ಭಾನುವಾರ, ಸೆಪ್ಟೆಂಬರ್ 26, 2021
28 °C
ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿರುವ ದೊಡ್ಡೂರಿನ ಅಣ್ಣ ತಂಗಿ

ಕುಸ್ತಿಯಲ್ಲಿ ಇವರಿಗೆ ಸರಿಸಾಟಿ ಇಲ್ಲ

ನಾಗರಾಜ ಎಸ್‌. ಹಣಗಿ Updated:

ಅಕ್ಷರ ಗಾತ್ರ : | |

Prajavani

ಲಕ್ಷ್ಮೇಶ್ವರ: ಹಣ ಮತ್ತು ಪ್ರಚಾರದ ಮೋಡಿಯಿಂದ ಬಹುತೇಕ ಪಾಲಕರು ತಮ್ಮ ಮಕ್ಕಳಿಗೆ ಕ್ರಿಕೆಟ್ ತರಬೇತಿ ನೀಡಲು ತೋರಿಸುವಷ್ಟು ಆಸಕ್ತಿಯನ್ನು ಇನ್ನುಳಿದ ಕ್ರೀಡೆಗಳಿಗೆ ತೋರಿಸುತ್ತಿಲ್ಲ. ಆದರೆ, ಇಲ್ಲಿಗೆ ಸಮೀಪದ ದೊಡ್ಡೂರಿನ ಅಣ್ಣ ತಂಗಿ, ದೇಸಿ ಕ್ರೀಡೆ ಕುಸ್ತಿಯಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಇವರ ತಂದೆ ತಾಯಿ,ಮಕ್ಕಳಿಗೆ ಬೆನ್ನುಲುಬಾಗಿ ನಿಂತು ಅವರ ಪ್ರತಿಭೆಗೆ ನೀರೆರೆಯುತ್ತಿದ್ದಾರೆ.

ಗ್ರಾಮದ ನಿವಾಸಿ ಅಮರಪ್ಪ ಗುಡಗುಂಟಿ ಮಾಜಿ ಪೈಲ್ವಾನರು.ಕುಸ್ತಿ ಮೇಲೆ ಪ್ರಾಣವನ್ನೇ ಇಟ್ಟುಕೊಂಡವರು. ಅಮರಪ್ಪ ತಮ್ಮ ಪುತ್ರ ಶರಣಪ್ಪ ಮತ್ತು ಪುತ್ರಿ ಜಯಶ್ರೀ ಅವರನ್ನು ಉತ್ತಮ ಕುಸ್ತಿ ಪಟುಗಳನ್ನಾಗಿ ರೂಪಿಸಿದ್ದಾರೆ. ಚಿಕ್ಕಂದಿನಲ್ಲಿಯೇ ಇಬ್ಬರಿಗೂ ಕುಸ್ತಿಯ ಪಟ್ಟುಗಳನ್ನು ಹೇಳಿಕೊಟ್ಟು, ತರಬೇತಿ ನೀಡಿ ಬೆಳೆಸಿದ್ದಾರೆ. ಪರಿಣಾಮ, ಇಂದು ಇಬ್ಬರೂ ಕುಸ್ತಿಯಲ್ಲಿ ಅನುಪಮ ಸಾಧನೆ ಮಾಡಿದ್ದಾರೆ.

ಪ್ರಾಥಮಿಕ ಶಾಲಾ ಹಂತದಲ್ಲಿಯೇ ಶರಣಪ್ಪ ಜಿಲ್ಲೆಯಾದ್ಯಂತ ನಡೆಯುತ್ತಿದ್ದ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಹಿರಿಯ ಪೈಲ್ವಾನರಿಂದ ಡಾವು, ಪೇಚುಗಳನ್ನು ಕಲಿತು ಪ್ರೌಢ ಶಾಲಾಮಟ್ಟದ ಸ್ಪರ್ಧೆಗಳಲ್ಲಿ ಜಿಲ್ಲಾಮಟ್ಟದಲ್ಲಿ ಸತತ ಪ್ರಥಮ ಸ್ಥಾನ ಪಡೆದಿದ್ದಾರೆ. ಮೈಸೂರು ದಸರಾ,ಗದಗ, ಹಾವೇರಿ, ಧಾರವಾಡ, ಬೆಂಗಳೂರು, ಬಳ್ಳಾರಿ ಜಿಲ್ಲೆಗಳಲ್ಲಿ ನಡೆದ ಕುಸ್ತಿ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಿ ಪ್ರಶಸ್ತಿ ಗಳಿಸಿದ್ದಾರೆ. ಸದ್ಯ ಬಿಎ ಪದವೀಧರ ಆಗಿರುವ ಶರಣಪ್ಪ ನಾಡಿನಲ್ಲಿ ಅಲ್ಲಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾನೆ.

ಸಹೋದರಿ ಜಯಶ್ರೀ ಗುಡಗುಂಟಿ ಸದ್ಯ ಬಿಎ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದು, ಪ್ರಾಥಮಿಕ ಶಾಲಾ ಹಂತದಲ್ಲಿಯೇ ಹಲವು ಪ್ರಶಸ್ತಿಗಳನ್ನು ಜಯಿಸಿದ್ದಾರೆ. 5ನೇ ತರಗತಿಯಿಂದ ಬೆಳಗಾವಿಯ ಕ್ರೀಡಾ ಹಾಸ್ಟೆಲ್‍ ಸೇರಿದ ಜಯಶ್ರೀ, ಅಲ್ಲಿ ಕುಸ್ತಿಯ ಹಲವು ಪಟ್ಟುಗಳನ್ನು ಕಲಿತುಕೊಂಡರು.

ಭಾರತ ಕುಸ್ತಿ ಪ್ರತಿಷ್ಠಾನದಿಂದ ಪಟ್ನಾ, ಉತ್ತರ ಪ್ರದೇಶದ ನಂದಿನಿನಗರ, ರಾಂಚಿಯಲ್ಲಿ ನಡೆದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ. 2010ರಲ್ಲಿ ಪಿಯುಸಿ ಓದುತ್ತಿರುವಾಗ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ರಾಜ್ಯದ ಹೆಸರನ್ನು ಎತ್ತಿ ಹಿಡಿದಿದ್ದಾರೆ.

‘ಕುಸ್ತಿಯಲ್ಲಿ ಮಗಳಿಗೆ ನಾನೇ ಮೊದಲ ಗುರು. ನಂತರ ಗದಗನ ಶರಣಪ್ಪ ಬೇಲೇರಿ, ದೇವಪ್ಪ ಗಡೇದ ಹಾಗೂ ಹಿರಿಯ ಪೈಲ್ವಾನ ಸಿದ್ದಪ್ಪ ದುರ್ಗಣ್ಣವರ ಅವರ ಹತ್ತಿರ ಕುಸ್ತಿಯ ವಿವಿಧ ಪಟ್ಟುಗಳನ್ನು ಕಲಿತುಕೊಂಡಿದ್ದಾಳೆ’ ಎಂದು ಜಯಶ್ರೀ ತಂದೆ ಅಮರಪ್ಪ ಗುಡಗುಂಟಿ ಸಂತಸದಿಂದ ಹೇಳಿದರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು