ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ರಣ ನಗರಿಯ ಜತೆ ಮರೆಯದ ನಂಟು

ತಮ್ಮ ಗುರುಗಳ ಪ್ರಥಮ ಪುಣ್ಯಸ್ಮರಣೆಯನ್ನು ಗದುಗಿನಲ್ಲಿ ಮಾಡಿದ್ದ ಶ್ರೀಗಳು
Last Updated 29 ಡಿಸೆಂಬರ್ 2019, 21:30 IST
ಅಕ್ಷರ ಗಾತ್ರ

ಗದಗ: ಪೇಜಾವರ ಶ್ರೀಗಳು ಜಿಲ್ಲೆಯೊಂದಿಗೆ ಅವಿನಾಭಾವ ನಂಟು ಹೊಂದಿದ್ದರು. ಪೇಜಾವರ ಮಠದ ಮುಖವಾಣಿಯಾಗಿರುವ ತತ್ವವಾದ ಮಾಸಪತ್ರಿಕೆಯ ಮುದ್ರಣವು, ಆರಂಭದ ಹಲವು ವರ್ಷಗಳ ಕಾಲ ಗದುಗಿನಲ್ಲೇ ನಡೆಯುತ್ತಿತ್ತು. ದಿ.ಜಯತೀರ್ಥಾಚಾರ್ಯ ಮಳಗಿ ಎಂಬುವರು ಅದರ ಕರಡು ತಿದ್ದುತ್ತಿದ್ದರು.

ಮಧ್ವಾಚಾರ್ಯರು ತಾಳೆಗರಿಯಲ್ಲಿ ಬರೆದಿದ್ದ, ಹೃಷಿಕೇಶ ತೀರ್ಥರು ಸಂಪಾದಿಸಿದ ಸಂಸ್ಕೃತದಲ್ಲಿದ್ದ ‘ಸರ್ವ ಮೂಲ ಗ್ರಂಥ’ದ ಕನ್ನಡ ಅನುವಾದ ಗದುಗಿನಲ್ಲೇ ಮುದ್ರಣಗೊಂಡಿರುವುದು ಮತ್ತೊಂದು ವಿಶೇಷ.

‘ಭಂಡಾರಕೆರೆ ಮಠದ ವಿದ್ಯಾಮಾನ್ಯರು ಪೇಜಾವರ ಶ್ರೀಗಳ ಗುರುಗಳಾಗಿದ್ದರು. ಅವರ ನಿಧನದ ನಂತರ, ಅವರ ಪ್ರಥಮ ಪುಣ್ಯಸ್ಮರಣೆಯನ್ನು ಪೇಜಾವರ ಶ್ರೀಗಳು ಗದುಗಿನಲ್ಲಿ ಮಾಡಿದ್ದರು. ಅಖಿಲ ಭಾರತ ಮಧ್ವಮಹಾಮಂಡಳದ ಅಧ್ಯಕ್ಷರೂ ಆಗಿದ್ದ ಶ್ರೀಗಳು, ಅದರ ಪ್ರಥಮ ವಾರ್ಷಿಕೋತ್ಸವವನ್ನೂ ಗದಗನಲ್ಲೇ ಆಯೋಜಿಸಿದ್ದರು. ಇದು ಅವರಿಗೆ ಗದುಗಿನ ಮೇಲಿದ್ದ ಪ್ರೀತಿಗೆ ಸಾಕ್ಷಿ’ ಎಂದು ಅವರ ಸಮೀಪದ ಒಡನಾಡಿ ಗದುಗಿನ ದುರ್ಗಾ ವಿಹಾರ ಹೋಟೆಲ್‌ ಮಾಲೀಕ ಕೆ.ಸುಧಾಕರ್ ರಾವ್ ಸ್ಮರಿಸಿಕೊಂಡರು.

‘1950ರ ದಶಕದಿಂದಲೇ ಗದುಗಿಗೆ ಬರುತ್ತಿದ್ದ ಪೇಜಾವರ ಶ್ರೀಗಳು, ನಮ್ಮ ಮಾವ, ದುರ್ಗಾವಿಲಾಸ ಮಾಲೀಕ ಕೆ. ನಾರಾಯಣರಾವ್ ಅವರ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದರು. ನಾನು ಗದುಗಿಗೆ ಬಂದು, ನೆಲೆಯೂರಿದ ಬಳಿಕ ನಮ್ಮ ಮನೆಯಲ್ಲಿ ವಾಸ್ತವ್ಯ ಮಾಡಲಾರಂಭಿಸಿದರು. ನಾವು ಮನೆ ಕಟ್ಟುವಾಗ ಅವರಿಗಾಗಿ ಒಂದು ಪ್ರತ್ಯೇಕ ಕೊಠಡಿ ನಿರ್ಮಿಸಿದ್ದೇವೆ. ಅವರು ಗದುಗಿಗೆ ಬಂದಾಗ ಮತ್ತು ಗದಗ ಮಾರ್ಗವಾಗಿ ಯಾವುದೇ ಊರಿಗೆ ತೆರಳುತ್ತಿದ್ದರೂ ನಮ್ಮ ಮನೆಯಲ್ಲಿ ವಾಸ್ತವ್ಯ ಮಾಡಿ, ಬೆಳಿಗ್ಗೆ ತೆರಳುತ್ತಿದ್ದರು’ ಎಂದು ಕೆ.ಸುಧಾಕರ್ ರಾವ್ ನೆನಪಿಸಿಕೊಂಡರು.

‘ಶ್ರೀಗಳು ಬರುವ ಹಿಂದಿನ ದಿನ ಅವರ ಅಡುಗೆ ಭಟ್ಟರು ಬರುತ್ತಿದ್ದರು. ಅದೇ ಅವರ ಬರುವಿಕೆಯ ಸೂಚನೆ.ಅಡುಗೆ ಭಟ್ಟರು ತಾವು ಅಡುಗೆ ಮಾಡಿ, ನಮಗೂ ಬಡಿಸುತ್ತಿದ್ದರು. ಬೆಳಿಗ್ಗೆ ಮತ್ತೆ 5 ಗಂಟೆ ಹೊತ್ತಿಗೆ ತೆರಳುತ್ತಿದ್ದರು. ಗದುಗಿನಲ್ಲಿ ಬ್ರಾಹ್ಮಣರಷ್ಟೇ ಅಲ್ಲ, ಮುಸ್ಲಿಮರು ಸೇರಿ ಎಲ್ಲ ಸಮುದಾಯದವರು ಅವರಿಗೆ ಭಕ್ತರಿದ್ದಾರೆ’ ಎಂದು ಅವರು ಹೇಳಿದರು.

ಪೇಜಾವರ ಶ್ರೀಗಳ 50, 60, 70 ಹಾಗೂ 80ನೇ ವರ್ಧಂತಿ ಉತ್ಸವ ಗದಗನಲ್ಲಿ ಅವರ ಶಿಷ್ಯವರ್ಗ ಆಯೋಜಿಸುತ್ತ ಬಂದಿದೆ. 80ನೇ ವರ್ಧಂತಿ ಮಹೋತ್ಸವದಲ್ಲಿ ಅವರಿಗೆ ಬೆಳ್ಳಿ ತುಲಾಭಾರ ಮಾಡಲಾಗಿತ್ತು.

ಜಿಲ್ಲೆಯಲ್ಲಿ 2009ರಲ್ಲಿ ಭೀಕರ ಬರಗಾಲ ಉಂಟಾದಾಗ, ಪೇಜಾವರ ಶ್ರಿಗಳು ಮಠದಿಂದ ಜನರಿಗೆ ಅಕ್ಕಿ ಮತ್ತು ನರೇಗಲ್‌ ಭಾಗದಲ್ಲಿಲ ಜಾನುವಾರುಗಳಿಗೆ ಮೇವು ಕಳುಹಿಸಿದ್ದರು. ಈ ಭಾಗದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆ ಮೂಲಕ 27 ಆಸರೆ ಮನೆಗಳನ್ನು ನಿರ್ಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT