ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ | ಇಸ್ರೇಲ್ ಮಾದರಿ ಕೃಷಿ: ಲಾಭದ ನಿರೀಕ್ಷೆಯಲ್ಲಿ ಕಲ್ಲಂಗಡಿ ಬೆಳೆಗಾರ

Published 10 ನವೆಂಬರ್ 2023, 5:50 IST
Last Updated 10 ನವೆಂಬರ್ 2023, 5:50 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆಗಳು ಕೈಕೊಟ್ಟಿದ್ದರಿಂದ ಇಡೀ ರೈತ ಸಮುದಾಯ ಸಂಕಷ್ಟದಲ್ಲಿದೆ. ಸಾಲ ಮಾಡಿ ಬಿತ್ತಿದ ಬೀಜ ಹುಟ್ಟದೆ ಹಾಕಿದ ಬಂಡವಾಳವೂ ರೈತನಿಗೆ ಬಾರದ ಪರಿಸ್ಥಿತಿ ಉದ್ಭವಿಸಿದೆ. ಆದರೆ ಇಷ್ಟೆಲ್ಲ ತೊಂದರೆ ಮಧ್ಯೆಯೂ ಲಕ್ಷ್ಮೇಶ್ವರದ ರೈತ ಬಸಣ್ಣ ಬೆಂಗಳೂರ ಕಲ್ಲಂಗಡಿ ಹಣ್ಣು ಬೆಳೆಯುವ ಸಾಹಸಕ್ಕೆ ಮುಂದಾಗಿ, ಅದರಲ್ಲಿ ಯಶಸ್ಸು ಕಂಡಿದ್ದಾರೆ.

ಮೂರು ಎಕರೆಯಲ್ಲಿನ ಕಲ್ಲಂಗಡಿ ಸೊಗಸಾಗಿ ಬೆಳೆದಿದ್ದು, ಈಗಾಗಲೇ ಕಾಯಿ ಬಿಟ್ಟಿವೆ. ಇನ್ನೊಂದು ವಾರದಲ್ಲಿ ಕಟಾವು ಆರಂಭಗೊಳ್ಳಲಿದ್ದು, ಅಧಿಕ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಕಲ್ಲಂಗಡಿ ಸಸಿ ನಾಟಿ ಮಾಡುವ ಮೊದಲು ಅವರು ಭೂಮಿಯನ್ನು ಹರಗಿ ಏರು ಮಡಿ ಸಿದ್ಧಪಡಿಸಿಕೊಂಡಿದ್ದರು. ನಂತರ ಪ್ಲಾಸ್ಟಿಕ್ ಮಲ್ಚಿಂಗ್ ಹೊದಿಕೆ ಮಾಡಿದ್ದಾರೆ. ಇದಕ್ಕೂ ಪೂರ್ವದಲ್ಲಿ ಡ್ರಿಪ್ ಪೈಪ್‍ಲೈನ್ ಅಳವಡಿಸಿಕೊಂಡಿದ್ದರು.

ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕು ಕಲ್ಲೊಳ್ಳಿ ಗ್ರಾಮದಿಂದ ಪ್ರತಿ ಸಸಿಗೆ ಎರಡೂವರೆ ರೂಪಾಯಿ ದರದಲ್ಲಿ ಒಟ್ಟು ಮೂವತ್ತು ಸಾವಿರ ಸಸಿಗಳನ್ನು ₹66 ಸಾವಿರ ಕೊಟ್ಟು ಖರೀದಿಸಿ ತಂದಿದ್ದರು. ಸಸಿಯಿಂದ ಸಸಿಗೆ ಎರಡು ಅಡಿ ಅಂತರದಲ್ಲಿ ನಾಟಿ ಮಾಡಿಸಿದ್ದಾರೆ. ನಾಟಿ ಮಾಡುವ ಸಮಯದಲ್ಲಿ ಅಲ್ಪ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಕೊಟ್ಟಿದ್ದರು. ಸೂಕ್ತ ಸಮಯದಲ್ಲಿ ನೀರುಣಿಸಿದ್ದರಿಂದ ಸಸಿಗಳು ಇಪ್ಪತ್ತು ದಿನಗಳಲ್ಲಿ ಸೊಗಸಾಗಿ ಬೆಳೆದು ಕಾಯಿ ಬಿಡಲು ಆರಂಭಿಸಿದವು. ಸದ್ಯ ಮೂವತ್ತಾರು ದಿನಗಳ ಬಳ್ಳಿಯಲ್ಲಿ ದೊಡ್ಡ ದೊಡ್ಡ ಕಲ್ಲಂಗಡಿ ಕಾಯಿಗಳ ಬಿಟ್ಟಿದ್ದು, ಇನ್ನು ಹತ್ತು ದಿನಗಳಲ್ಲಿ ಕೊಯ್ಲಿಗೆ ಬರಲಿದೆ.

ಖರ್ಚು ವೆಚ್ಚ: ಭೂಮಿ ಹದ ಮಾಡುವುದು, ಪ್ಲಾಸ್ಟಿಕ್ ಹೊದಿಕೆ, ಡ್ರಿಪ್ ಲೈನ್, ಸಸಿ ಖರೀದಿ, ನಾಟಿ ಸೇರಿದಂತೆ ಈವರೆಗೆ ₹4 ಲಕ್ಷ ಹಣವನ್ನು ಬಸಣ್ಣ ಖರ್ಚು ಮಾಡಿದ್ದಾರೆ. ಕಾಯಿ ಬಿಡಿಸುವಾಗ ಮತ್ತಷ್ಟು ಖರ್ಚು ಬರಲಿದೆ.

ಕಲ್ಲಂಗಡಿ ಅಲ್ಪಾವಧಿ ಬೆಳೆಯಾಗಿದ್ದು ಕೇವಲ 55-60 ದಿನಗಳಲ್ಲಿ ಫಸಲು ರೈತನ ಕೈ ಸೇರುತ್ತದೆ. ಎಕರೆಗೆ 100 ಟನ್ ಇಳುವರಿ ಬರುವ ನಿರೀಕ್ಷೆಯನ್ನು ರೈತ ಇಟ್ಟುಕೊಂಡಿದ್ದಾರೆ. ಉತ್ತಮ ದರ ಸಿಕ್ಕರೆ ಸಾಕಷ್ಟು ಲಾಭ ರೈತನ ಜೇಬು ಸೇರಲಿದೆ.

‘ಇದೇ ಮೊದಲ ಬಾರಿಗೆ ಕಲ್ಲಂಗಡಿ ಬೆಳೆಯುತ್ತಿದ್ದೇವೆ. ಈಗಾಗಲೇ ಸಾಕಷ್ಟು ಖರ್ಚು ಮಾಡಿದ್ದೇನೆ. ಉತ್ತಮ ಬೆಲೆ ಸಿಕ್ಕರೆ ಲಾಭ ಆಗಲಿದೆ’ ಎಂದು ರೈತ ಬಸಣ್ಣ ಹೇಳಿದರು.

ಬೆಂಗಳೂರ ಅವರ ತೋಟದಲ್ಲಿ ಚೆನ್ನಾಗಿ ಬೆಳೆದಿರುವ ಕಲ್ಲಂಗಡಿ ಹಣ್ಣು
ಬೆಂಗಳೂರ ಅವರ ತೋಟದಲ್ಲಿ ಚೆನ್ನಾಗಿ ಬೆಳೆದಿರುವ ಕಲ್ಲಂಗಡಿ ಹಣ್ಣು
ರೈತ ಬಸಣ್ಣ ಬೆಂಗಳೂರ ಅವರ ಕಲ್ಲಂಗಡಿ ತೋಟ
ರೈತ ಬಸಣ್ಣ ಬೆಂಗಳೂರ ಅವರ ಕಲ್ಲಂಗಡಿ ತೋಟ
ಲಕ್ಷ್ಮೇಶ್ವರದ ರೈತ ಬಸಣ್ಣ ಬೆಂಗಳೂರ ಅವರು ಮೂರು ಎಕರೆಯಲ್ಲಿ ಇಸ್ರೇಲ್ ಮಾದರಿಯಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಅಧಿಕಾರಿಗಳ ಸಲಹೆ ಸೂಚನೆಗಳನ್ನು ಪಾಲಿಸಿದ್ದರಿಂದ ಇವರ ತೋಟದ ಬೆಳೆ ಚೆನ್ನಾಗಿ ಬೆಳೆದಿದೆ
ಸುರೇಶ ಕುಂಬಾರ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT