ಶುಕ್ರವಾರ, ಮಾರ್ಚ್ 31, 2023
22 °C
ಕೌಶಲ್ಯ ವಿಕಾಸ ಭವನ ಲೋಕಾರ್ಪಣೆಗೊಳಿಸಿ ಸಚಿವ ಕೆ.ಎಸ್‌.ಈಶ್ವರಪ್ಪ ಅಭಿಮತ

ವಿವಿ ಗ್ರಾಮೀಣಾಭಿವೃದ್ಧಿಗೆ ಪ್ರೇರಣೆಯ ತಾಣವಾಗಲಿ: ಕೆ.ಎಸ್‌.ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಮಹಾತ್ಮ ಗಾಂಧೀಜಿ ಗ್ರಾಮೀಣಾಭಿವೃದ್ಧಿ ಬಗ್ಗೆ ಕಂಡ ಕನಸನ್ನು ವ್ಯಕ್ತಿಗತವಾಗಿ ಮುಟ್ಟಿಸುವ ಪ್ರಯತ್ನವನ್ನು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಮಾಡುತ್ತಿದೆ. ಇದರ ಜತೆಗೆ ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಬದುಕಿಗೂ ಅನುಕೂಲ ಮಾಡಿಕೊಡುವ ಪ್ರಯತ್ನವನ್ನು ಇಲಾಖೆ ನಡೆಸಲಿದೆ’ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಗದಗ ನಗರದ ಹೊರವಲಯದ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ನೂತನ ಆವರಣದಲ್ಲಿನ ಕೌಶಲ್ಯ ವಿಕಾಸ ಭವನ, ಅಧ್ಯಯನ ಶಾಲೆ ಹಾಗೂ ವಿದ್ಯಾರ್ಥಿನಿಲಯ ಕಟ್ಟಡಗಳನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯಲ್ಲಿ ಉದ್ಯೋಗ ನೀಡುವ ಸಂಬಂಧ ಸಮಿತಿ ರಚಿಸಿ, ವರದಿ ಕೊಡುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಅಲ್ಲದೇ ಇಲ್ಲಿನ ಬೋಧಕ ಸಿಬ್ಬಂದಿಯನ್ನು ಕಾಯಂ ಮಾಡಲು ಕೂಡ ಕ್ರಮ ವಹಿಸಲಾಗುವುದು’ ಎಂದು ಅವರು ಹೇಳಿದರು.

‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯ ಉಳಿದೆಲ್ಲ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿದ್ದು ಇಲ್ಲಿ ಸಿದ್ಧಾಂತ, ಸಾಮಾಜಿಕ ಜನಜಾಗೃತಿ ಮೂಡಿಸುವುದರ ಜತೆಗೆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುವಂತೆ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು. 

‘ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಪ್ರಸ್ತುತ ಹತ್ತು ಸ್ನಾತಕೋತ್ತರ ಪದವಿಗಳು, ನಾಲ್ಕು ನೂರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ಐದು ಪದವಿಗಳನ್ನು ಅಳವಡಿಸಿಕೊಂಡ ಪ್ರಥಮ ವಿಶ್ವವಿದ್ಯಾಲಯವಾಗಿದೆ’ ಎಂದು ಅವರು ಹೇಳಿದರು.

ಶಾಸಕ ಎಚ್.ಕೆ.ಪಾಟೀಲ ಮಾತನಾಡಿ, ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಶ್ವವಿದ್ಯಾಲಯ ಕೇವಲ ಮೂರು ವರ್ಷದ ಅವಧಿಯೊಳಗೆ ಗ್ರಾಮೀಣಾಭಿವೃದ್ಧಿ ಬಗ್ಗೆ ಆಸಕ್ತಿ ಹೊಂದಿರುವ ಸಂಶೋಧಕರು, ಸಂಘ ಸಂಸ್ಥೆಗಳಿಗೆ ಪವಿತ್ರ ಸ್ಥಳವಾಗಿ ಗುರುತಿಸಿಕೊಂಡಿದೆ. ಆ ನಿಟ್ಟಿನಲ್ಲಿ ನಿರಂತರ ಕೆಲಸಗಳು ಇಲ್ಲಿ ಆಗುತ್ತಿವೆ’ ಎಂದು ಅವರು ಹೇಳಿದರು.

‘ಗದುಗಿನಲ್ಲಿ ನಿರ್ಮಾಣವಾಗಿರುವ ಸಾಬರಮತಿ ಆಶ್ರಮ ಗುಜರಾತ್‌ನ ಸಾಬರಮತಿ ಆಶ್ರಮಕ್ಕಿಂತಲೂ ಹೆಚ್ಚು ಸುಂದರವಾಗಿದೆ. ಗಾಂಧೀಜಿ ಅವರು ಗದುಗಿಗೆ ಭೇಟಿ ನೀಡಿ ನೂರು ವರ್ಷಗಳು ತುಂಬಿದ ದಿನವೇ ಈ ಆಶ್ರಮವನ್ನು ಉದ್ಘಾಟಿಸಿದ್ದು ಅವಿಸ್ಮರಣೀಯ’ ಎಂದು ಅವರು ಹೇಳಿದರು.

ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ ‘ಗಾಂಧೀಜಿಯವರ ವಿಚಾರ ಹಾಗೂ ಕಾರ್ಯಗಳು’ ಕುರಿತಾದ ಡಿಪ್ಲೊಮಾ ಕಾರ್ಯಕ್ರಮ ಹಾಗೂ ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ ‘ಗ್ರಾಮೋದಯ ತ್ರೈಮಾಸಿಕ’ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿದರು.

ಶಾಸಕರಾದ ರಾಮಣ್ಣ ಲಮಾಣಿ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ನಾಗಾವಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹನುಮವ್ವ ಸಿದ್ನೆಕೊಪ್ಪ, ಕಳಸಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಮಣ್ಣ ಅಣ್ಣಿಗೇರಿ, ಅಸುಂಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಅಣ್ಣಿಗೇರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ, ಜಿಲ್ಲಾ ಪಂಚಾಯ್ತಿ ಸಿಇಒ ಭರತ್‌ ಎಸ್., ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್., ಡಾ. ಸುರೇಶ.ನಾಡಗೌಡ್ರ ವೇದಿಕೆಯಲ್ಲಿದ್ದರು.

ಕುಲಸಚಿವ ಬಸವರಾಜ ಎಲ್‌.ಲಕ್ಕಣ್ಣನವರ ಸ್ವಾಗತಿಸಿದರು. ಪ್ರಕಾಶ್‌ ಮಾಚೇನಹಳ್ಳಿ ನಿರೂಪಿಸಿದರು.

ಒಂದು ತಿಂಗಳಲ್ಲಿ ಸಮಸ್ಯೆಗೆ ಪರಿಹಾರ
‘ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಗುರುತಿಸಿದ 353 ಎಕರೆ ಜಮೀನು ಇದೆ. ಆದರೆ, ವಿವಿಯ ಕ್ಯಾಂಪಸ್‍ ನಡುವೆ 20 ಎಕರೆಯಷ್ಟು ಇರುವ ಜಮೀನು ಅಡ್ಡಿಯಾಗಿದ್ದು, ಅದನ್ನು ಮಾತುಕತೆ ಮೂಲಕ ಸಂಬಂಧಿಸಿದ ರೈತರೊಂದಿಗೆ ಚರ್ಚಿಸಿ, ವಿವಿಗೆ ಪಡೆಯಕೊಳ್ಳಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್‌.ಈಶ್ವರಪ್ಪ, ‘ಈ ವಿಚಾರವಾಗಿ ಜಿಲ್ಲಾಧಿಕಾರಿಗಳ ಜತೆಗೆ ಚರ್ಚಿಸಿದ್ದು, ಒಂದು ತಿಂಗಳಲ್ಲಿ ಜಮೀನು ಸಮಸ್ಯೆ ಪರಿಹರಿಸಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು