ನಗರಸಭೆ ಆಡಳಿತದ ವಿರುದ್ಧ ಪ್ರತಿಭಟನೆ ನಾಳೆ

7
ಬಿಜೆಪಿ ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ ಹೇಳಿಕೆ

ನಗರಸಭೆ ಆಡಳಿತದ ವಿರುದ್ಧ ಪ್ರತಿಭಟನೆ ನಾಳೆ

Published:
Updated:

ಶಿರಸಿ: ನಗರಸಭೆ ಆಡಳಿತದಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ, ಜು.4ರಂದು ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದಲ್ಲಿ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಈ ನಡುವೆ ನಳಗಳಿಗೆ ಮೀಟರ್ ಅಳವಡಿಸಲು ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಮುಂದಾಗಿದ್ದಾರೆ. ನೀರಿನ ಮೀಟರ್ ರೀಡಿಂಗ್‌ಗೆ ಹೊರಗುತ್ತಿಗೆ ಸಿಬ್ಬಂದಿ ನೇಮಕಕ್ಕೆ ನಗರಸಭೆ ಮುಂದಾಗಿದೆ. ಈ ಹಿಂದೆ ಬಿಜೆಪಿ ನಗರಸಭೆ ಆಡಳಿತ ನಡೆಸಿದಾಗ, 2000 ಮನೆಗಳಿಗೆ ಮೀಟರ್ ಅಳವಡಿಸಿತ್ತು. ಆ ಮೀಟರ್‌ಗಳು ಏನಾದವು ಎಂಬುದು ಗೊತ್ತಿಲ್ಲ. ಪ್ರಸ್ತುತ ಆಡಳಿತದಲ್ಲಿರುವವರು ಮತ್ತೆ ಹೊಸದಾಗಿ ಮೀಟರ್ ಅಳವಡಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಕಳಪೆ ಗುಣಮಟ್ಟದ ಮೀಟರ್ ಅಳವಡಿಕೆ, ಫಾರಂ ನಂಬರ್ 3 ಸಮಸ್ಯೆ, ಖಾತಾ ಬದಲಾವಣೆ ಗೊಂದಲ, ಮಳೆಗಾಲ ಪೂರ್ವಭಾವಿ ನಡೆಯದ ಕಾಮಗಾರಿ ಕ್ರಮ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅತಿಕ್ರಮಣದಾರರಿಂದ ಕರ ತುಂಬಿಸಿಕೊಳ್ಳುವ ನಗರಸಭೆ ಅವರಿಗೆ ನೀರು ಕೊಡುತ್ತಿಲ್ಲ ಎಂದು ಆರೋಪಿಸಿದರು.

ಪ್ರಸ್ತುತ ಅಧಿಕಾರದಲ್ಲಿರುವ ನಗರಸಭೆ ಅಧ್ಯಕ್ಷರಿಗೆ ಬಿಜೆಪಿ ಬೆಂಬಲ ನೀಡಿತ್ತು. ಈಗ ಈ ಬೆಂಬಲವನ್ನು ವಾಪಸ್ ಪಡೆದುಕೊಂಡಿದೆ. ಅವರಿಂದ ನಿರೀಕ್ಷಿತ ಕೆಲಸ ಆಗಿಲ್ಲವಾದ ಕಾರಣ ಅವಿಶ್ವಾಸ ಮಂಡಿಸುವ ಯೋಚನೆ ಮಾಡಲಾಗಿತ್ತು. ಆದರೆ, ನಿಯಮದಂತೆ ಅವಧಿ ಮುಗಿಯುವ ಆರು ತಿಂಗಳು ಮೊದಲು ಈ ಪ್ರಕ್ರಿಯೆ ಮಾಡಬೇಕು. ಈಗ ಅವಧಿ ಮುಗಿಯಲು ಬಂದಿರುವುದರಿಂದ ಅವಿಶ್ವಾಸ ಮಂಡಿಸಲು ಸಾಧ್ಯವಿಲ್ಲವೆಂದು ವಕೀಲರು ಸಲಹೆ ನೀಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ.ಹೆಗಡೆ ಮಾತನಾಡಿ, ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಕೇಂದ್ರ ಸಚಿವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನೀಯ ಎಂದರು. ಪಕ್ಷ ಪ್ರಮುಖರಾದ ರಿತೇಶ ಕೆ, ನಂದನಸಾಗರ, ರಮಾಕಾಂತ ಭಟ್ಟ, ವೀಣಾ ಶೆಟ್ಟಿ, ಹರೀಶ ಪಾಲೇಕರ, ರವಿ ಚಂದಾವರ, ರಾಕೇಶ ತಿರುಮಲೆ, ವಿಜು ಭಟ್ಟ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !