ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: 300 ವರ್ಷಗಳ ಪುರಾತನ ದೇವಾಲಯ

ಮುಂಡರಗಿ: ಭಕ್ತರನ್ನು ಕಾಯುವ ವಿಠಲ ರಖುಮಾಯಿ
Published 5 ನವೆಂಬರ್ 2023, 5:21 IST
Last Updated 5 ನವೆಂಬರ್ 2023, 5:21 IST
ಅಕ್ಷರ ಗಾತ್ರ

ಮುಂಡರಗಿ: ಹಳೆಯ ಮುಂಡರಗಿಯ ಪ್ರಮುಖ ಭಾಗವೆಂದು ಕರೆಯಲ್ಪಡುತ್ತಿರುವ ಪಟ್ಟಣದ ಬ್ರಾಹ್ಮಣರ ಓಣಿಯಲ್ಲಿರುವ ವಿಠಲ ರಖುಮಾಯಿ ದೇವಸ್ಥಾನವು ಪಟ್ಟಣದ ಪುರಾತನ ದೇವಸ್ಥಾನವಾಗಿದೆ. ಓಣಿಯಲ್ಲಿರುವ ಬ್ರಾಹ್ಮಣರ ಜೊತೆಗೆ ಇನ್ನುಳಿದ ಎಲ್ಲ ಜಾತಿಯ ಜನರೂ ಶ್ರದ್ಧಾ, ಭಕ್ತಿಯಿಂದ ವಿಠಲ ರಖುಮಾಯಿಗೆ ನಡೆದುಕೊಳ್ಳುತ್ತಿದ್ದಾರೆ.

ಸುಮಾರು 300 ವರ್ಷಗಳ ಹಿಂದೆ ಸಿಂಪಿಗರ ಮಹಿಳೆಯೊಬ್ಬರ ನೆರವಿನಿಂದ ನಿರ್ಮಿಸಿದ್ದೆಂದು ಹೇಳಲಾಗುತ್ತಿರುವ ವಿಠಲ ರಖುಮಾಯಿ ದೇವಸ್ಥಾನವು ಉತ್ತರಾಭಿಮುಖವಾಗಿದ್ದು, ಅದನ್ನು ಸಂಪೂರ್ಣವಾಗಿ ಬಿಳಿ ಕಲ್ಲಿನಿಂದ ನಿರ್ಮಿಸಲಾಗಿದೆ.

ಗರ್ಭಗುಡಿಯಲ್ಲಿ ಸುಂದರವಾದ ವಿಠಲ ರಖುಮಾಯಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿಯ ಎಡಭಾಗದಲ್ಲಿ ಆಂಜನೇಯನ ಮೂರ್ತಿ ಇದೆ. ಗರ್ಭಗುಡಿಯ ಬಲ ಭಾಗದಲ್ಲಿ ಈಶ್ವರ (ಲಿಂಗ) ಹಾಗೂ ಅದರ ಮುಂದೆ ನಂದಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.
2005ರಲ್ಲಿ ಶಿಥಿಲಗೊಂಡಿದ್ದ ದೇವಸ್ಥಾನವನ್ನು ಜಿರ್ಣೋದ್ಧಾರಗೊಳಿಸಲಾಗಿದೆ. ದೇವಸ್ಥಾನವು ಜಿರ್ಣೋದ್ಧಾರಗೊಂಡ ನಂತರ ನವೆಂಬರ್ 2005ರಲ್ಲಿ ವಿಠಲ ಹಾಗೂ ರಖುಮಾಯಿ ಮೂರ್ತಿಗಳ ಮುಂದೆ ಉತ್ತರಾಧಿ ಮಠದ ಸತ್ಯಾರ್ಥತೀರ್ಥ ಸ್ವಾಮೀಜಿ ಅವರ ಅಮೃತ ಹಸ್ತದಿಂದ ರಾಯರ ಬೃಂದಾವನ್ನು ಸ್ಥಾಪಿಸಲಾಯಿತು. 

ಗರ್ಭಗುಡಿಯ ಮುಂದೆ ವಿಶಾಲವಾದ ಪ್ರಾಂಗಣವಿದ್ದು, ನಿತ್ಯ ವಿವಿಧ ಧಾರ್ಮಿಕ ಅಚರಣೆಗಳು, ಭಜನೆ ಮೊದಲಾದ ಕಾರ್ಯಕ್ರಮಗಳು ಜರುಗುತ್ತವೆ. ಸಂಜೀವಾಚಾರ್ಯ ಮುಂಡರಗಿ ಅವರು ನಿತ್ಯ ದೇವಸ್ಥಾನದ ಪೂಜೆ, ಪುನಸ್ಕಾರಗಳನ್ನು ನೆರವೇರಿಸುತ್ತಾರೆ.

ದೇವಸ್ಥಾನದ ಹಾಗೂ ದೇವಸ್ಥಾನದ ಅಧೀನದಲ್ಲಿ ನಡೆಯುವ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆಗಾಗಿ ಶ್ರೀವಿಠೋಬ ದೇವಸ್ಥಾನ ಕಮಿಟಿ ರಚಿಸಲಾಗಿದೆ. ನಿಯಮಾನುಸಾರ ಕಾಲಕಾಲಕ್ಕೆ ಸಮಿತಿಯ ಆಡಳಿತ ಮಂಡಳಿಯು ಬದಲಾಗುತ್ತದೆ.
ದೇವಸ್ಥಾನದ ಹಿಂಭಾಗದಲ್ಲಿ ಕಿರು ಸಭಾ ಭವನ ನಿರ್ಮಿಸಲಾಗಿದ್ದು, ಅಲ್ಲಿ ನಿಯಮಿತವಾಗಿ ವಿವಾಹ ಹಾಗೂ ಮತ್ತಿತರ ಸಭೆ, ಸಮಾರಂಭ ಮೊದಲಾದ ಕಾರ್ಯಕ್ರಮಗಳು ಜರುಗುತ್ತವೆ.

ಶ್ರಾವಣ ಮಾಸದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಿಂದ ರಾಘವೇಂದ್ರರ ಆರಾಧನೆ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ವಿಠಲ ರಖುಮಾಯಿಗೆ ಸಂಬಂಧಿಸಿದ ಹಾಲು, ಮೊಸರಿನ ಗಡಿಗೆ ಒಡೆಯುವ ಗೋಪಾಳ ಕಾವಲಿ ಕಾರ್ಯಕ್ರಮ ನಡೆಯುತ್ತದೆ. ಮದ್ವನವಮಿ, ಆಷಾಢ ಏಕಾದಶಿ ಸೇರಿದಂತೆ ವರ್ಷದುದ್ದಕ್ಕೂ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಜರುಗುತ್ತವೆ. ಎಲ್ಲ ಕಾರ್ಯಕ್ರಮಗಳಿಗೆ ಎಲ್ಲ ಜನರಿಗೂ ಮುಕ್ತ ಪ್ರವೇಶವಿರುತ್ತದೆ. ದೇವಸ್ಥಾನದಲ್ಲಿ ರುಕ್ಮಿಣಿ ಮಹಿಳಾ ಭಜನಾ ಮಂಡಳಿಯ ಕಾರ್ಯಕರ್ತೆಯರಿಂದ ನಿತ್ಯ ಭಜನೆ ನಡೆಯುತ್ತದೆ.

ದೇವಸ್ಥಾನದ ಗರ್ಭಗುಡಿಯಲ್ಲಿರುವ ವಿಠಲ ರಖುಮಾಯಿ ಮೂರ್ತಿಗಳು ಹಾಗೂ ಮಧ್ಯದಲ್ಲಿರುವುದು ಬೃಂದಾವನ
ದೇವಸ್ಥಾನದ ಗರ್ಭಗುಡಿಯಲ್ಲಿರುವ ವಿಠಲ ರಖುಮಾಯಿ ಮೂರ್ತಿಗಳು ಹಾಗೂ ಮಧ್ಯದಲ್ಲಿರುವುದು ಬೃಂದಾವನ

ಶ್ರೀವಿಠೋಬ ದೇವಸ್ಥಾನ ಕಮಿಟಿಯ ಕಾರ್ಯಕರ್ತರು ಭಕ್ತರ ನೆರವಿನಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರ ನೆರವು ನೀಡಬೇಕು

-ಸತೀಶ ಹುಯಿಲಗೋಳ ಮುಖಂಡ ದೇವಸ್ಥಾನ ಕಮಿಟಿ

ಇಷ್ಟಾರ್ಥ ಈಡೇರಿಸುವ ಆಂಜನೇಯ ಸಾಮಾನ್ಯವಾಗಿ ಆಂಜನೇಯನ ಮೂರ್ತಿಗಳನ್ನು ದಕ್ಷಿಣಾಭಿಮುಖವಾಗಿ ಸ್ಥಾಪಿಸಲಾಗುತ್ತದೆ. ಆದರೆ ವಿಠಲ ರಖುಮಾಯಿ ದೇವಸ್ಥಾನದಲ್ಲಿರುವ ಆಂಜನೇಯ ಮೂರ್ತಿಯನ್ನು ಉತ್ತರಾಭಿಮುಖವಾಗಿ ಸ್ಥಾಪಿಸಲಾಗಿದೆ. ಇದೊಂದು ವಿಶೇಷವಾದ ಆಂಜನೇಯ ಮೂರ್ತಿಯಾಗಿದ್ದು ಶ್ರದ್ಧೆ ಭಕ್ತಿಯಿಂದ ಪೂಜಿಸುವವರ ಇಷ್ಟಾರ್ಥಗಳನ್ನು ಆಂಜನೇಯ ಈಡೇರಿಸುತ್ತಾನೆ ಎಂಬ ನಂಬಿಕೆ ಈ ಭಾಗದ ಜನರಲ್ಲಿ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT