ಸೋಮವಾರ, ಆಗಸ್ಟ್ 15, 2022
23 °C
ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌

ಕಾರ್ಯಾಲಯ ಕಾರ್ಯಕರ್ತರ ಜನಾಲಯ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಅಧಿಕಾರ ಬಂದ ನಂತರ ಗಾಂಧಿ ವಿಚಾರಧಾರೆಗಳನ್ನು ಮರೆತಿದ್ದು, ಅಧಿಕಾರ ಸಿಕ್ಕಾಗ ಭ್ರಷ್ಟಾಚಾರ ಮಾಡಿದ್ದು, ಅಧಿಕಾರ ಬಿಟ್ಟುಹೋದಾಗ ದೇಶಕ್ಕೆ ಬೆಂಕಿ ಇಡುವ ಕೆಲಸ ಮಾಡಿದ್ದರಿಂದಾಗಿ ಜನರು ಕಾಂಗ್ರೆಸ್‌ ‘ಕೈ’ ಬಿಟ್ಟರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ನಗರದ ಪರಿಸರ ಲೇಔಟ್‌ನಲ್ಲಿ ಗುರುವಾರ ಬಿಜೆಪಿ ಕಾರ್ಯಾಲಯದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

‘ಗಾಂಧಿ ಚಿಂತನೆ ಹಾಗೂ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ದುಡಿದ ಪಕ್ಷ ಎಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಆಡಳಿತ ಆರಂಭಿಸಿತು. ಗಾಂಧಿ ವಿಚಾರಧಾರೆಗಳನ್ನು ಗಾಂಧಿ ಮರಣಿಸಿದಾಗಲೇ ಬಿಟ್ಟಿತು. ಬಳಿಕ ಗಾಂಧಿ ಹೆಸರು ಮತ್ತು ಗಾಂಧಿ ಟೋಪಿಯನ್ನು ಇಟ್ಟುಕೊಂಡು ಅವರು ಊರಿನವರಿಗೆಲ್ಲಾ ಟೋಪಿ ಹಾಕಿದರು. ಕಳೆದ ಚುನಾವಣೆಯಲ್ಲಿ 40ಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಗೆಲ್ಲುವ ಮೂಲಕ ಲೋಕಸಭೆಯಲ್ಲಿ ಬದುಕುವುದಕ್ಕೂ ನಾಲಾಯಕ್‌ ಆದ ಪಕ್ಷ ಆಯಿತು. ಕಾಂಗ್ರೆಸ್‌ ಅಧಿನಾಯಕ ರಾಹುಲ್‌ ಗಾಂಧಿ ಅವರಿಂದಾಗಿ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ. ಗಾಂಧಿ ಕಂಡಂತಹ ದೇಶದ ಚಿಂತನೆಗಳನ್ನು ಬದಲಾಯಿಸಿದ್ದೇ ಪಕ್ಷದ ಈಗಿನ ಸ್ಥಿತಿಗೆ ಕಾರಣ’ ಎಂದು ಅವರು ಲೇವಡಿ ಮಾಡಿದರು.

‘ಸಿಎಎ ಕಾನೂನು ಜಾರಿ ವೇಳೆ ದೇಶದಾದ್ಯಂತ ಪ್ರತಿಭಟನೆ ಮಾಡಿತು, ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್‌ ಕೈವಾಡವಿತ್ತು, ದೇಶಕ್ಕೆ ಬೆಂಕಿ ಇಡುವ ಪ್ರವೃತ್ತಿಯನ್ನು ಮಾಡುತ್ತಾ ಬಂದ ಕಾಂಗ್ರೆಸ್‌ ಈಗ ಗೂಂಡಾಗಿರಿ ಪ್ರವೃತ್ತಿ ಆರಂಭಿಸಿದೆ. ದೇಶ ನಾಚುವಂತಹ ಕೆಲಸವನ್ನು ಕಾಂಗ್ರೆಸ್‌ನವರು ಮೊನ್ನೆ ವಿಧಾನ ಪರಿಷತ್‌ನಲ್ಲಿ ಮಾಡಿದ್ದಾರೆ. ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್‌ನವರು ದೇಶದ ಕ್ಷಮೆ ಕೇಳಬೇಕು. ಘಟನೆಗೆ ಕಾರಣರಾದವರನ್ನು ಪಕ್ಷದಿಂದ ಹೊರಹಾಕಬೇಕು’ ಎಂದು ಕಿಡಿಕಾರಿದರು.

‘ಪಕ್ಷದ ಕಚೇರಿ ಕಟ್ಟಡ ದೇವಾಲಯದಷ್ಟೇ ಪವಿತ್ರ. ಕಾರ್ಯಕರ್ತರ ಪ್ರೇರಣಾ ಕೇಂದ್ರ. ಇದು ವಿಚಾರ, ಸಿದ್ಧಾಂತಗಳನ್ನು ಗಟ್ಟಿಗೊಳಿಸುವ ತಾಣ. ಬಿಜೆಪಿ ಹಣ ಹಾಗೂ ಶಕ್ತಿಯಿಂದ ಬೆಳೆದು ಬಂದಿಲ್ಲ. ಕಾರ್ಯಕರ್ತರ ಶ್ರಮ ಮತ್ತು ಒಳ್ಳೆತನದಿಂದ ಬೆಳೆದಿದೆ. ನಮ್ಮ ಪಕ್ಷದಲ್ಲಿ ಒಬ್ಬ ಕಾರ್ಯಕರ್ತ ಪಕ್ಷಕ್ಕಾಗಿ ಏನು ಮಾಡಿದ್ದಾನೆ, ಸಂಘಟನೆಗಾಗಿ ಎಷ್ಟು ದುಡಿದಿದ್ದಾನೆ ಎಂಬುದನ್ನು ನೋಡಿ ಜವಾಬ್ದಾರಿ, ಸ್ಥಾನಮಾನ ನೀಡುತ್ತದೆ’ ಎಂದು ಹೇಳಿದರು.

‘ಈಗಾಗಲೇ 11 ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಾಲಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಐದು ಜಿಲ್ಲೆಗಳಲ್ಲಿ ದಿನಾಂಕ ನಿಗದಿಯಾಗಿದೆ. 11 ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಶಿಲಾನ್ಯಾಸ ಮಾಡುವ ಯೋಜನೆ ಸಿದ್ಧಪಡಿಸಲಾಗಿದೆ. ಜಿಲ್ಲೆಯಲ್ಲಿ ಕಾರ್ಯಾಲಯ ನಿರ್ಮಿಸುವ ಜತೆಗೆ ಮಂಡಲದ ಮಟ್ಟದಲ್ಲೂ ಸುಸಜ್ಜಿತ ಕಟ್ಟಡ ನಿರ್ಮಿಸುವ ಯೋಚನೆ ಇದೆ’ ಎಂದು ಅವರು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯರಾದ ಎಸ್‌.ವಿ.ಸಂಕನೂರ, ಪ್ರದೀಪ್‌ ಶೆಟ್ಟರ್‌, ಸಂಸದರಾದ ಪಿ.ಸಿ.ಗದ್ದಿಗೌಡರ್‌, ಶಿವಕುಮಾರ ಉದಾಸಿ, ಸಚಿವ ಸಿ.ಸಿ.ಪಾಟೀಲ ಮಾತನಾಡಿದರು.

ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್‌ ಬನ್ಸಾಲಿ, ಶಾಸಕ ಅರವಿಂದ ಬೆಲ್ಲದ್‌, ಬಿಜೆಪಿ ಮುಖಂಡರಾದ ಅನಿಲ ಮೆಣಸಿನಕಾಯಿ, ರಾಜು ಕುರಡಗಿ, ಸಂಗಮೇಶ ದುಂದೂರ, ಮಹೇಶ್‌ ತೆಂಗಿನಕಾಯಿ ಇದ್ದರು.

ಇದೇ ಸಂದರ್ಭದಲ್ಲಿ ಸಚಿವರು, ಶಾಸಕರು, ಸಂಸದರು ಹಾಗೂ ಕಾರ್ಯಕರ್ತರು ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದರು.

‘ಗೂಂಡಾಗಿರಿ ರಾಜಕಾರಣ ಮುಗಿಯಿತು’

‘ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಶೇ 80ರಷ್ಟು ಬಿಜೆಪಿ ಕಾರ್ಯಕರ್ತರು ಆಯ್ಕೆ ಆಗಿ ಬರುವ ವಿಶ್ವಾಸ ಇದೆ. ಈ ಹಿನ್ನೆಯಲ್ಲಿ ಈಗ ಗದಗ ಜಿಲ್ಲೆಯಲ್ಲೂ ಕಾಂಗ್ರೆಸ್‌ನವರು ಗೂಂಡಾಗಿರಿ ಪ್ರಾರಂಭಿಸಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ಹೋರಾಟ ಮಾಡಿ ಬೆಳೆದವನು ನಾನು, ತಾಕತ್‌ ಇದ್ದರೆ ನಮ್ಮ ಒಬ್ಬನೇ ಒಬ್ಬ ಕಾರ್ಯಕರ್ತನನ್ನು ಮುಟ್ಟಿ ನೋಡಲಿ. ಬಿಜೆಪಿ ತಕ್ಕ ಉತ್ತರ ನೀಡಲಿದೆ’ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸವಾಲೆಸೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.