಆಶ್ರಯ ಕಾಲೊನಿ ಸೇರಿದಂತೆ ಪಟ್ಟಣದಲ್ಲಿ ರಂಭಾಪುರಿ ನಗರ, ಕರೇಗೌರಿ, ಗಡ್ಡದೇವರಮಠ ನಗರ, ಮುಕ್ತಿನಗರಗಳಲ್ಲಿ ಕಳೆದ ಎರಡು ದಶಕಗಳ ಹಿಂದೆ ನಿವೇಶನಗಳನ್ನು ವಿತರಿಸಲಾಗಿದೆ. ಈ ಎಲ್ಲ ಆಶ್ರಯ ಕಾಲೊನಿಗಳಲ್ಲಿ ಫಲಾನುಭವಿಗಳು ವಿವಿಧ ಯೋಜನೆಗಳಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೆಲವರು ತಾವೇ ಖರ್ಚು ಮಾಡಿ ಮನೆ ಕಟ್ಟಿಸಿಕೊಂಡಿದ್ದಾರೆ. ಆದರೆ, ಎರಡೂವರೆ ದಶಕ ಕಳೆಯುತ್ತ ಬಂದರೂ ಇನ್ನೂ ಆಶ್ರಯ ಕಾಲೊನಿಗಳಲ್ಲಿ ಮೂಲಸೌಲಭ್ಯಗಳ ಸರಿಯಾಗಿ ಸಿಕ್ಕಿಲ್ಲ. ಆದರೆ ಈಚಿನ ವರ್ಷಗಳಲ್ಲಿ ಇಂದಿರಾನಗರದಲ್ಲಿ ಮಾತ್ರ ಸುಧಾರಣೆ ಕಂಡಿದೆ. ಉಳಿದ ಕಾಲೊನಿಗಳು ನರಳುತ್ತಿವೆ.

ಆಶ್ರಯ ಯೋಜನೆ ಫಲಾನುಭವಿಗಳು ವಾಸಿಸುವ ಕಾಲೊನಿಗಳಲ್ಲಿ ಸುಸಜ್ಜಿತ ರಸ್ತೆ, ಚರಂಡಿ, ಬೀದಿದೀಪ ಮತ್ತು ಕುಡಿಯುವ ನೀರನ್ನು ಒದಗಿಸುವುದು ಪುರಸಭೆ ಕರ್ತವ್ಯ. ಮುಕ್ತಿನಗರ ಹೊರತುಪಡಿಸಿ ಉಳಿದ ಆಶ್ರಯ ಕಾಲೊನಿಗಳಲ್ಲಿ ಕುಡಿಯುವ ನೀರು ಮತ್ತು ಬೀದಿ ದೀಪಗಳ ವ್ಯವಸ್ಥೆ ಇದೆ. ಆದರೆ ಸುಸಜ್ಜಿತ ರಸ್ತೆ ಮತ್ತು ಚರಂಡಿ ಸೌಲಭ್ಯ ಕಲ್ಪಿಸಲಾಗಿಲ್ಲ. ಮಳೆಗಾಲ ಬಂದರೆ ಸಾಕು ಮುಕ್ತಿನಗರದ ನಿವಾಸಿಗಳು ಕೈಯಲ್ಲಿ ಜೀವ ಹಿಡಿದುಕೊಂಡು ಕಾಲ ಕಳೆಯುವ ಪರಿಸ್ಥಿತಿ ಉದ್ಭವಿಸುತ್ತದೆ. ಕಾರಣ ಇಲ್ಲಿ ಇನ್ನೂ ಸುಸಜ್ಜಿತ ಮನೆಗಳು ನಿರ್ಮಾಣವಾಗಿಲ್ಲ. ಮುಕ್ತಿನಗರದಲ್ಲಿ ಈ ಸಮಸ್ಯೆಗಳೊಂದಿಗೆ ಕುಡಿಯುವ ನೀರಿನ ಸಮಸ್ಯೆಯೂ ಜನರನ್ನು ಕಾಡುತ್ತಿದೆ. 

ಪ್ರತಿದಿನ ಜಗಳ: ಕರೇಗೌರಿ ಆಶ್ರಯ ಕಾಲೊನಿಯಲ್ಲಿ ಚರಂಡಿ ಇಲ್ಲದ್ದರಿಂದ ಬಳಕೆ ಮಾಡಿದ ಗಲೀಜು ನೀರು ಮತ್ತೊಬ್ಬರ ಮನೆ ಮುಂದೆ ಹರಿಯುತ್ತದೆ. ಮೇಲ್ಭಾಗದ ನಿವಾಸಿಗಳ ಮನೆಗಳಿಂದ ಹರಿದು ಬರುವ ಗಲೀಜು ನೀರು ಕೆಳ ಭಾಗದ ಮನೆಗಳ ಎದುರು ಹರಿಯುತ್ತದೆ. ಹೀಗಾಗಿ ಕಾಲೊನಿಯಲ್ಲಿ ಪ್ರತಿದಿನ ಜಗಳಗಳು ಸಾಮಾನ್ಯವಾಗಿದೆ. ಆದರೆ, ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು, ಸ್ಥಳೀಯ ಆಡಳಿತಗಳು ಈವರೆಗೂ ಮನಸ್ಸು ಮಾಡಿಲ್ಲ.

ಕಚ್ಚಾ ರಸ್ತೆಗಳದ್ದೇ ಕಾರುಬಾರು: ನಾಲ್ಕೂ ಆಶ್ರಯ ಕಾಲೊನಿಗಳು ಸುಸಜ್ಜಿತ ರಸ್ತೆಯೇ ಇಲ್ಲ. ಗಡ್ಡದೇವರಮಠ ನಗರದಲ್ಲಿ ಕೆಲವು ಕಡೆ ಡಾಂಬರು ರಸ್ತೆ ಮಾಡಲಾಗಿದ್ದು, ಇನ್ನೂ ಬಹಳಷ್ಟು ಕಡೆ ರಸ್ತೆ ನಿರ್ಮಿಸುವ ಅವಶ್ಯಕತೆ ಇದೆ. ಆದರೆ ಉಳಿದ ಕಾಲೊನಿಗಳಲ್ಲಿ ಒಂದಿಂಚೂ ಡಾಂಬರ್ ರಸ್ತೆ ಕಾಣುವುದಿಲ್ಲ. ಕೊನೆಯಪಕ್ಷ ಮೆಟ್ಲಿಂಗ್ ಮಾಡಿದ ಕಚ್ಚಾ ರಸ್ತೆ ಕೂಡ ಇಲ್ಲ.

360ಕ್ಕೂ ಹೆಚ್ಚು ಮನೆಗಳು ಇರುವ ರಂಭಾಪುರಿ ನಗರದಲ್ಲಂತೂ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಇಡೀ ಕಾಲೊನಿಯಲ್ಲಿನ ಕಚ್ಚಾ ರಸ್ತೆಗಳು ತೆಗ್ಗು ಗುಂಡಿಗಳಿಂದ ಕೂಡಿದ್ದು ಮಳೆಗಾಲದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಯಾಗುತ್ತದೆ. ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ್ದರಿಂದ ನಿವೇಶನ ಇರುವ ಜಾಗವನ್ನೇ ಇಲ್ಲಿನ ನಿವಾಸಿಗಳು ರಸ್ತೆಯನ್ನಾಗಿ ಮಾಡಿಕೊಂಡಿದ್ದಾರೆ. ಇದೇ ಪರಿಸ್ಥಿತಿ ಕರೇಗೌರಿ ಮತ್ತು ಮುಕ್ತಿನಗರಲ್ಲಿದೆ. ಅಲ್ಲಿಯೂ ಸುಸಜ್ಜಿತ ರಸ್ತೆಗಳು ಇಲ್ಲ. ಅನೇಕರು ದ್ವಿಚಕ್ರ ವಾಹನಗಳ ಮೇಲಿಂದ ಬಿದ್ದು ಕೈ–ಕಾಲು ಮುರಿದುಕೊಂಡು ಈಗಲೂ ನರಳುತ್ತಿದ್ದಾರೆ.

‘ರಸ್ತೆ ಮತ್ತು ಚರಂಡಿ ನಿರ್ಮಿಸಬೇಕು ಎಂದು ನಾವು ಸಾಕಷ್ಟು ಸಲ ಪುರಸಭೆಗೆ ಮನವಿ ಮಾಡಿದ್ದೇವೆ. ಆದರೆ ಇನ್ನೂ ನಮ್ಮ ಬೇಡಿಕೆ ಈಡೇರುತ್ತಿಲ್ಲ’ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

‘ಲಕ್ಷ್ಮೇಶ್ವರ ಪಟ್ಟಣ ಬೆಳೆಯುತ್ತಲೇ ಇದೆ. ಎಲ್ಲ ಕಡೆ ಮೂಲಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಎಲ್ಲ ಆಶ್ರಯ ಕಾಲೊನಿಗಳಲ್ಲಿ ಪಕ್ಕಾ ರಸ್ತೆ ಮತ್ತು ಚರಂಡಿ ನಿರ್ಮಿಸಲು ಸಾಕಷ್ಟು ಅನುದಾನ ಬೇಕಾಗುತ್ತದೆ. ಅನುದಾನ ಬಂದಂತೆ ಎಲ್ಲ ಕಡೆ ಮೂಲಸೌಲಭ್ಯ ಕಲ್ಪಿಸಲಾಗುವುದು’ ಎನ್ನುತ್ತಾರೆ ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ.

ಹಂಚಿಕೆ ಆಗದ ನಿವೇಶನಗಳು

ಆಶ್ರಯ ನಿವೇಶನಕ್ಕಾಗಿ ಕಾಯುತ್ತಿರುವ ಅರ್ಜಿದಾರರಿಗೆ ಹಂಚಿಕೆ ಮಾಡಲೆಂದು ಶಿಗ್ಲಿ ರಸ್ತೆಗೆ ಹೊಂದಿಕೊಂಡಿರುವ 32 ಎಕರೆ ಜಾಗವನ್ನು ಪುರಸಭೆಯಿಂದ ಖರೀದಿಸಿ 7–8 ವರ್ಷಗಳ ಹಿಂದೆಯೇ ನಿವೇಶನ ರಚಿಸಲಾಗಿದೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ಹಂಚಿಕೆ ಸಾಧ್ಯವಾಗಿಲ್ಲ. ನಿವೇಶನ ಹಂಚಿಕೆ ಮಾಡುವಂತೆ ಅರ್ಜಿದಾರರು ಒತ್ತಾಯಿಸಿದರೆ ಹೋರಾಟಗಾರರು ಅಲ್ಲಿ ಮೂಲಸೌಲಭ್ಯ ಕಲ್ಪಿಸಿದ ನಂತರ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಕಾರಣಕ್ಕಾಗಿ ನಿವೇಶನ ಹಂಚಿಕೆ ಆಗಿಲ್ಲ. ಅದೇರೀತಿ ಕೆಂಪಿಗೇರಿ ಕೆರೆ ಮೂಲಕ ಹಾಯ್ದು ಹೋಗುವ ತಮ್ಮಾ–ತಿಮ್ಮಿ ರಸ್ತೆಯ ಪಕ್ಕದಲ್ಲಿ ಈಗಾಗಲೇ ಹದಿನಾಲ್ಕು ಎಕರೆ ಜಾಗೆಯಲ್ಲಿ ನಿವೇಶನ ರಚಿಸಿ ಕೆಲವರಿಗೆ ಪಟ್ಟಾಬುಕ್ ವಿತರಿಸಲಾಗಿದೆ. ಈ ಕಾಲೊನಿಯಂತೂ ಊರಿಗೆ ಕಾಣಿಸುವುದೇ ಇಲ್ಲ. ಇಲ್ಲಿಯೂ ರಸ್ತೆ ಚರಂಡಿ ಬೀದಿದೀಪ ಕುಡಿಯುವ ನೀರನ್ನು ಒದಗಿಸಬೇಕಾಗಿದೆ. ಆದರೆ ಈ ಎರಡೂ ಆಶ್ರಯ ಕಾಲೊನಿಗಳು ಊರು ಬಿಟ್ಟು ಅಂದಾಜು 3 ಕಿ.ಮೀ. ದೂರದಲ್ಲಿದ್ದು ಅಲ್ಲಿ ಮೂಲಸೌಲಭ್ಯ ಕಲ್ಪಿಸುವುದು ಪುರಸಭೆಗೆ ಸವಾಲಿನ ಕೆಲಸ ಆಗಲಿದೆ.

ಅಧಿಕಾರಿಗಳು ಏನಂತಾರೆ?

ಮನೆ ಇಲ್ಲದ ಬಡವರಿಗೆ ಆಶ್ರಯ ನಿವೇಶನ ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊಳಚೆ ಪ್ರದೇಶದಲ್ಲಿ ಮನೆಗಳನ್ನು ಕಟ್ಟಸಿಕೊಳ್ಳಲು ಅವಕಾಶ ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು – ಡಾ. ಚಂದ್ರು ಲಮಾಣಿ ಶಾಸಕರು ಮತ್ತು ಆಶ್ರಯ ಸಮಿತಿ ಅಧ್ಯಕ್ಷ

ರಂಭಾಪುರಿ ಆಶ್ರಯ ಕಾಲೊನಿ ವಿಶಾಲವಾಗಿದ್ದು ತೆಗ್ಗು ಪ್ರದೇಶದಲ್ಲಿ ಇರುವುದರಿಂದ ಸಮಸ್ಯೆಗಳಿವೆ. ಹಂತ ಹಂತವಾಗಿ ಕಾಲೊನಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗುವುದು. ಈಗಾಗಲೇ ಬೀದಿದೀಪ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ – ಪ್ರವೀಣ ಬಾಳಿಕಾಯಿ 16ನೇ ವಾರ್ಡ್ ಪುರಸಭೆ ಸದಸ್ಯ

ಆಶ್ರಯ ಯೋಜನೆ ನಿವೇಶನಗಳ ಹಂಚಿಕೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಿ ಆದಷ್ಟು ಬೇಗ ಅರ್ಜಿದಾರರಿಗೆ ನಿವೇಶನ ವ್ಯವಸ್ಥೆ ಮಾಡುತ್ತೇವೆ – ಮಹೇಶ ಹಡಪದ ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿ

ಜನರು ಏನಂತಾರೆ?

ನಾವು ಹತ್ತಾರು ವರ್ಷಗಳಿಂದ ಕರೇಗೌರಿ ಆಶ್ರಯ ಮನೆಯಲ್ಲಿ ವಾಸಿಸುತ್ತಿದ್ದೇವೆ. ಆದರೆ ಅಲ್ಲಿ ವ್ಯವಸ್ಥಿತವಾದ ರಸ್ತೆ ಮತ್ತು ಗಟಾರ ಇಲ್ಲ. ಬೈಕ್ ಮೇಲೆ ಇಲ್ಲಿನ ರಸ್ತೆಗಳಲ್ಲಿ ಓಡಾಡುವುದೇ ಸವಾಲಾಗಿದೆ. ರಸ್ತೆ ಗಟಾರ ಮಾಡಿದರೆ ನಮ್ಗ ಅನುಕೂಲ ಅಕ್ಕೈತ್ರಿ - ನಾಗಪ್ಪ ಮುಳಗುಂದ ಕರೇಗೌರಿ ಆಶ್ರಯ ಕಾಲೊನಿ ನಿವಾಸಿ

‘ನಮ್ಮ ಮನಿ ಇರೋ ರಂಭಾಪುರಿ ನಗರದಾಗ ಡಾಂಬರ್ ರಸ್ತೆನ ಇಲ್ರೀ. ಹಿಂಗಾಗಿ ನಮಗ ಭಾಳ ತ್ರಾಸ್ ಆಗೇತಿ ಮಳಿಗಾಲದಾಗ ಮನಿ ಮುಂದ ನೀರ ನಿಲ್ಲತೈತಿ. ಆವಾಗ ಇಲ್ಲಿ ಅಡ್ಡಾಡಕ ತೊಂದ್ರಿ ಅಕ್ಕೈತ್ರಿ ಪರಶುರಾಮ ಅರಳಿಕಟ್ಟಿ ಸ್ಥಳೀಯ ನಿವಾಸಿ ಪೈಪಿನಾಗ ನೀರ ಹೋಗೂದಿಲ್ರೀ ರಂಭಾಪುರಿ ನಗರದಾಗ ಅವೈಜ್ಞಾನಿಕವಾಗಿ ರಸ್ತೆಗೆ ಅಡ್ಡಲಾಗಿ ಪೈಪ್ ಹಾಕ್ಯಾರ‍್ರಿ. ಆ ಪೈಪಿನಾಗ ನೀರ ಹೋಗೂದಿಲ್ರೀ- ಆರ್.ಎಂ. ಅಣ್ಣಿಗೇರಿ ರಂಭಾಪುರಿ ನಗರ ನಿವಾಸಿ

ಗಡ್ಡದೇವರಮಠ ನಗರದಾಗ ಗಟಾರ ಸ್ವಚ್ಛ ಮಾಡಿಲ್ಲ. ಹಿಂಗಾಗಿ ಇಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗೇತಿ. ಮತ್ತ ಬಾಳಿಕಾಯಿ ಅವರ ಜಿನ್ ಹತ್ತಿರ ರಸ್ತೆ ಸಮಸ್ಯೆ ಐತಿ ಅದನ್ನು ಲಗೂನ ಬಗೆ ಹರಿಸಬೇಕು - ಸುರೇಶ ತೆಂಬದಮನಿ ಗಡ್ಡದೇವರಮಠ ನಗರದ ನಿವಾಸಿ

ಲಕ್ಷ್ಮೇಶ್ವರದ ರಂಭಾಪುರಿ ಆಶ್ರಯ ಕಾಲೊನಿಯಲ್ಲಿನ ಚರಂಡಿ ಸ್ಥಿತಿ
ಲಕ್ಷ್ಮೇಶ್ವರದ ರಂಭಾಪುರಿ ಆಶ್ರಯ ಕಾಲೊನಿಯಲ್ಲಿನ ಚರಂಡಿ ಸ್ಥಿತಿ
ಲಕ್ಷ್ಮೇಶ್ವರದ ಕರೇಗೌರಿ ಆಶ್ರಯ ಕಾಲೊನಿಯಲ್ಲಿನ ರಸ್ತೆ
ಲಕ್ಷ್ಮೇಶ್ವರದ ಕರೇಗೌರಿ ಆಶ್ರಯ ಕಾಲೊನಿಯಲ್ಲಿನ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT