ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತಾಳ ಕಂಡ ಈರುಳ್ಳಿ ಬೆಲೆ;ರೈತ ಕಂಗಾಲು

ಕಳೆದ ವರ್ಷ ಕ್ವಿಂಟಲ್‌ಗೆ ₹3 ಸಾವಿರಕ್ಕೆ ಮಾರಾಟ; ಈಗ ಬೆಲೆ ₹800
Last Updated 9 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆಯಲಾದ ಈರುಳ್ಳಿ ಮಾರುಕಟ್ಟೆಗೆ ಆವಕವಾಗುತ್ತಿದ್ದು, ಬೆಲೆ ಕುಸಿತದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆ ಪ್ರತಿ ಕ್ವಿಂಟಲ್‌ಗೆ ₹2,200ರಷ್ಟು ಕುಸಿದಿದ್ದು, ಬೆಳೆಗಾರರ ಕಣ್ಣಲ್ಲಿ ನೀರು ಬರುವಂತ ಸ್ಥಿತಿ ನಿರ್ಮಾಣವಾಗಿದೆ.

ಸದ್ಯ ರಫ್ತು ಗುಣಮಟ್ಟದ ಈರುಳ್ಳಿಗೆ ಮಾತ್ರ ಕ್ವಿಂಟಲ್‌ಗೆ ಗರಿಷ್ಠ ₹800 ಧಾರಣೆ ಇದೆ.ಸಾಮಾನ್ಯ ದರ್ಜೆಯ ಈರುಳ್ಳಿಯನ್ನು ಎಪಿಎಂಸಿ ವರ್ತಕರು ₹200ರಿಂದ ₹500ಕ್ಕೆ ಖರೀದಿಸುತ್ತಿದ್ದು, ರೈತರ ಕೈಗೆ ಬೆಳೆಗೆ ಖರ್ಚು ಮಾಡಿದ ಹಣವೂ ಬಾರದಂತಾಗಿದೆ.

ಕಳೆದ ಮೂರು ವಾರಗಳಲ್ಲಿ ಗದಗ ಎಪಿಎಂಸಿಗೆ ಒಟ್ಟು 13,220 ಕ್ವಿಂಟಲ್‌ನಷ್ಟು ಈರುಳ್ಳಿ ಆವಕವಾಗಿದೆ. ಅ.24ರಂದು ಮಾತ್ರ ಒಂದು ದಿನ ಗರಿಷ್ಠ ಧಾರಣೆ ₹1,200 ದಾಟಿದೆ.

ಕಳೆದ ಬಾರಿ ಮುಂಗಾರಿನಲ್ಲಿ ಈರುಳ್ಳಿ ಬೆಳೆದ ಜಿಲ್ಲೆಯ ರೈತರಿಗೆ ಬಂಪರ್‌ ಬೆಲೆ ಲಭಿಸಿತ್ತು. ಗದಗ ಎಪಿಎಂಸಿಯಲ್ಲಿ ಪ್ರತಿ ಕ್ವಿಂಟಲ್‌ ಈರುಳ್ಳಿ ಸರಾಸರಿ ₹2,800ರಿಂದ ₹3,000ಕ್ಕೆ ಮಾರಾಟವಾಗಿತ್ತು. ಉತ್ತಮ ಧಾರಣೆ ಲಭಿಸಿದ ಹಿನ್ನೆಲೆಯಲ್ಲಿ ಈ ಬಾರಿಯೂ ಹೆಚ್ಚಿನ ರೈತರು ಮುಂಗಾರಿನಲ್ಲಿ ಈರುಳ್ಳಿ ಬಿತ್ತನೆಗೆ ಮುಂದಾಗಿದ್ದರು. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ಇಳುವರಿ ಗಣನೀಯವಾಗಿ ತಗ್ಗಿದೆ. ಈರುಳ್ಳಿ ಗುಣಮಟ್ಟವೂ (ಗಡ್ಡೆಗಳ ಗಾತ್ರ) ಕುಸಿದಿರುವುದರಿಂದ ವರ್ತಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

‘ಮುಂಗಾರಿನಲ್ಲಿ ಮತ್ತು ನೀರಾವರಿ ಸೌಲಭ್ಯ ಹೊಂದಿರುವ ಜಮೀನಿನಲ್ಲಿ ಬೆಳೆಯಲಾದ ಈರುಳ್ಳಿ ಈಗ ಮಾರುಕಟ್ಟೆಗೆ ಬರುತ್ತಿದೆ.ಈ ಬಾರಿ ಗುಣಮಟ್ಟದ ಗಡ್ಡೆಗಳು ಬರುತ್ತಿಲ್ಲ.ಕ್ವಿಂಟಲ್‌ಗೆ ಸರಾಸರಿ ₹500ರಿಂದ ₹600ಕ್ಕೆ ಖರೀದಿಸುತ್ತಿದ್ದೇವೆ’ ಎಂದು ಎಪಿಎಂಸಿ ವರ್ತಕ ಎಂ.ಎಂ ಕನವಳ್ಳಿ ಹೇಳಿದರು.

‘ಒಂದು ಎಕರೆಗೆ 12 ಚೀಲ ಈರುಳ್ಳಿ ಬಂದಿದೆ. ಬೀಜ, ಗೊಬ್ಬರ, ಆಳಿನ ಕೂಲಿ, ಬಾಡಿಗೆ ಸೇರಿ ₹20 ಸಾವಿರ ಖರ್ಚಾಗಿದೆ. ಬೆಲೆ ಕುಸಿತದಿಂದ ಹಾಕಿದ ಬಂಡವಾಳವೂ ಕೈಗೆ ಬರುತ್ತಿಲ್ಲ’ ಗದಗ ಎಪಿಎಂಸಿಗೆ ಈರುಳ್ಳಿ ಮಾರಾಟ ಮಾಡಲು ಬಂದಿದ್ದ, ತಾಲ್ಲೂಕಿನ ಹೊಂಬಳ ಗ್ರಾಮದ ರೈತ ಸಿದ್ದಪ್ಪ ಮಾಳಗಿಮನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT