ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ | ಮುಂಗಾರು ಬಿತ್ತನೆ: ಶೇ 95 ಗುರಿ ಸಾಧನೆ

ಗದಗ ಜಿಲ್ಲೆಯಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವ ಮಳೆ; ಹದ ಮಳೆಗೆ ಕಾದಿರುವ ರೈತರು
ಕೆ.ಎಂ.ಸತೀಶ್‌ ಬೆಳ್ಳಕ್ಕಿ
Published 9 ಜುಲೈ 2024, 6:44 IST
Last Updated 9 ಜುಲೈ 2024, 6:44 IST
ಅಕ್ಷರ ಗಾತ್ರ

ಗದಗ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ ಕಣ್ಣಾಮುಚ್ಚಾಲೆ ಆಡುತ್ತಿದ್ದರೂ ಕೃಷಿ ಚಟುವಟಿಕೆಗಳಿಗೆ ಬೇಕಿರುವಷ್ಟು ಮಳೆ ಆಗಿದೆ. ಈಗ ಬಿತ್ತನೆ ಆಗಿರುವ ಬೆಳೆಗಳಿಗೆ ಮಳೆ ಕೊರತೆ ಇಲ್ಲವಾದರೂ ಒಂದು ಹದ ಮಳೆಯಂತೂ ಆಗಬೇಕಿದೆ.

ಗದಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.02 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಇದ್ದು, ಈವರೆಗೆ 2.88 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇ 95ರಷ್ಟು ಗುರಿ ಸಾಧನೆಯಾಗಿದೆ. ಈ ಪೈಕಿ ಹೆಸರು ಬೆಳೆ ಅತಿ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಸೂರ್ಯಕಾಂತಿ ಬೆಳೆ ಜುಲೈ ಕೊನೆವರೆಗೂ ಬಿತ್ತನೆ ಆಗಲಿದೆ.

‘ಗದಗ ಜಿಲ್ಲೆಯಲ್ಲಿ ಈವರೆಗೆ ವಾಡಿಕೆಗಿಂದ ಶೇ 8ರಷ್ಟು ಹೆಚ್ಚು ಮಳೆಯಾಗಿದೆ. ಬೀಜ, ಗೊಬ್ಬರಕ್ಕೆ ಕೊರತೆ ಇಲ್ಲ. ಸಾಕಷ್ಟು ದಾಸ್ತಾನು ಇದೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 32 ಸಾವಿರ ರೈತರು ಬೆಳೆವಿಮೆ ಮಾಡಿಸಿದ್ದಾರೆ. ನೋಂದಣಿ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದ್ದು, ಬಿತ್ತನೆ ಮಾಡಿರುವ ರೈತರೆಲ್ಲರೂ ಬೆಳೆ ವಿಮೆ ಮಾಡಿಸಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಿ.ಎಚ್‌.ತಾರಾಮಣಿ ಮನವಿ ಮಾಡಿದ್ದಾರೆ.

‘ಗದಗ ಜಿಲ್ಲೆಯಲ್ಲಿ ದಾಸ್ತಾನು ಇದ್ದ 6,440 ಕ್ವಿಂಟಲ್‌ ಪೈಕಿ 5,035 ಕ್ವಿಂಟಲ್‌ ಬೀಜ ವಿತರಣೆ ಮಾಡಲಾಗಿದೆ. 34,969 ಮೆಟ್ರಿಕ್‌ ಟನ್‌ ರಸಗೊಬ್ಬರ ಮಾರಾಟವಾಗಿದ್ದು, 21,800 ಮೆಟ್ರಿಕ್‌ ಟನ್‌ ದಾಸ್ತಾನು ಇದೆ’ ಎಂದು ಅವರು ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿನ ಕೆಲವು ರೈತರು ಮುಂಗಾರು ಪೂರ್ವದಲ್ಲಿ ಆದ ಮಳೆಯನ್ನೇ ನಂಬಿ ಹೆಸರು ಬಿತ್ತನೆ ಮಾಡಿದ್ದರು. ಈ ಬಾರಿ ಮುಂಗಾರು ಮಳೆ ಕೂಡ ಚೆನ್ನಾಗಿ ಆಗಿದ್ದರಿಂದ ಹೆಸರು ಬೆಳೆ ಹೊಲದಲ್ಲಿ ನಳನಳಿಸುತ್ತಿದೆ. ರೋಗಬಾಧೆಯಿಂದ ತಪ್ಪಿಸಿಕೊಂಡು, ಒಳ್ಳೆ ಇಳುವರಿ ಸಿಕ್ಕರೆ ಉತ್ತಮ ಲಾಭ ಸಿಗುವ ನಿರೀಕ್ಷೆ ಇದೆ. ಮಳೆ ಕೊರತೆ ಇರುವ ಕಡೆಗಳಲ್ಲಿ ಬೆಳೆ ಅಷ್ಟು ಚೆನ್ನಾಗಿ ಬಂದಿಲ್ಲ’ ಎನ್ನುತ್ತಾರೆ ಅಬ್ಬಿಗೇರಿ ರೈತರು.

ಗದಗ ಜಿಲ್ಲೆಯಲ್ಲಿ ಮುಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯದಿದ್ದರೂ ಬೆಳೆಗಳಿಗೆ ಹೆಚ್ಚಿನ ತೊಂದರೆ ಆಗಿಲ್ಲ. ಕೆಲವು ದಿನಗಳಿಂದ ಆಗಾಗ ಜಿಟಿಜಿಟಿ ಮಳೆ ಆಗುತ್ತಿದೆ. ಕಳೆ ಕೀಳಿಸುವುದು, ಔಷಧ ಸಿಂಪಡಣೆ, ಎಡೆಕುಂಟೆ ಹೊಡೆಯುವುದು, ಗೊಬ್ಬರ ಹಾಕುವುದು ಸೇರಿದಂತೆ ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಕೆಲವು ಕಡೆಗಳಲ್ಲಿ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ. ರೋಗ ನಿಯಂತ್ರಣಕ್ಕೆ ಪರಿಹಾರ ಸೂಚಿಸಿದ್ದು, ರೈತರು ಅವುಗಳನ್ನು ಅನುಸರಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT