ಶನಿವಾರ, ಸೆಪ್ಟೆಂಬರ್ 25, 2021
22 °C
ರೇವಣಸಿದ್ದೇಶ್ವರ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ರುದ್ರಣ್ಣ ಗುಳಗುಳಿ

ಕುರಿಗಾಹಿಗಳ ಆದಾಯ ದ್ವಿಗುಣಕ್ಕೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಕುರಿಗಾಹಿಗಳ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಶ್ರೀ ರೇವಣಸಿದ್ದೇಶ್ವರ ರೈತ ಉತ್ಪಾದಕರ ಸಂಘವನ್ನು ಕಂಪನಿ ಕಾಯಿದೆ ಅಡಿ ನೋಂದಣಿ ಮಾಡಲಾಗಿದೆ’ ಎಂದು ಸಂಘದ ಅಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಸಾಕಷ್ಟು ರೈತ ಉತ್ಪಾದಕ ಕಂಪನಿಗಳಿವೆ. ಆದರೆ, ನಮ್ಮದು ನಿರ್ದಿಷ್ಟವಾಗಿ ಕುರಿಗಾಹಿಗಳಿಗೆ ಸಂಬಂಧಿಸಿದ ಕಂಪನಿಯಾಗಿದೆ. ಜಿಲ್ಲೆಯ ಕುರಿಗಾಹಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಸಮಸ್ಯೆ ಬಗೆಹರಿಸಲು ಕಂಪನಿ ನೆರವಾಗಲಿದೆ’ ಎಂದು ಹೇಳಿದರು.

‘ಕುರಿ ಸಾಕಣೆ ಎಂಬುದು ಈಗ ಕುರುಬರಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ಎಲ್ಲ ಸಮುದಾಯದ ಜನರು ಇದರಲ್ಲಿ ಆಸಕ್ತಿ ಹೊಂದಿದ್ದಾರೆ. ಕುರಿಗಾಹಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೌಲಭ್ಯಗಳ ಮಾಹಿತಿ ಒದಗಿಸುವುದು, ದಲ್ಲಾಳಿಗಳಿಂದ ಮೋಸ ನಡೆಯುವುದನ್ನು ತಪ್ಪಿಸಿ, ಕುರಿ ಮಾಲೀಕರಿಗೆ ಹೆಚ್ಚಿನ ಲಾಭ ಆಗುವಂತೆ ನೋಡಿಕೊಳ್ಳುವುದು ಸಂಸ್ಥೆಯ ಉದ್ದೇಶವಾಗಿದೆ’ ಎಂದು ಹೇಳಿದರು.

‘ಕುರಿಗಾರರ ಕುರಿ ಅಥವಾ ಮೇಕೆಗೆ ದಲ್ಲಾಳಿಗಳು ಅವೈಜ್ಞಾನಿಕವಾಗಿ ಬೆಲೆ ಕಟ್ಟಿ ಖರೀದಿಸುತ್ತಾರೆ. ಅದನ್ನು ಮಾರುಕಟ್ಟೆಯಲ್ಲಿ ದ್ವಿಗುಣ ಬೆಲೆಗೆ ಮಾರಿ, ಕುಳಿತಲ್ಲೇ ಲಾಭ ಮಾಡಿಕೊಳ್ಳುತ್ತಾರೆ. ಕುರಿಗಾರರಿಗೆ ಹೆಚ್ಚಿನ ಲಾಭ ಸಿಗುವಂತಾಗಲು ಈ ಕಂಪನಿಯು ಮಧ್ಯವರ್ತಿಯಾಗಿ ಕೆಲಸ ಮಾಡಲಿದೆ. ಜೊತೆಗೆ ಭವಿಷ್ಯದಲ್ಲಿ ಮಾಂಸಕ್ಕೂ ಒಂದು ಬ್ರ್ಯಾಂಡ್ ಮಾಡಿ, ಮಾರಾಟ ಮಾಡುವ  ಚಿಂತನೆ ನಡೆದಿದೆ’ ಎಂದು ಅವರು ಹೇಳಿದರು.

‘2012ರ ಜಾನುವಾರು ಗಣತಿ ಅನ್ವಯ ಜಿಲ್ಲೆಯಲ್ಲಿ 2,59,047 ಕುರಿಗಳು ಹಾಗೂ 1,06,353 ಮೇಕೆಗಳಿವೆ. ಇದರಲ್ಲಿ ಗದಗ ತಾಲ್ಲೂಕಿನಲ್ಲಿ 50 ಸಾವಿರ ಕುರಿ, 25 ಸಾವಿರ ಮೇಕೆ, ನರಗುಂದ ತಾಲ್ಲೂಕಿನಲ್ಲಿ 9997 ಕುರಿ, 8600 ಮೇಕೆಗಳಿವೆ. ಮುಂಡರಗಿಯಲ್ಲಿ ಶೇ 22, ರೋಣದಲ್ಲಿ ಶೇ 29 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ ಶೇ 23ರಷ್ಟು ಮೇಕೆ, ಕುರಿಗಳು ಇವೆ. ಅತಿ ಕಡಿಮೆ ಇರುವ ನರಗುಂದ ತಾಲ್ಲೂಕಿನಲ್ಲಿ ಕುರಿ ಸಾಕಣೆಗೆ ಉತ್ತೇಜನೆ ನೀಡಲಾಗುವುದು’ ಎಂದು ಹೇಳಿದರು.

ಕುರಿ ಹಾಲು ರಫ್ತು ಸೇರಿದಂತೆ ಪ್ರಾಣಿವಧೆ ಮಾಡದೆಯೂ ಕುರಿಗಾರರಿಗೆ ಲಾಭ ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಕಂಪನಿಯ ನಿರ್ದೇಶಕರಾದ ಪ್ರಲ್ಹಾದ ಹೊಸಳ್ಳಿ, ನಾಗರಾಜ ಮೆಣಸಗಿ, ಸತ್ಯಪ್ಪ ಲಮಾಣಿ, ಮುತ್ತು ಜಡಿ, ಸೋಮಣ್ಣ ಲಮಾಣಿ, ಸತ್ಯಪ್ಪ ಗಿಡ್ಡಹನುಮಣ್ಣವರ, ಸದಸ್ಯರಾದ ಸೋಮನಗೌಡ್ರ ಪಾಟೀಲ, ಮಲ್ಲೇಶ ಬಿಂಗಿ, ಆನಂದ ಹಂಡಿ, ಸತೀಶ ಗಿಡ್ಡಹನುಮಣ್ಣವರ, ವಿನಯ ಮಾಯಣ್ಣವರ, ಕೃಷ್ಣ ಲಮಾಣಿ, ಸೋಮು ಮೇಟಿ, ಸಂಯೋಜಕ ಶರಣು ಪಾಟೀಲ, ಉಮೇಶ ಯಕ್ಕುಂಬಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.