ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಕೃಷಿಗೆ ತೋಂಟದ ಶ್ರೀ ಸ್ಪೂರ್ತಿ: ರಾಮಣ್ಣ ಬ್ಯಾಟಿ

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ರಾಮಣ್ಣ ಬ್ಯಾಟಿ ಅಭಿಮತ
Last Updated 29 ಅಕ್ಟೋಬರ್ 2020, 3:48 IST
ಅಕ್ಷರ ಗಾತ್ರ

ಗದಗ: ಅವರು ಅನಕ್ಷರಸ್ಥರು. ಆದರೆ, ಭಾಮಿನಿ ಷಟ್ಪದಿ ಅವರ ಹೃದಯವೆಂಬ ನಾಲಗೆಯ ಮೇಲೆ ನವಿಲಿನಂತೆ ನರ್ತಿಸುತ್ತದೆ. ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಲಭಿಸಿದ್ದರಿಂದ ಪ್ರಶಸ್ತಿಯ ಹಿರಿಮೆ ಹೆಚ್ಚಿದೆ ಎಂದು ಗದಗ–ಬೆಟಗೇರಿ ಅವಳಿ ನಗರದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

ಹೌದು, ಇಂತಹ ಅದ್ಭುತ ಪ್ರತಿಭೆ ಹೊಂದಿರುವವರು ಸಾಹಿತಿ, ಕವಿ ರಾಮಣ್ಣ ಬ್ಯಾಟಿ. ಅವರಿಗೆ ಓದು, ಬರಹ ಗೊತ್ತಿಲ್ಲದಿದ್ದರೂ ಕನ್ನಡ ಸಾರಸ್ವತಲೋಕದಲ್ಲಿ ಬಲಿಷ್ಟವಾದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಭಾಮಿನಿ ಷಟ್ಪದಿಯಲ್ಲಿ ಅವರು ಈವರೆಗೆ 30ರಿಂದ 35 ಸಾವಿರ ಪದ್ಯಗಳನ್ನು ಬರೆದಿದ್ದು, 20ಕ್ಕೂ ಹೆಚ್ಚು ಗ್ರಂಥಗಳನ್ನು ಭಾಮಿನಿಯಲ್ಲೇ ರಚಿಸಿದ್ದಾರೆ. ‘ಆಶುಕವಿ’ ಎಂದೇ ಗುರುತಿಸಿಕೊಂಡಿರುವ ರಾಮಣ್ಣ ಬ್ಯಾಟಿ ಅವರು ಲಿಂಗೈಕ್ಯತೋಂಟದ ಸಿದ್ಧಲಿಂಗ ಶ್ರೀಗಳ ಸಲಹೆಮೇರೆಗೆ ‘ಅಂಬೇಡ್ಕರ್ ಪುರಾಣ’ ರಚಿಸಿ ಗಮನ ಸೆಳೆದಿದ್ದಾರೆ.

‘ಬಡತನದ ಬವಣೆಯಲ್ಲಿ ಬೆಂದು,ನಿರಕ್ಷರಿಯಾಗಿದ್ದರೂ ಅಕ್ಷರ ಲೋಕದಲ್ಲಿನ ನನ್ನ ಸಾಧನೆ ಗುರುತಿಸಿ ಸರ್ಕಾರ ಈ ವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ತುಂಬಾ ಖುಷಿ ನೀಡಿದೆ. ಇದು ನನ್ನ ಕೀರ್ತಿ ಅಲ್ಲ. ಗದಗ– ಬೆಟಗೇರಿ ಅವಳಿ ನಗರಕ್ಕೆ ಸಂದ ಕೀರ್ತಿ’ ಎಂದು ಅವರು ವಿನಮ್ರತೆಯಿಂದ ನುಡಿದರು.

‘ಬಸವ ಪುರಾಣ’, ‘ಇಟಗಿ ಭೀಮಾಂಬಿಕೆ ಪುರಾಣ’, ‘ಶಂಕರಾಚಾರ್ಯರ ಪುರಾಣ’, ಬುದ್ಧ, ಬಸವ, ಸಾವಿತ್ರಿ ಬಾಫುಲೆ, ಬ್ರಹ್ಮಶ್ರೀ ನಾರಾಯಣಗುರು, ಸೇವಾಲಾಲ ಸೇರಿ 20ಕ್ಕೂ ಹೆಚ್ಚು ಪುರಾಣ ಕೃತಿಗಳನ್ನು ಬರೆದಿದ್ದಾರೆ.

‘ಶರಣರ ಚರಿತ್ರೆಗಳು, ಮಹಾತ್ಮೆಗಳು ಸೇರಿ ಒಟ್ಟು 50 ಕೃತಿಗಳನ್ನು ರಚಿಸಿದ್ದೇನೆ. ಇದಕ್ಕೆಲ್ಲಾ ಪ್ರೇರಣೆಯಾದವರು ತೋಂಟದ ಸಿದ್ಧಲಿಂಗ ಶ್ರೀಗಳು.ಅವರ ಪ್ರೇರಣೆ ಇಲ್ಲದಿದ್ದರೆ ನನ್ನೊಳಗೆ ಸಾಧನೆ ಮಾಡುವ ಶಕ್ತಿ ಹರಳುಗಟ್ಟುತ್ತಿರಲಿಲ್ಲ. ತಾಯಿ ಶಾರದೆ ನನ್ನ ಹೃದಯಲ್ಲಿ ಮೂಡಿಸಿದ ಮಾತುಗಳನ್ನು ಅಕ್ಷರ ರೂಪಕ್ಕೆ ಇಳಿಸಲು ನೆರವಾದವರು ಪುತ್ರ ದಾನೇಶ, ಪುತ್ರಿಯರಾದ ಸುನಂದಾ, ಗಾಯತ್ರಿ ಹಾಗೂ ಸಹೃದಯಿಗಳಾದ ಮುಳಗುಂದ ಶಂಕರಪ್ಪ, ರಾಜೇಶ್ವರಿ. ಅವರೆಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು’ ಎಂದು ಹೇಳಿದರು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಮನಿಹಾಳ ಸುರೇಬಾನ ಗ್ರಾಮದವರಾದ ರಾಮಣ್ಣ ಬ್ಯಾಟಿ, ಮಲಪ್ರಭಾ ನದಿಯ ಪ್ರವಾಹಕ್ಕೆ ತತ್ತರಿಸಿ ಅಲ್ಲಿಂದ 50 ವರ್ಷಗಳ ಹಿಂದೆ ಗದಗಕ್ಕೆ ವಲಸೆ ಬಂದರು. ಅವರಿಗೆ ಮೊದಲಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಇತ್ತು. ಇದನ್ನು ಗಮನಿಸಿದ ತೋಟಂದ ಶ್ರೀಗಳು ಅವರ ಸಾಹಿತ್ಯ ಅಭಿರುಚಿಗೆ ಪ್ರೋತ್ಸಾಹ ನೀಡಿದರು. ಈ ವೇಳೆ ಅವರು ತಮ್ಮ ಕಾವ್ಯ ರಚನೆಗೆ ಭಾಮಿನಿ ಷಟ್ಪದಿಯನ್ನು ಆಯ್ಕೆ ಮಾಡಿಕೊಂಡು ಸಾಹಿತ್ಯಕೃಷಿ ಮುಂದುವರಿಸಿದರು.

ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಕೊಡುಗೆ ನೀಡಿದ ರಾಮಣ್ಣ ಬ್ಯಾಟಿ ಅವರು ಈಗ ನಾಲ್ಕು ಸಾವಿರ ಭಾಮಿನಿ ಪದ್ಯಗಳನ್ನು ಒಳಗೊಂಡ ‘ಕರುನಾಡ ರಾಮಾಯಣ’ ಎಂಬ ಕೃತಿ ರಚಿಸುತ್ತಿದ್ದು, ಅದು ಮುಂದಿನ ವರ್ಷ ಬಿಡುಗಡೆ ಆಗಲಿದೆ.

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ಪ್ರಶಸ್ತಿಯ ಗರಿ

‘ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿ ತಂದಿದೆ’ ಎಂದು ಡಾ. ಬಿ.ಎಫ್.ದಂಡಿನ ಹೇಳಿದರು.

‘ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ತುಂಬ ಹಿಂದೆಯೇ ಈ ಪ್ರಶಸ್ತಿ ಲಭಿಸಬೇಕಿತ್ತು. ಆದರೆ, ಸರ್ಕಾರ ತಡವಾಗಿಯಾದರೂ ನನ್ನ ಸೇವೆಯನ್ನು ಗುರುತಿಸಿದ್ದು, ಸಂತೋಷ ಮೂಡಿಸಿದೆ’ ಎಂದು ಹೇಳಿದರು.

ಡಾ. ಬಿ.ಎಫ್.ದಂಡಿನ ಅವರು ರೋಣ ತಾಲ್ಲೂಕಿನ ದ್ಯಾಮುಣಸಿ ಗ್ರಾಮದಲ್ಲಿ ಬಡ ರೈತ ಕುಟುಂಬದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸೂಡಿ ಗ್ರಾಮದಲ್ಲಿ, ರೋಣದ ವಿ.ಎಫ್.ಪಾಟೀಲ ಹೈಸ್ಕೂಲ್‌ನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದರು. ಪದವಿ ಶಿಕ್ಷಣವನ್ನು ಬೆಳಗಾವಿಯ ಆರ್.ಎಲ್.ಎಸ್. ಕಾಲೇಜು ಹಾಗೂ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದುಕೊಂಡರು.

60ರ ದಶಕದಲ್ಲಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಬಡ ಕೂಲಿಕಾರರ ಮಕ್ಕಳಿಗೆ ಶಿಕ್ಷಣ ಗಗನ ಕುಸುಮವಾಗಿತ್ತು. ಅಂತಹ ಸಮಯದಲ್ಲಿ ಸರ್ವರ ಏಳಿಗೆಗೆ ಶಿಕ್ಷಣವೊಂದೇ ಸಿದ್ಧೌಷಧ ಎಂಬುದನ್ನು ಅರಿತ ಡಾ. ಬಿ.ಎಫ್.ದಂಡಿನ ಅವರು ಅಕ್ಷರ, ಅನ್ನ, ಆಶ್ರಯ ದಾಸೋಹದ ಮೂಲಕ ಶಿಕ್ಷಣ ನೀಡುವ ಸಂಕಲ್ಪದೊಂದಿಗೆ ಕನಕದಾಸ ಶಿಕ್ಷಣ ಸಮಿತಿ (ಕೆಎಸ್‌ಎಸ್‌)
ಆರಂಭಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗೆ 60ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. ಅವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ. ವಿವಿಧ ಸಂಘ– ಸಂಸ್ಥೆಗಳು ಪ್ರಶಸ್ತಿ, ಸಮ್ಮಾನ ಮಾಡಿ ಗೌರವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT