ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ | ಪ್ರಾಣಿ-ಪಕ್ಷಿಗಳಿಗೆ ನೀರಿನ ವ್ಯವಸ್ಥೆ: ರೈತನ ಮಾನವೀಯತೆ

Published 3 ಏಪ್ರಿಲ್ 2024, 4:54 IST
Last Updated 3 ಏಪ್ರಿಲ್ 2024, 4:54 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಬರಗಾಲದ ಪರಿಣಾಮವಾಗಿ ಕೆರೆ, ಹಳ್ಳ, ಕೊಳ್ಳಗಳು, ಚೆಕ್ ಡ್ಯಾಂಗಳು ನೀರಿಲ್ಲದೇ ಒಣಗಿವೆ. ಇದರಿಂದಾಗಿ ಜಾನುವಾರು ಮತ್ತು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದನ್ನು ಅರಿತ ರೈತರೊಬ್ಬರು ತಮ್ಮ ಸ್ವಂತ ಕೊಳವೆ ಬಾವಿಯ ನೀರನ್ನು ಒಂದು ದೊಡ್ಡ ಗುಂಡಿಯಲ್ಲಿ ಸಂಗ್ರಹಿಸಿ ದನಕರುಗಳಿಗೆ ಕುಡಿಯಲು ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತಾಲ್ಲೂಕಿನ ಸೂರಣಗಿ, ಬಾಲೆಹೊಸೂರು, ದೊಡ್ಡೂರು ಭಾಗದಲ್ಲಿ ಎಲ್ಲ ಕೆರೆಗಳು ಖಾಲಿ ಆಗಿ ಕುರಿ, ಆಡು, ದನಕರುಗಳಿಗೆ ಕುಡಿಯಲು ನೀರು ಸಿಗದ ಪರಿಸ್ಥಿತಿ ತಲೆದೋರಿದೆ. ಅದರಂತೆ ಪಕ್ಷಿಗಳಿಗೂ ಸಹ ನೀರಿನ ಕೊರತೆ ಕಾಡುತ್ತಿದೆ. ಸೂರಣಗಿ ಗ್ರಾಮದ ಹನಮಂತಪ್ಪ ಫಕ್ಕೀರಪ್ಪ ಕಿಳ್ಳೆಕ್ಯಾತರ ಎಂಬ ರೈತ ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ. ಇವರ ಹೊಲದಲ್ಲಿರುವ ಕೊಳವೆ ಬಾವಿ ನೀರು ಕಡಿಮೆ ಇದ್ದರೂ ಸಹ ಬಂದಷ್ಟು ನೀರನ್ನು ಪ್ರಾಣಿಗಳಿಗಾಗಿ ಗುಂಡಿಯಲ್ಲಿ ಶೇಖರಿಸುತ್ತಿದ್ದಾರೆ.

ಸೂರಣಗಿ ಗ್ರಾಮದಿಂದ ಬಾಲೆಹೊಸೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಹನಮಂತಪ್ಪ ಅವರ ಹೊಲ ಇದ್ದು ಈ ಭಾಗದಲ್ಲಿನ ಸಣ್ಣ ಸಣ್ಣ ಕೆರೆಗಳು, ಗುಂಡಿಗಳು ಎಲ್ಲವೂ ಬರಿದಾಗಿವೆ. ಸೂರಣಗಿ ಮತ್ತು ಬಾಲೆಹೊಸೂರು ಗ್ರಾಮಗಳಲ್ಲಿ ಕೃಷಿಯೊಂದಿಗೆ ರೈತರು ಹೈನೋದ್ಯಮವನ್ನೂ ನಡೆಸುತ್ತಿದ್ದಾರೆ. ಈ ಕಾರಣಕ್ಕಾಗಿ ಇಲ್ಲಿ ಜಾನುವಾರು ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲದೆ ಕುರಿ ಸಾಕಣೆ ಜೋರಾಗಿದೆ.
ರೈತರು ಮತ್ತು ಕುರಿಗಾರರು ಜಾನುವಾರು ಹಾಗೂ ಕುರಿಗಳ ಹೊಟ್ಟೆ ತುಂಬಿಸಲು ಆಹಾರ ಮತ್ತು ನೀರಿಗಾಗಿ ಕಾಡುಮೇಡು ಅಲೆಯುತ್ತಿದ್ದಾರೆ. ಸದ್ಯ ರೈತ ಹನಮಂತಪ್ಪ ನೀರಿನ ವ್ಯವಸ್ಥೆ ಮಾಡಿರುವುದು ಕುರಿಗಾರರಿಗೆ ಬಹಳಷ್ಟು ಅನುಕೂಲವಾಗಿದೆ.

‘ಮಳಿ ಇಲ್ಲದ ನಮ್ಮ ಭಾಗದಾಗ ದನಕರಕ್ಕ ಕುಡ್ಯಾಕ ನೀರಿಲ್ರೀ. ಹಿಂಗಾಗಿ ನಮ್ಮ ಬೋರ್‍ನಿಂದ ಗುಂಡಿಗೆ ನೀರ ಬಿಡಾಕತ್ತೇನ್ರೀ’ ಎಂದು ಹನಮಂತಪ್ಪ ಹೇಳಿದರು.

ಸೂರಣಗಿ ದಾರ್ಯಾಗ ಕುರಿಗೆ ಕುಡ್ಯಾಕ ನೀರ ಇಲ್ರೀ. ಈಗ ಹನಮಂತಪ್ಪ ಅವರು ಗುಂಡ್ಯಾಗ ನೀರ ಬಿಡಾಕತ್ತಿದ್ದು ಭಾಲ ಚಲೋ ಆಗೇತ್ರಿ

–ಮೈಲಾರಪ್ಪ ಕುರಿಗಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT