ಮಕ್ಕಳ ಪಾದಪೂಜೆ ಮೂಲಕ ಅಮ್ಮನ ಹೋಳಿಗೆ..!

7
ಬಂಜಾರ ಸಮುದಾಯದ ವಿಶಿಷ್ಟ ಆಚರಣೆ; ಮಳೆ, ಬೆಳೆ, ಮಕ್ಕಳ ಆರೋಗ್ಯಕ್ಕಾಗಿ ಪ್ರಾರ್ಥನೆ

ಮಕ್ಕಳ ಪಾದಪೂಜೆ ಮೂಲಕ ಅಮ್ಮನ ಹೋಳಿಗೆ..!

Published:
Updated:
Deccan Herald

ನರೇಗಲ್: ಬಂಜಾರ ಸಮುದಾಯವು ಶ್ರೀಮಂತ ಕಲೆ, ಸಂಸ್ಕೃತಿಯ ಸಂಗಮ. ಪ್ರತಿಯೊಂದು ಆಚರಣೆಯೂ ಭಿನ್ನ. ಒಂದೊಂದು ಆಚರಣೆಗೆ ಒಂದೊಂದು ಹಿನ್ನೆಲೆ, ನಂಬಿಕೆ. ಲಂಬಾಣಿಗರು ವಾಸಿಸುವ ಪ್ರತಿ ಮನೆಯಲ್ಲಿ ಮಕ್ಕಳ ಪಾದಪೂಜೆ ಮೂಲಕ ಅಮ್ಮನ ಹೋಳಿಗೆ ಎಂಬ ಹಬ್ಬ ಆಚರಿಸುತ್ತಾರೆ. ಮಕ್ಕಳಿಗೆ ಯಾವುದೇ ರೋಗಗಳು ಬಾರದಿರಲಿ ಎಂದು ಪ್ರಾರ್ಥಿಸಿ ಈ ಆಚರಣೆ ಮಾಡಲಾಗುತ್ತದೆ.

ಆಷಾಢ ಮಾಸದ ಆರಂಭದಿಂದ ಶ್ರಾವಣ ಮಾಸದ ಮುಕ್ತಾಯದ ಒಳಗೆ ಮಂಗಳವಾರ ಅಥವಾ ಶುಕ್ರವಾರ ಬಂಜಾರ ಸಮುದಾಯದ ಮನೆಗಳು ಹೋಳಿಗೆಯಿಂದ ಭರ್ತಿಯಾಗಿರುತ್ತವೆ. ಹಲವು ಶತಮಾನಗಳಿಂದ ಆಚರಣೆಯಲ್ಲಿರುವ ಈ ಮಕ್ಕಳ ಪಾದ ಪೂಜೆ ಹಬ್ಬ ಇದಕ್ಕೆ ಕಾರಣ.

ಹಿಂದೆಲ್ಲ ಪ್ಲೇಗ್‌, ಕಾಲರ, ಮಲೇರಿಯಾ ಮುಂತಾದ ಮಹಾಮಾರಿ ಕಾಣಿಸಿಕೊಂಡು ಊರಿಗೆ ಊರೇ ಸ್ಮಶಾನವಾಗುತ್ತಿತ್ತು. ಹಾಗಾಗಿ, ಇಂತಹ ರೋಗಗಳು ಮತ್ತೆ ಮಕ್ಕಳಿಗೆ ಬರಬಾರದು ಎಂದು ಹುಟ್ಟಿಕೊಂಡಿದ್ದೇ ಅಮ್ಮನ ಹೋಳಿಗೆ ಹಬ್ಬ.

ತಾಂಡಾಗಳಲ್ಲಿ ನಾಯಕ ನಿರ್ಧರಿಸುವ ದಿನದಂದು ಎಲ್ಲರೂ ಇದನ್ನು ಆಚರಿಸುತ್ತಾರೆ. ಸಂಪ್ರದಾಯದಂತೆ ಗ್ರಾಮದೇವಿಗೆ, ಗ್ರಾಮದ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಹಳ್ಳದಿಂದ ಅಥವಾ ಹೊಲದಿಂದ ಆಯ್ದು ತಂದ ಕಲ್ಲಿಗೆ ಮಡಿ ಹುಡಿಯಿಂದ ಸುಣ್ಣ ಬಳಿದು, ಕುಂಕುಮ, ವಿಭೂತಿಯಿಂದ ಹಚ್ಚಿ ತಾತ್ಕಾಲಿಕವಾಗಿ ಮನೆಯ ಬಾಗಿಲಿನಲ್ಲಿ ಸ್ಥಾಪಿಸಿ ಹೋಳಿಗಮ್ಮಗೆ(ದೇವಿಗೆ) ಹೋಳಿಗೆಅರ್ಪಿಸಿ ಪ್ರಾರ್ಥಿಸುತ್ತಾರೆ. ಓಣಿಯ ಮಕ್ಕಳನ್ನು ಕರೆದು ಅವರನ್ನು ದೇವಿಯ ಮಕ್ಕಳು ಎಂದು ಭಾವಿಸುತ್ತಾರೆ. ಬಾಗಿಲ ಎದರಿಗೆ ಎರಡು ಕೈ, ಕಾಲು ಮುಂದೆ ಮಾಡಿ ಕುಳಿತುಕೊಳ್ಳಲು ಸೂಚಿಸುತ್ತಾರೆ. ಮಕ್ಕಳ ಹಣೆ, ಅಂಗೈ, ಪಾದಗಳನ್ನು ನೀರಿನಿಂದ ತೊಳೆದು ಅವರಿಗೂ ವಿಭೂತಿ, ಕುಂಕುಮ ಹಚ್ಚುತ್ತಾರೆ. ನಂತರ ಪೂಜೆ ಮಾಡಿ ಮನೆಯಲ್ಲಿನ ಪ್ರತಿಯೊಬ್ಬರೂ ಮಕ್ಕಳ ಪಾದಗಳಿಗೆ ಹಣೆ ಹಚ್ಚಿ ಶ್ರದ್ಧಾ ಭಕ್ತಿಯಿಂದ ನಮಸ್ಕರಿಸಿ ನೈವೇದ್ಯ ಅರ್ಪಿಸುತ್ತಾರೆ.

ಪೂಜೆಯ ಬಳಿಕ ಎಲ್ಲ ಮಕ್ಕಳು ವೃತ್ತಾಕಾರದಲ್ಲಿ ಕುಳಿತು ಒಂದೇ ಎಲೆಯಲ್ಲಿ ಪ್ರಸಾದ ಸೇವನೆ ಮಾಡುತ್ತಾರೆ. ನಂತರ ಮಕ್ಕಳ ಕೈ, ಪಾದ ತೊಳೆದು ನಮಸ್ಕರಿಸಿ ಎಲೆಯನ್ನು ಎತ್ತಿಕೊಳ್ಳುತ್ತಾರೆ. ಮಕ್ಕಳ ಪಾದಪೂಜೆ ಆಗುವವರೆಗೂ ಮನೆಯಲ್ಲಿನ ಇತರೆ ಸದಸ್ಯರು ಊಟ ಮಾಡವುದಿಲ್ಲ. ಕೆಲವೆಡೆ ಗ್ರಾಮದ,ಸುತ್ತಮುತ್ತಲಿನ ನಿವಾಸಿಗಳ ಮಕ್ಕಳನ್ನೂ ಯಾವುದೇ ಜಾತಿ, ಬೇಧವಿಲ್ಲದೆ ಆಹ್ವಾನಿಸಿ ಪಾದ ಪೂಜೆ ಮಾಡುತ್ತಾರೆ.

‘ಹಿರಿಯರು ತಲೆಮಾರುಗಳಿಂದ ಆಚರಿಸಿಕೊಂಡು ಬಂದ ಈ ಆಚರಣೆಯನ್ನು ನಾವೂ ಮುಂದುವರಿಸುತ್ತಿದ್ದೇವೆ’ ಎಂದು ತಾಂಡಾದ ವೀರೇಶ ರಾಥೋಡ್ ಹೇಳಿದರು.

ಮುದ್ದು ಮಕ್ಕಳ ಆರೋಗ್ಯ ಚೆನ್ನಾಗಿರಲಿ. ಅವರ ಭವಿಷ್ಯ ಉಜ್ವಲವಾಗಲಿ. ಉತ್ತಮ ಮಳೆ, ಬೆಳೆ ಬರಲಿ ಎಂದು ಪ್ರಾರ್ಥಿಸಿ ದೇವಿಗೆ ಹೋಳಿಗೆಯ ವಿಶೇಷ ಪೂಜೆ ಸಲ್ಲಿಸುತ್ತೇವೆ.
ಶರಣಮ್ಮ ರಾಥೋಡ್, ನರೇಗಲ್ ನಿವಾಸಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !