ಕಮಲ ತೊರೆದು ‘ಕೈ’ ಹಿಡಿದ ಬಿದರೂರ

ಬುಧವಾರ, ಏಪ್ರಿಲ್ 24, 2019
27 °C
ಮುನ್ನೆಲೆಗೆ ಬಂದ ಜಾತಿ ಲೆಕ್ಕಾಚಾರ; ರಂಗೇರಿದ ಚುನಾವಣಾ ಕಣ

ಕಮಲ ತೊರೆದು ‘ಕೈ’ ಹಿಡಿದ ಬಿದರೂರ

Published:
Updated:
Prajavani

ಗದಗ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗದಗ ಮತ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಸಿಗದೇ ಮುನಿಸಿಕೊಂಡು, ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶ್ರೀಶೈಲಪ್ಪ ಬಿದರೂರ ಕಾಂಗ್ರೆಸ್‌ಗೆ ಸೇರ್ಪಡೆ ಆಗುವ ಮೂಲಕ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ತೀವ್ರ ಏಟು ನೀಡಿದ್ದಾರೆ.

ಬಿದರೂರ ಅವರು ಸಮನ್ವಯ ಸಮತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸೋಮವಾರ ಕಾಂಗ್ರೆಸ್‌ ಸೇರಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಮುನ್ನೆಲೆಗೆ ಬರುತ್ತಿರುವ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಬಿದರೂರ ಅವರ ಸೇರ್ಪಡೆ ಕೈ ಬಲ ಹೆಚ್ಚಿಸಿದ್ದು, ಇನ್ನೊಂದೆಡೆ ಇದು ಬಿಜೆಪಿಗೆ ಹಿನ್ನಡೆ ಆಗಲಿದೆ ಎಂಬ ರಾಜಕೀಯ ವಿಶ್ಲೇಷಣೆಗಳು ನಡೆಯುತ್ತಿವೆ.

ಕಾಂಗ್ರೆಸ್‌ ಭದ್ರಕೋಟೆ ಎನಿಸಿದ್ದ ಗದಗ ಕ್ಷೇತ್ರದಲ್ಲಿ 2008ರಲ್ಲಿ ಮೊದಲ ಬಾರಿಗೆ ಕಮಲ ಅರಳಿತ್ತು. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಗುರುತಿಸಿಕೊಂಡು ಅದೇ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದ ಎಚ್‌.ಕೆ.ಪಾಟೀಲ ಅವರನ್ನು ಶ್ರೀಶೈಲಪ್ಪ ಬಿದರೂರ ಅವರು ಸೋಲಿಸಿದ್ದರು. ಆದರೆ, 2013ರಲ್ಲಿ ಅವರು ಎಚ್ಕೆ ವಿರುದ್ಧ ಸೋತು ಠೇವಣಿ ಕಳೆದುಕೊಂಡಿದ್ದರು.

2008ರಲ್ಲಿ ಬಿದರೂರ ಅವರ ಗೆಲುವಿಗೆ ಕ್ಷೇತ್ರದ ಪಂಚಮಸಾಲಿ ಸಮಾಜದ ಮುಖಂಡರು ಶ್ರಮಿಸಿದ್ದರು.ಈಗ ಬಿದರೂರ ಅವರೊಂದಿಗೆ, ಅದೇ ತಂಡವು ಕಾಂಗ್ರೆಸ್‌ಗೆ ಮರಳಿದ್ದು, ಪಕ್ಷಕ್ಕೆ ಬಲ ಬಂದಂತಾಗಿದೆ ಎನ್ನುವುದು ಪಕ್ಷದ ಸ್ಥಳೀಯ ಮುಖಂಡರ ಅಭಿಮತ.

‘ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಬಂದಿರುವ ಶ್ರೀಶೈಲಪ್ಪ ಬಿದರೂರ ಅವರು ಒಂದು ಪ್ರಬಲ ಸಮಾಜದ ಮುಖಂಡರು. ರೋಣ ಮತ್ತು ಗದಗ ಕ್ಷೇತ್ರದಲ್ಲಿ ತಲಾ ಒಂದು ಬಾರಿ ಶಾಸಕರಾದವರು. ಅವರ ಸೇರ್ಪಡೆಯಿಂದ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಆನೆ ಬಲ ಬಂದಂತಾಗಿದೆ’ ಎಂದು ಕಾಂಗ್ರೆಸ್‌ನ ಯುವ ಮುಖಂಡ ಮತ್ತು ಡಿ.ಆರ್‌.ಪಾಟೀಲ ಪುತ್ರ ಸಚಿನ್ ಪಾಟೀಲ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !